ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಹತ್ತಾರು ಶಿಕ್ಷಣ ಮತ್ತು ಉದ್ಯೋಗಾವಕಾಶಗಳು: ಶ್ರೀನಿವಾಸ ಸರಡಗಿ ಶ್ರೀಗಳು

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಹತ್ತಾರು ಶಿಕ್ಷಣ ಮತ್ತು ಉದ್ಯೋಗಾವಕಾಶಗಳು: ಶ್ರೀನಿವಾಸ ಸರಡಗಿ ಶ್ರೀಗಳು
ಸರಡಗಿ, ಮೇ 4 – “ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ತಿರುವು. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅರ್ಹತೆ ಮತ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶಿಕ್ಷಣ ಮತ್ತು ವೃತ್ತಿಯ ಮಾರ್ಗವನ್ನು ಆರಿಸಬೇಕು,” ಎಂದು ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಹೇಳಿದ್ದಾರೆ.
ಶ್ರೀನಿವಾಸ ಸರಡಗಿಯ ಚಿಕ್ಕವಿರೇಶ್ವರ ಮಠದಲ್ಲಿ ನಡೆದ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. “ಎಸ್‌ಎಸ್‌ಎಲ್‌ಸಿ ಹಂತವು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಭವಿಷ್ಯದ ಬೆಳವಣಿಗೆಗೆ ಬುನಾದಿ ಹಾಕುವ ಪ್ರಾರಂಭಿಕ ಘಟ್ಟವಾಗಿದೆ,” ಗುಣಮಟ್ಟದ ಶಿಕ್ಷಣ ಪಡೆದಿರುವದರಿಂದ ಪಾಸಾಗಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ ಅವರು ಮಾತನಾಡಿ, “ಪಿಯು ಹಂತದಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ವಿಭಿನ್ನ ವಿಷಯ ಆಯ್ಕೆಗಳಿವೆ. ಕಲಾ ವಿಭಾಗದಲ್ಲಿ ಇತಿಹಾಸ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳ ಆಯ್ಕೆ ಲಭ್ಯವಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಎ ಮುಂತಾದ ಸಂಯೋಜನೆಗಳಿವೆ. ವಾಣಿಜ್ಯದಲ್ಲಿ ಲೆಕ್ಕಪತ್ರ, ವ್ಯವಹಾರ ಅಧ್ಯಯನ ಮತ್ತು ಇತಿಹಾಸ/ಅರ್ಥಶಾಸ್ತ್ರ ಮುಂತಾದ ವಿಷಯಗಳಿರುವುವೆ,” ಎಂದು ವಿವರಿಸಿದರು.
ಪಾಳಾದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ನೀಲಕಂಠ ಸಿಂಧೆ, ಇಟಗಾದ ಚನ್ನವೀರಯ್ಯ ಹಿರೇಮಠ, ಶ್ರೀನಿವಾಸ ಸರಡಗಿ ಪ್ರೌಢಶಾಲೆಯ ಸುವರ್ಣ ಇವರು ಪ್ರತ್ಯೇಕವಾಗಿ ಮಾತನಾಡಿ ಪಿಯು ನಂತರ ಹಾಗೂ ಸರ್ವೀಸ್ ತರಬೇತಿ ಸಂಸ್ಥೆಗಳಲ್ಲಿನ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು. ಕಂಪ್ಯೂಟರ್ ಕೋರ್ಸ್, ಐಟಿಐ, ಪಾಲಿಟೆಕ್ನಿಕ್, ಡಿಪ್ಲೊಮಾ, ಕ್ರ್ಯಾಶ್ ಕೋರ್ಸ್‌ಗಳು ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬಹುದು ಎಂದರು.
ಉದ್ಯಮದಾರ ವಿನೋದ ಪಾಟೀಲ ಅವರು, “ಸೇನೆ ಹಾಗೂ ಅರೆಸೇನೆ ಪಡೆಗಳಲ್ಲಿ ಕೂಡ 10ನೇ ಪಾಸಾದವರಿಗೆ ಉದ್ಯೋಗಾವಕಾಶಗಳಿವೆ. ಭೂಸೇನೆ, ನೌಕಾಸೇನೆ, ವಾಯುಸೇನೆ ಹಾಗೂ ಸಿಐಎಸ್‌ಎಫ್, ಬಿಎಸ್‌ಎಫ್ ಮುಂತಾದ ಪಡೆಗಳಲ್ಲಿ ಸೇರ್ಪಡೆ ಸಾಧ್ಯವಿದೆ,” ಎಂದು ಹೇಳಿದರು.
ಸರಡಗಿ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ರಾಜೇಂದ್ರ ರಂಗದಾಳ ಅವರು ಪಿಎಸ್‌ಸಿ, ಎಸ್ಎಸ್‌ಸಿ ಪರೀಕ್ಷೆಗಳ ಮೂಲಕ ಸರಕಾರೀ ಹುದ್ದೆಗಳಲ್ಲೂ ಅವಕಾಶಗಳಿವೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ಖಾಜಾ ಕೋಟ್ನೂರ, ಶ್ರೀನಿವಾಸ್ ಸರಡಗಿ ಹಾಗೂ ಪಾಳಾ ,ಇಟಗಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗಿತು.
ಕಾರ್ಯಕ್ರಮದಲ್ಲಿ ಸಂಗಯ್ಯ ಸ್ವಾಮಿ, ಸಂತೋಷ ಆಡೆ, ಶರಣಗೌಡ ಪಾಟೀಲ, ಪರಮೇಶ್ವರ ದಂಡಿನ, ಹುಸೇನಿ ದಂಡಿನ, ಜಗನ್ನಾಥ ಹಕ್ಕಿ, ಗುರುನಾಥ್ ಇಟಗಾ ಉಪಸ್ಥಿತರಿದ್ದರು
ಶಿಕ್ಷಕಿ ಜ್ಯೋತಿ ನಿರೂಪಿಸಿದರು, ಶಿಕ್ಷಕ ಶಿವಶರಣಪ್ಪ ತಮ್ಮಾಗೋಳ ವಂದಿಸಿದರು.