ರಾಷ್ಟ್ರಭಕ್ತಿ ಬೆಳೆಸಲು ವಿವೇಕಾನಂದರ ಆದರ್ಶ ಪಾಲಿಸಿ:ಡಾ.ಸದಾನಂದ ಪೆರ್ಲ

ಸ್ವಾಮಿ ವಿವೇಕಾನಂದರ 123ನೇ ಪುಣ್ಯಸ್ಮರಣೆ ಆಚರಣೆ*:
ರಾಷ್ಟ್ರಭಕ್ತಿ ಬೆಳೆಸಲು ವಿವೇಕಾನಂದರ ಆದರ್ಶ ಪಾಲಿಸಿ:ಡಾ.ಸದಾನಂದ ಪೆರ್ಲ
ಕಲಬುರಗಿ: ರಾಷ್ಟ್ರಭಕ್ತಿ ಬೆಳೆಸಲು ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಸ್ವಾಮಿ ವಿವೇಕಾನಂದರ ಆದರ್ಶವನ್ನು ಪಾಲನೆ ಮಾಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾಗಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ ಸದಾನಂದ ಪೆರ್ಲ ಹೇಳಿದರು.
ಕಲಬುರಗಿಯ ಗಂಗಾನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹಾಗೂ ಬಸವೇಶ್ವರ ಸೇವಾ ಸಮಾಜದ ಜಂಟಿ ಆಶ್ರಯದಲ್ಲಿ ಜುಲೈ 4 ಶುಕ್ರವಾರ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 123ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ರಾಷ್ಟದ ಅಭಿವೃದ್ಧಿಯಲ್ಲಿ ಅಲ್ಲಿನ ಯುವಕರ ಪಾತ್ರ ಬಹಳ ಪ್ರಮುಖವಾಗಿದೆ. ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದರು ಬೋಧಿಸಿದ ಆದರ್ಶ, ನೀಡಿದ ಸಂದೇಶಗಳನ್ನು ಯುವಕರು ಅಳವಡಿಸಿಕೊಂಡರೆ ಸದೃಢ ರಾಷ್ಟ ನಿರ್ಮಾಣ ಸಾಧ್ಯ ಎಂದು ಡಾ. ಪೆರ್ಲ ಹೇಳಿದರು.
ವಿವೇಕಾನಂದರು ವಿಶ್ವಕ್ಕೆ ಹೊಸ ಬೆಳಕು ನೀಡಿದವರು. ಅವರ ಒಂದೊಂದು ಮಾತು ಯುವಕರಿಗೆ ಸಂಜೀವಿನಿಯಿದ್ದಂತೆ. ಇಂದಿನ ಯುವಶಕ್ತಿ ಮೊಬೈಲ್ ಗೀಳಿನಿಂದ ಹೊರಬರಬೇಕು. ಸಂಸ್ಕಾರಯುತ ಬದುಕನ್ನು ಮಾಡಿ ಗುರು-ಹಿರಿಯರು ಹಾಗೂ ದೇಶಕ್ಕೆ ಗೌರವ ನೀಡಬೇಕು. ದೇಶಭಕ್ತಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಿಶ್ಚಿತ ಗುರಿಯನ್ನಿಟ್ಟುಕೊಂಡು, ದೃಢ ಸಂಕಲ್ಪದೊಂದಿಗೆ ನಿರಂತರವಾದ ಪ್ರಯತ್ನ ಮಾಡಿ, ಜೀವನದಲ್ಲಿ ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ ದೇಶದ ಅಮೂಲ್ಯ ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಎಸ್.ಬಿರಾದಾರ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಎಸ್. ಗುಡಬಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಾವೇರಿ ವಿ.ಹೂನಳ್ಳಿ, ಶಿಕ್ಷಕಿಯರಾದ ರಾಜೇಶ್ವರಿ ಎಸ್.ಡಾಂಗೆ, ರೂಪಾ ಎಸ್.ಚೇಂಗಟಾ ಸೇರಿದಂತೆ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.