ಕಮಲನಗರದಲ್ಲಿ ಜೂನ್‌ನಿಂದ ಪ್ರೌಢ ಶಾಲೆ ಆರಂಭ: ಶಾಸಕ ಪ್ರಭು ಚವ್ಹಾಣ

ಕಮಲನಗರದಲ್ಲಿ ಜೂನ್‌ನಿಂದ ಪ್ರೌಢ ಶಾಲೆ ಆರಂಭ: ಶಾಸಕ ಪ್ರಭು ಚವ್ಹಾಣ
---ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಮಲನಗರದಲ್ಲಿನ ಸರ್ಕಾರಿ ಮಾಧ್ಯಮಿಕ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಉನ್ನತೀಕರಿಸಿದ್ದು, ಪ್ರಸಕ್ತ ವರ್ಷದಿಂದಲೇ ಕಾರ್ಯಾರಂಭವಾಗಲಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊಸ ತಾಲ್ಲೂಕು ಕೇಂದ್ರವಾಗಿರುವ ಕಮಲನಗರದಲ್ಲಿ ಪ್ರೌಢ ಶಾಲೆಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ವಿದ್ಯಭ್ಯಾಸಕ್ಕಾಗಿ ಖಾಸಗಿ ಶಾಲೆಗಳು ಅಥವಾ ಅನ್ಯ ಪ್ರದೇಶಗಳಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಈ ಬಗ್ಗೆ ಸರ್ಕಾರಕ್ಕೆ ಹತ್ತಾರು ಪತ್ರಗಳನ್ನು ಬರೆದಿದ್ದೆ. ಶಿಕ್ಷಣ ಸಚಿವರನ್ನು, ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರನ್ನು ಕೂಡ ಸಾಕಷ್ಟು ಸಲ ಭೇಟಿ ಮಾಡಿ ಕಮಲನಗರದಲ್ಲಿ ಪ್ರೌಢ ಶಾಲೆ ಆರಂಭಿಸುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ನನ್ನ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಮಾಧ್ಯಮಿಕ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.
ಖಾಸಗಿ ಶಾಲೆಯನ್ನು ಅವಲಂಬಿಸಿದ್ದ ಇಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಓದುವ ಅವಕಾಶ ಸಿಗಲಿದೆ. ಇನ್ನು ಮುಂದೆ ಬಡ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಅನ್ಯ ಪ್ರದೇಶಗಳಿಗೆ ಅಲೆದಾಡುವುದು ತಪ್ಪಲಿದೆ. ಪ್ರಸಕ್ತ ಜೂನ್‌ನಿಂದಲೇ ಪ್ರೌಢ ಶಾಲೆಗೆ ಚಾಲನೆ ನೀಡಲಾಗುತ್ತದೆ. ಜನತೆ ತಮ್ಮ ಮಕ್ಕಳನ್ನು ಸರ್ಕಾರಿ ಪ್ರೌಢ ಶಾಲೆಗೆ ದಾಖಲಿಸಬೇಕೆಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.