ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಶಾಸಕರಿಗೆ ನಾಲಿಗೆ ಹಿಡಿತ ಇರಲಿ: ಸುಭಾಷ ರಾಠೋಡ

ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಶಾಸಕರಿಗೆ ನಾಲಿಗೆ ಹಿಡಿತ ಇರಲಿ: ಸುಭಾಷ ರಾಠೋಡ
ಚಿಂಚೋಳಿ : ಕೊಟ್ಟ ಕುದರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಎಂಬಂತೆ ಶಾಸಕ ಡಾ. ಅವಿನಾಶ ಜಾಧವ ಅವರು ತಮ್ಮ ತಟ್ಟೆಯಲ್ಲಿ ಕೋಣ ಮಲಗಿದ್ದರೂ ಬೇರೆಯವರ ತಟ್ಟೆಯಲ್ಲಿನ ನೋಣ ತೆಗೆಯಲು ಹೋಗುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ತಿಳಿಸಿದ್ದಾರೆ.
ಸುದ್ಧಿಗಾರರಿಗೆ ಪ್ರಕಟಣೆ ಹೇಳಿಕೆ ನೀಡಿದವರು, ಕೆಡಿಪಿ ಸಭೆ ಎನ್ನುವುದರ ಬಗ್ಗೆ ಗಂಧ ಗಾಳಿ ಗೊತ್ತಿದ್ದರೆ, ಇಲ್ಲಿವರೆಗೆ ಶಾಸಕರು ಚಿಂಚೋಳಿಯಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಚಿಂತನೆ ಮಾಡಿ, ನೀಲಿ ನಕ್ಷೆ ಸಿದ್ದಪಡಿಸಿ, ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸುವಲ್ಲಿ ನಿರತರಾಗಿರುತ್ತಿದ್ದರು. ತನ್ನ ಹುಳುಕನ್ನು ಮುಚ್ಚಿಕೋಳ್ಳಲಿಕ್ಕೆ ಶಾಸಕರು ಖರ್ಗೆ ಅವರನ್ನು ದುಷಿಸುವದು ಖಂಡನೀಯ. ಒಂದು ವರ್ಷದಿಂದ ಕೆಡಿಪಿ ಸಭೆ ಮಾಡದ ಶಾಸಕರು ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗಿದೆ. ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಗೆ ಇಟ್ಟುಕೊಳ್ಳುವುದು ಒಳಿತು. ಚಿಂಚೋಳಿ ಶಾಸಕರಾಗಿ ತಾವು ಸಾಧಿಸಿದ ಘನಂದಾರಿ ಕೆಲಸಗಳು ಕ್ಷೇತ್ರದ ಜನ ನೋಡ್ತಾ ಇದ್ದಾರೆ. ಚಿಂಚೋಳಿಗೆ ನಿಮ್ಮ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ತಾವು ಅಭಿವೃದ್ಧಿಯಲ್ಲಿ ಕ್ಷೇತ್ರವನ್ನು 20 ವರ್ಷ ಹಿಂದೆ ತೆಗೆದುಕೊಂಡು ಹೋಗಿರುವದೇ ನಿಮ್ಮ ಸಾಧನೆ. ತಾವು ಅಡಿಗಲ್ಲು ಮಾಡಿ ಜನರನ್ನು ಮರಳು ಮಾಡಿದ ಐನಾಪುರ ಭಾಗದ ಬಹುದಿನದ ಬೇಡಿಕೆ ಐನಾಪುರ ಏತ ನೀರಾವರಿ ಯೋಜನೆಗೆ ನಮ್ಮ ಸರಕಾರ ಚಾಲನೆ ಕೊಡ್ತಾ ಇದೆ. ಅಂದಿನ ಅರಣ್ಯ ಸಚಿವರಿಗೆ ಕರೆಸಿ ಅರಣ್ಯ ಕಾಲೇಜು ಹಾಗೂ ಪ್ರವಾಸಿ ತಾಣ ಮಾಡುತ್ತೇವೆ ಎಂದು ಸುಳ್ಳು ಹೇಳಿಸಿದ್ದೀರಿ. ಇವಾಗ ನಮ್ಮ ಸರಕಾರ ಇದನ್ನು ಜಾರಿಗೆ ತರುವ ಕೆಲಸ ಮಾಡ್ತಾ ಇದೆ. ಚಿಂಚೋಳಿ ಪದವಿ ಕಾಲೇಜಿನಲ್ಲಿ ಪಿಜಿ ಸೆಂಟರ್ ಆರಂಭ ಮಾಡ್ತೀವಿ ಅಂತ ಹತ್ತಾರು ಸಲ ಹೇಳಿದ್ದೆ ನಿಮ್ಮ ಸಾಧನೆ ಆಯ್ತು ವಿನಃ ಪ್ರಾರಂಭ ಆಗಲಿಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಹತ್ತನೇ ತರಗತಿಯ ಫಲಿತಾಂಶ ಬಂದಿದ್ದು, ಇಲ್ಲಿವರೆಗೆ ಶಿಕ್ಷಣ ಸುಧಾರಣೆ ಬಗ್ಗೆ ಒಂದು ಶಬ್ದ ತಮ್ಮಿಂದ ಬಂದಿಲ್ಲ. ಇಷ್ಟೆಲ್ಲಾ ಅಗೆದಷ್ಟು ಹುಳುಕು ನಿಮ್ಮಲ್ಲೇ ಇಟ್ಟುಕೊಂಡು, ಇಡೀ ರಾಜ್ಯಕ್ಕೆ ಮಾದರಿಯಾಗಿ ಕೆಲಸ ಮಾಡ್ತಾ ಇರುವ, ಅನೇಕ ದೊಡ್ಡ ದೊಡ್ಡ ಯೋಜನೆಗಳನ್ನು ಕಲಬುರ್ಗಿಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ತಂದಿರುವ ಸಚಿವ ಖರ್ಗೆ ಅವರ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ. ಮುಂದೆ ಸಚಿವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ಅಭಿವೃದ್ಧಿಗೆ ಖರ್ಗೆ ಅವರು ಯಾವತ್ತೂ ಪಕ್ಷ ಪಾತ ಮಾಡಿದ ಉದಾಹರಣೆ ಇಲ್ಲ. ಮೊದಲು ತಮ್ಮಲ್ಲಿ ಜವಾಬ್ದಾರಿ ನಿಭಾಯಿಸುವ ಶಕ್ತಿ ಇದ್ದರೆ ಕ್ಷೇತ್ರ ಅಭಿವೃದ್ಧಿ ಮಾಡಿ. ಅದು ಬಿಟ್ಟು ಕಾಂಗ್ರೆಸ್ ಸಚಿವರ ಮೇಲೆ ಸರಕಾರದ ಮೇಲೆ ಸುಳ್ಳು ಆರೋಪ ಸಹಿಸೋದಿಲ್ಲ ಎಂದು ಸುಭಾಷ ರಾಠೋಡ್ ಅವರು ಶಾಸಕರಿಗೆ ಎಚ್ಚರಿಸಿದ್ದಾರೆ.