ಜಲ ಸಂರಕ್ಷಣೆಗೆ ನೂತನ ಹೆಜ್ಜೆ: ಕಲಬುರಗಿಯಲ್ಲಿ 10 ಮಾದರಿ ಹಳ್ಳಿಗಳ ರೂಪಣೆ ಸಚಿವ ಪ್ರಿಯಾಂಕ್ ಖರ್ಗೆ

ಜಲ ಸಂರಕ್ಷಣೆಗೆ ನೂತನ ಹೆಜ್ಜೆ: ಕಲಬುರಗಿಯಲ್ಲಿ 10 ಮಾದರಿ ಹಳ್ಳಿಗಳ ರೂಪಣೆ
ಕಲಬುರಗಿ: ಜಲ ಸಂರಕ್ಷಣೆಗೆ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ 10 ಮಾದರಿ ಹಳ್ಳಿಗಳನ್ನು ರೂಪಿಸಲು ಕಲಬುರಗಿ ಜಿಲ್ಲಾ ಪಂಚಾಯತಿ ಇಂದು ಕನ್ಸೋರ್ಟಿಯಂ ಫಾರ್ ಡಿಯಾಟ್ಸ್ ಡಿಸೆಮಿನೇಷನ್ (ಸಿಡಿಡಿ) ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ಗ್ರಾಮೀಣಾಭಿವೃದ್ಧಿಗೆ ಪ್ರಾಯೋಗಿಕ ಮಾದರಿಯಾಗಿರುವ ಈ ಯೋಜನೆಯು ಜಲ ಸಂಪತ್ತು ಸಂರಕ್ಷಣೆ, ತ್ಯಾಜ್ಯ ನೀರು ಸಂಸ್ಕರಣೆ, ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹಣೆ ಸೇರಿದಂತೆ ಗ್ರಾಮಸ್ಥರ ಸಕ್ರಿಯ ಭಾಗವಹಿಸುವಿಕೆಯಿಂದ ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಿದೆ" ಎಂದು ಹೇಳಿದರು.
ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ಕೆರೆ-ಕಟ್ಟೆಗಳ ಶುದ್ಧೀಕರಣ, ಸಾಂಪ್ರದಾಯಿಕ ಜಲಾಶಯಗಳ ಪುನಶ್ಚೇತನ, ಪರಿಸರ ಸೇವೆಗಳ ಸುಧಾರಣೆ, ವೃಕ್ಷ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯ ನಿಯಂತ್ರಣವೂ ಸೇರಿವೆ. "ಜಲ ಸಂರಕ್ಷಣೆಯನ್ನು ಸಮುದಾಯದ ಜವಾಬ್ದಾರಿ ಎಂಬ ಅರಿವು ಮೂಡಿಸುವ ಉದ್ದೇಶವಿದೆ" ಎಂದರು ಅವರು.
ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಶಾಲಾ ನೈರ್ಮಲ್ಯ ಪುನರ್ ಸ್ಥಾಪನೆ, ಬ್ಲ್ಯಾಕ್ ಸ್ಪಾಟ್‌ಗಳ ಗುರುತಿಸುವಿಕೆ ಮತ್ತು ಮೂಲಸೌಕರ್ಯಗಳ ಬಲವರ್ಧನೆಗೂ ಒತ್ತು ನೀಡಲಾಗಿದೆ. 10 ಹಳ್ಳಿಗಳಲ್ಲಿ ಗ್ರೇವಾಟರ್ ಶುದ್ಧಿಕರಣ ಘಟಕಗಳ ತಾಂತ್ರಿಕ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಆರಂಭದಲ್ಲಿ 3 ಹಳ್ಳಿಗಳಲ್ಲಿ ಘಟಕ ಸ್ಥಾಪನೆಯಾಗಲಿದೆ. ಇದಲ್ಲದೆ 5 ಹಳ್ಳಿಗಳಲ್ಲಿ ಶಾಲಾ ನೈರ್ಮಲ್ಯ ವ್ಯವಸ್ಥೆಯ ಪುನರ್ ಸ್ಥಾಪನೆಯೂ ನಡೆಯಲಿದೆ.
ಹಳ್ಳಿಗಳಲ್ಲಿ ಸ್ಥಳೀಯ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಹುಡುಕುವುದು, ಪಂಚಾಯತಿ ಸಿಬ್ಬಂದಿಗೆ ತರಬೇತಿ ನೀಡುವುದು, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಸ್ಥಳೀಯ ಅಗತ್ಯಗಳಿಗೆ ತಂತ್ರಜ್ಞಾನವನ್ನು ಬಳಸುವುದು ಯೋಜನೆಯ ಗುರಿಗಳಾಗಿವೆ.
ಇದೇ ಸಂದರ್ಭದಲ್ಲಿ, ಜಿಲ್ಲೆಯ ಹಳ್ಳಿಗಳಲ್ಲಿ ಮೈಕ್ರೋ ಗ್ರಿಡ್ ಪ್ಲ್ಯಾಂಟ್ ಸ್ಥಾಪಿಸಿ ಸೌರ ಶಕ್ತಿ ಮೂಲಕ ವಿದ್ಯುತ್ ಪೂರೈಕೆಗೊಳ್ಳುವ ಪ್ರಾಯೋಗಿಕ ಯೋಜನೆಯೂ ಘೋಷಿಸಲಾಗಿದೆ. ಈ ಯೋಜನೆಗೆ ₹20 ಕೋಟಿ ಅನುದಾನ ಮೀಸಲಾಗಿದ್ದು, ಒಂದೇ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. "ಮುಂದಿನ ಒಂದೂವರೆ ವರ್ಷಗಳಲ್ಲಿ ದೇಶದಲ್ಲಿಯೇ ಮೊದಲ ಮೈಕ್ರೋ ಗ್ರಿಡ್ ಹೊಂದಿರುವ ಹಳ್ಳಿಗಳು ಕಲಬುರಗಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳಲಿವೆ" ಎಂದರು
ಜಿಲ್ಲಾಧಿಕಾರಿ ಫೌಜೀಯಾ ತರನಮ್ಮ, ಜಿಲ್ಲಾ ಪಂಚಾಯತ್ ಸಿಇಒ ಮತ್ತು ಶಾಸಕರಾದ ಬಿ.ಆರ್. ಪಾಟೀಲ್ ಹೇಳಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.