ಜ ೨೯ - ಪುಷ್ಯ ಬಹುಳ ಅಮಾವಾಸ್ಯೆ ಪುರಂದರದಾಸರ ಪುಣ್ಯದಿನ - ತನ್ನಿಮಿತ್ತ ಸಕಾಲಿಕ ನುಡಿ ನಮನ

ಜ  ೨೯ - ಪುಷ್ಯ ಬಹುಳ ಅಮಾವಾಸ್ಯೆ  ಪುರಂದರದಾಸರ  ಪುಣ್ಯದಿನ - ತನ್ನಿಮಿತ್ತ ಸಕಾಲಿಕ ನುಡಿ ನಮನ

ಜ ೨೯ - ಪುಷ್ಯ ಬಹುಳ ಅಮಾವಾಸ್ಯೆ 

ಪುರಂದರದಾಸರ ಪುಣ್ಯದಿನ - ತನ್ನಿಮಿತ್ತ ಸಕಾಲಿಕ ನುಡಿ ನಮನ

ಪುರಂದರ ವಾಙ್ಮಯ ದರ್ಶನ

ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಂಸ್ಕೃತಿ ಚಿಂತಕರು ಮೊಬೈಲ್ : ೯೭೩೯೩೬೯೬೨೧ ,

ಆಧ್ಯಾತ್ಮಿಕತೆ ಭಾರತೀಯ ಜೀವನದ ಜೀವನಾಡಿ .ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯಗಳ ಮಹತ್ವಕ್ಕೆ ಸಾಕ್ಷಿಗಳಾಗಿ ಪ್ರತಿಯುಗದಲ್ಲೂ ದೇಶಾದ್ಯಾಂತ ಬದುಕಿ ಬಾಳಿದ ಆಧ್ಯಾತ್ಮಿಕ ಚಿಂತನೆಯ ನೇತಾರರಾದ ಸಾಧುಸಂತರು ನಮ್ಮ ಸಮಾಜದ ಜೀವನ ದೃಷ್ಟಿಯನ್ನು ರೂಪಿಸುವಲ್ಲಿ ಸಹಕರಿಸಿದ್ದಾರೆ. 

ಮಹಾರಾಷ್ಟ್ರದ ವಾರಕರಿಗಳಂತೆ ತಮಿಳುನಾಡಿನ ನಾಯ್ಮನಾರ್ ಮತ್ತು ಆಳ್ವಾರ್ ಗಳಂತೆ, ಕರ್ನಾಟಕದ ಸಾಂಸ್ಕೃತಿಕ ಭೂಮಿಕೆಯಲ್ಲಿ ಎಲ್ಲರೂ ಮೆಚ್ಚುವಂತಹ ಒಂದು ಕವಲೆಂದರೆ ದಾಸ ಸಾಹಿತ್ಯ . ಈ ಧಾರೆಯಲ್ಲಿ ಗಮನಾರ್ಹ ಕೆಲಸ ಮಾಡಿದ ಹರಿದಾಸರು ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಭಕ್ತಿಗೀತೆಗಳನ್ನು ಹಾಡುತ್ತ ಭಕ್ತಿತತ್ವಗಳನ್ನು ಹರಡಿದರು. ವಿವಿಧ ಜಾತಿ ಜನಾಂಗಗಳಿಗೆಲ್ಲ ಹಿಂದೂ ಧರ್ಮದ ಬಾಗಿಲುಗಳನ್ನು ವಿಸ್ತಾರವಾಗಿ ತೆರದವರು ಹರಿದಾಸರು. ಮತ್ತು ಅದನ್ನು ದುರ್ಬಲರಿಗೆ ಒಂದು ನಂಬುಗೆಯನ್ನಾಗಿ ಮಾಡಿದರು . 

ಈ ರೀತಿ ಹರಿದಾಸ ಚಳುವಳಿ ಸಮಾಜದಲ್ಲಿ ಸ್ಥಾನ ಸಮಾನತೆಯ ತತ್ವವನ್ನು ಒತ್ತಿ ಹೇಳುವುದರ ಮೂಲಕ ಕರ್ನಾಟಕದ ಶ್ರೀಸಾಮಾನ್ಯನಿಗೆ ಮಹದುಪಕಾರ ಮಾಡಿತು. ಗಂಡು ,ಹೆಣ್ಣು ಎಂಬ ಬೇಧ ಭಾವವಾಗಲಿ ಸಾಮಾಜಿಕ ಸ್ಥಿತಿಗತಿಯಾಗಲಿ ಸಾಮಾನ್ಯವಾಗಿ ಕಾಣುವ ಜಾತಿಮತಗಳ ಬಂಧನಗಳಾಗಲಿ ಪರಮಾನಂದದ ಅನುಭವದಲ್ಲಿ ಅಡ್ಡಿಯನ್ನುಂಟು ಮಾಡಲಿಲ್ಲ ಈ ಪರಂಪರೆಯ ನೇತಾರರೂ ,ದಾಸಕೂಟದ ಅಧ್ವರ್ಯುಗಳು ಪುರಂದರದಾಸರು . ಕನ್ನಡ ಭಾಷೆಯ ಪ್ರಜ್ಞೆ ,ಪ್ರಬುದ್ದತೆಗಳಿಗೊಂದು ಸಾಕ್ಷಿಯಾಗಿ ,ಜನರು ಆಡುವ ಮಾತನ್ನೇ ಕಾವ್ಯದ ಮೌಲ್ಯಕ್ಕೆ ಏರಿಸಿದವರಾಗಿ,ಸಾಹಿತ್ಯಕ್ಕೆ ಸಂಗೀತದ ಸಾಹಚರ್ಯ ನೀಡಿ ಕರ್ನಾಟಕ ಸಂಗೀತಕೊಬ್ಬ ಗೌರವದ ಗುರುವಾಗಿ ,ನೈತಿಕತೆಯ ನೆಲೆಗಟ್ಟಿನಲ್ಲಿ ಭಕ್ತಿ ತತ್ವದ ಪ್ರಚಾರಕನಾಗಿ ‘ದಾಸಸಾಹಿತ್ಯ’ ವನ್ನು ಶ್ರೀಮಂತಗೊಳಿಸಿದ ಮೇರು ಪುರುಷರು

   ಶ್ರೀ ಪುರಂದರ ದಾಸರು ಒಬ್ಬ ಅದ್ಬುತ ಚೇತನ ,ಕೋಟಿಕೋಟಿಗೆ ಒಬ್ಬರಂತೆ ಹುಟ್ಟಿ ಬಂದ ಮಹಾತ್ಮರು . ಆಧ್ಯಾತ್ಮ , ಕಲೆ ,ಸಂಸ್ಕೃತಿಗಳ ಒಕ್ಕೂಟ ನಿರ್ಮಿಸಿದ ಆಕೃತಿಗಳಲ್ಲಿ ಭವ್ಯವಾದುದು ಪುರಂದರದಾಸರ ವ್ಯಕ್ತಿತ್ವ . ನವಕೋಟಿ ನಾರಾಯಣ ಎನಿಸಿಕೊಂಡ ಅವರು ತಮ್ಮ ಅಪರ ಸಂಪತ್ತನ್ನು ತ್ಯಜಿಸುವುದರ ಮೂಲಕ ಸಂಸಾರವನ್ನು ಬಿಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವ ಅನಾದೃಶ ಕೆಲಸ ಮಾಡಿದರು. ಪೂರ್ಣತೆಯನ್ನು ಪಡೆಯಲು ಭಗವತ್ಕೃಪೆಯೂ ಅತ್ಯಗತ್ಯ ಎನ್ನುವುದಕ್ಕೆ ಶ್ರೀದಾಸರ ಜೀವನವೇ ಪರಮ ದೃಷ್ಟಾಂತ . ಸಂಗೀತ ಕ್ಷೇತ್ರದಲ್ಲಿ ಪುರಂದರದಾಸರ ಸೇವೆ ಅತ್ಯಮೂಲ್ಯವಾದುದು. ವಿಶ್ವದಲ್ಲೇ ಸರಿಸಾಟಿಯಿಲ್ಲದ ಅತ್ಯಂತ ಪರಿಷ್ಕೃತ ಸಂಗೀತ ಪದ್ದತಿಯಾದ ಕರ್ನಾಟಕ ಸಂಗೀತ ಪಿತಾಮಹ. ವಾಗ್ಗೇಯಕಾರರಾಗಿ ,ಲಕ್ಷಣಕಾರರಾಗಿ ಅವರ ಸ್ಥಾನ ಕೈಲಾಸ ಪರ್ವತದಷ್ಟು ಎತ್ತರ ಸಂಸ್ಕೃತಕ್ಕೆ ವಾಲ್ಮೀಕಿ ಹೇಗೋ ಹಾಗೆ ಕರ್ನಾಟಕ ಸಂಗೀತಕ್ಕೆ ಪುರಂದರ ದಾಸರು.  

ಪುರಂದರ ದಾಸರು ಶಿಷ್ಯತ್ವ ಪಡೆದಿದ್ದು ವಿಜಯನಗರದ ಶ್ರೀಕೃಷ್ಣದೇವರಾಯನ ರಾಜಗುರುಗಳಾಗಿದ್ದ ವ್ಯಾಸರಾಯರಲ್ಲಿ , ದ್ವೆöÊತಸಿದ್ದಾಂತದ ಪೀಠದ ಆಚಾರ್ಯಮಣಿಗಳಾಗಿದ್ದ ವ್ಯಾಸರಾಯರು ಪುರಂದರ ಮನೋವೃತ್ತಿ ಯನ್ನು ನೋಡಿ ಅವರನ್ನು ತಮ್ಮ ದಾಸಕೂಟಕ್ಕೆ ಸೇರಿಸಿಕೊಂಡರು. ದಾಸರು ತಮ್ಮ ಸ್ವವಿಷಯಗಳನ್ನು ಎಲ್ಲಿಯೂ ಅಪ್ಪಿತಪ್ಪಿಯೂ ಹೇಳಿಕೊಳ್ಳದ ವಿಶಿಷ್ಟವ್ಯಕ್ತಿತ್ವದವರಾಗಿ ‘ಆಧ್ಯಾತ್ಮಿಕ ಜಗತ್ತಿನಲ್ಲಿ ಅಹಂಕಾರ ನಿರಸನಕ್ಕೆ ಅಗ್ರಮಾನ್ಯತೆ.’ ಎಂಬ ಮಾತಿಗೊಂದು ಜ್ವಲಂತ ಉದಾಹರಣೆಯಾದರು

‘ನಾನು’ ಎಂಬುದನ್ನು ಎಲ್ಲಿಯೂ ನುಸುಳದ ಸಾಧು ,ಸಂತ ಪ್ರವಾದಿಯಾಗಿ ಬದುಕಿದ ಪುರಂದರದಾಸರ ಪ್ರತಿಭೆ ಇದ್ದಕ್ಕಿದ್ದಂತೆ ಆರೋಪಿತವಾದುದಲ್ಲ. ಅದು ಅವರ ಕವಿ ಹೃದಯದ ಹುಟ್ಟು ಪ್ರತಿಭೆ , ದಾಸವರ್ಯರ ಪದಗಳು ,ಕಲಿತು ಬರೆದ ಕವಿತೆಗಳಲ್ಲ ; ಕುಳಿತು ಬರೆದ ಕಾವ್ಯವಲ್ಲ ,ಮಹಾರಾಜನ ಮೆಚ್ಚುಗೆಯನ್ನು ಗಳಿಸಲು ಬರೆದ ಕೃತಿಯಲ್ಲ. ಪಂಡಿತರಿಗಾಗಿ ರಚಿಸಿದ್ದು ಅಲ್ಲದೇ , ಜನಸಾಮಾನ್ಯರಿಗಾಗಿ ಕೃತಿಗಳು ಇದಾಗಿವೆ . ಜನರೊಡನೆ ಬೆರೆತುಕೊಂಡು ,ಜನಜೀವನವನ್ನು ಹತ್ತಿರದಿಂದ ಕಂಡುಂಡ ಅನುಭವ ಸಂಪತ್ತು. ಹರಿಯನ್ನು ಪ್ರೀತಿಸಿ ಪಡೆದುಕೊಂಡ ಅನುಭಾವ ಸಂಪತ್ತು, ಕನ್ನಡದ ಮನೆ ಮಾತನ್ನೆ ಕೃತಿಯಾಗಿಸುವ ಕನ್ನಡಿಗನ ಕವಿ ಹೃದಯ ಸಂಪತ್ತು . ಸಾಮಾಜಿಕ ಕಳಕಳಿ ಮತ್ತು ಸರ್ವರ ಉದ್ದಾರವನ್ನು ಬಯಸುವ ಮನೋಸಂಪತ್ತು. ಈ ಎಲ್ಲವೂ ಪುರಂದರದಾಸರಲ್ಲಿ ಇದ್ದುದ್ದರಿಂದಲೇ ಇಹವನ್ನು ನಿರಾಕರಿಸದೆ ಪರತತ್ವದ ಸಾಧನೆಯ ಕಡೆ ಸಾಮಾನ್ಯರನ್ನು ಒಯ್ಯುವ ಸಹೃದಯ ನೇತಾರರಾದರು . ಮಾನವ ಜೀವಿತವನ್ನು ಸಾರ್ಥಕತೆಯ ಪಾರಮ್ಯಕ್ಕೊಯ್ಯುಲು ಅಗತ್ಯವಾದ ಮಾರ್ಗದರ್ಶನವು ಅವರ ಕೃತಿಗಳಲ್ಲಿದೆ.  

ಹರಿದಾಸರಾಗಿ ಊರೂರು ತಿರುಗಾಡಿ ತಮ್ಮ ಒಡನಾಡಿ ಜನರ ಸಮಸ್ಯೆಗಳು ನೋವು ನಲಿವು ಕಷ್ಟ ಕಾರ್ಪಣ್ಯಗಳನ್ನು ,ಡಂಭಾಚಾರ ಮೊಸ ಕಪಟಗಳನ್ನು ಹತ್ತಿರದ ಕಣ್ಣಿಂದ ಅರ್ಥೈಸಿಕೊಂಡು , ತಾವು ವೈರಾಗ್ಯ ಪ್ರವೃತ್ತಿಯಲ್ಲಿದ್ದರೂ ಸನ್ಯಾಸಿಯ ಸ್ಪಂದನೆ ರಹಿತತೆ ಅವರಲ್ಲಿರಲಿಲ್ಲ. ಆನರ ಬಳಿ ಸಾರಿ ತಿಳುವಳಿಕೆ ಹೇಳಿ ಅವರನ್ನು ತಿದ್ದಲು ಯತ್ನಿಸುತ್ತಿದ್ದರು. ಮಾನವ ಜೀವಿತದ ನಾಣ್ಯದ ಎರಡು ಮುಖಗಳನ್ನೂ ದರ್ಶಿಸಿದ ದಾಸಶ್ರೇಷ್ಟರು. ಸಂಸಾರದ ಅಸಾರತೆಯನ್ನು , ಬದುಕಿನ ಅಶಾಶ್ವತೆಯನ್ನೂ ಅವರಂತೆ ಕಂಡು ತಿಳಿಹೇಳಿದವರಿಲ್ಲ ಆದರೆ ಅದೇ ಹೊತ್ತಿಗೆ ಮಾನವ ಜನ್ಮದ ಅಗಾಧ ಸಾಧ್ಯತೆಗಳನ್ನು ,ಹಿರಿಮೆಗರಿಮೆಗಳನ್ನು ಅವರಂತೆ ಕಂಡು ಸಾರಿದವರಿಲ್ಲ.

ಪುರಂದರರಲ್ಲಿನ ದಾಸ ಪ್ರಜ್ಞೆ ಅನುಭಾವ ದೀಪ್ತವಾದದ್ದು ,ಆಧ್ಯಾತ್ಮ ಪರಿಪ್ಲುತವಾದುದು. ಅವರು ಪ್ರಯೋಗಶೀಲರೂ ಹೌದು ,ಅನನ್ಯ ಸೃಜನಶೀಲರೂ ಹೌದು . ಸಾಹಿತ್ಯ -ಸಂಗೀತದ ಸುಮಧುರ ಸಮನ್ವಯವೇ ಅವರ ಸಂಕೀರ್ತನೆಗಳಲ್ಲಿ ತುಂಬಿವೆ .ಅಸೀಮ ಸಾಹಿತ್ಯ ಸಾಧನೆಯ ಪುರಂದರದಾಸರು ಸಾಮಾನ್ಯ ಸಂತರಲ್ಲ; ಅಸಾಮಾನ್ಯ ಅವಧೂತರು!

ಮಾನವಾತೀತ ಶಕ್ತಿಯ ಬೆಂಬಲವಿಲ್ಲದೆ ಯಾವುದೂ ಪೂರ್ಣವಾಗದು. ತಪ್ಪಿತಸ್ಥ ಮಾನವನ ನಿನ್ನೆ ,ಇಂದು , ನಾಳೆಗಳನ್ನು ಸೂಚಿಸುವ ‘ಮೂರು’ ಜನನ, ಜೀವನ,ಮರಣಕ್ಕೂ ಸಂವಾದಿಯಾಗಿದೆ. ಮರಣದಲ್ಲಿ ಹುಡಿಯಾಗಿ ಜನನದಲ್ಲಿ ಇಡಿಯಾಗಿ ಮಾನವನ ಬದುಕು ಒಳಗೊಂಡಿರುವ ಅಸಂಗತ ವಿನ್ಯಾಸವು ಸಾಂಗತ್ಯವನ್ನು ಕಂಡುಕೊಳ್ಳಬೇಕಾದರೆ ಇಷ್ಟದೇವತೆಯ ಅನುಗ್ರಹ ಬೇಕೆನ್ನುವುದು ಅನುಗ್ರಹ ಪುರಂದರದಾಸರ ಚಿಂತನೆಯಾಗಿದೆ . 

ಶರಣರ ವಚನಗಳಾಗಲಿ,ಪುರಂದರದಾಸರ ರಚನೆಗಳಾಗಲೀ, ನೇರವಾಗಿ ಕರ್ತೃಗಳಿಂದ ಲಿಖಿತ ರೂಪದಲ್ಲಿ ಬಂದವುಗಳಲ್ಲ. ಮೌಖಿಕವಾಗಿ ಹರಿದು ಬಂದವುಗಳು .ತಲೆಮರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದ ಈ ರಚನೆಗಳ್ಳಲ್ಲಿ ಮೂಲದ್ದು ಯಾವುದು ,ಪಯಣದ ವೇಳೆ ಸೇರಿಕೊಂಡದ್ದು ಯಾವುದರೆಂದು ತೀರ್ಮಾನಿಸುವ ಕಷ್ಟವಂತೂ ಇದ್ದೇ ಇದೆ. 

ನವವಸಾಹತು ಶಾಹಿಯ ಆಕ್ರಮಣದ ಹಿನ್ನೆಲೆಯಲ್ಲಿ ಕೀರ್ತನ ಸಾಹಿತ್ಯದ ಹೊಸ ಓದು ಇಂದು ಪ್ರಾರಂಭವಾಗಬೇಕಾಗಿದೆ. ವಿಶಾಲತೆಯ ಹೆಸರಿನಲ್ಲಿ ನಾವಿಂದು ದೇಸಿ ಮೂಲಗಳನ್ನು ಮರೆಯುತ್ತಿದ್ದೇವೆ. ಇಂದು ವಚನ –ಕೀರ್ತನೆಗಳ ಸೊಗಸನ್ನು ಅರಿಯದೆ ಪಾಪ್ ರಾಕ್ ಸಂಗೀತದ ಬೆನ್ನು ಹತ್ತಿದ್ದಾರೆ . ಈ ಸಂದರ್ಭದಲ್ಲಿ ವಚನಕಾರರ ,ಕೀರ್ತನಕಾರರ ರಚನೆಗಳನ್ನು ಪ್ರಚಲಿತಗೊಳಿಸುವುದು ಇಂದಿನ ಅನಿವಾರ್ಯವಾಗಿದೆ.