ಚಿತ್ತಾಪೂರ ಪತ್ರಕರ್ತ ನಾಗಯ್ಯಸ್ವಾಮಿ ಸಾವಿಗೆ ನ್ಯಾಯ ಬೇಕು – ಚಿಂಚೋಳಿ ಕಾರ್ಯನಿರತ ಪತ್ರಕರ್ತರಿಂದ ಮುಖ್ಯಮಂತ್ರಿಗಳಿಗೆ ಮನವಿ

ಚಿಂಚೋಳಿ ಕಾರ್ಯನಿರತ ಪತ್ರಕರ್ತರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ಚಿತ್ತಾಪೂರ ಪತ್ರಕರ್ತ ನಾಗಯ್ಯಸ್ವಾಮಿ ಸಾವಿಗೆ ನ್ಯಾಯ ಒದಗಿಸಿ, ಸರಕಾರ ಕುಟುಂಬಕ್ಕೆ 50 ಲಕ್ಷ ಪರಿಹಾರ, ನೌಕರಿ ನೀಡಿ, ಪತ್ರಕರ್ತರ ರಕ್ಷಣೆಗೆ ಕ್ರಮವಹಿಸಬೇಕು

ಸುದ್ದಿ : ಚಿಂಚೋಳಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಪತ್ರಕರ್ತ ನಾಗಯ್ಯಸ್ವಾಮಿ ಅವರಿಗೆ ಬೆದರಿಕೆ ಹಾಕಿ, ಮಾನಸಿಕ ಕಿರುಕುಳ ನೀಡಿ, ಅವರ ಸಾವಿಗೆ ಕಾರಣವಾಗಿರುವ ಅಳ್ಳೂಳ್ಳಿ ಗ್ರಾಮ ಪಂಚಾಯತ್ ಪಿಡಿಓ ದೇವೀಂದ್ರ ಭಾಲ್ಕಿ ಅವರನ್ನು ಸೇವೆಯಿಂದ ವಜಾಗೊಳಿಸಿ, ಮೃತ ಪತ್ರಕರ್ತನ ಕುಟುಂಬಕ್ಕೆ ಸರಕಾರದಿಂದ 50 ಲಕ್ಷ ರು ಪರಿಹಾರವನ್ನು ನೀಡಿ, ಕುಟುಂಬದ ಒಬ್ಬರಿಗೆ ನೌಕರಿ ಒದಗಿಸಿಕೊಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಚಿಂಚೋಳಿ ತಾಲೂಕ ಘಟಕ ಚಿಂಚೋಳಿ ಗ್ರೇಡ್ -2 ತಹಸೀಲ್ದಾರ ವೆಂಕಟೇಶ ದುಗ್ಗನ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಸಲ್ಲಿಸಿ ಒತ್ತಾಯಿಸಿದೆ. 

ಬಳಿಕ ಸಂಘದ ಮನವಿಗೆ ಬೆಂಬಲಿಸಿ ಸಮಾಜ ಸೇವಕ ಕೆ.ಎಂ.ಬಾರಿ ಮಾತನಾಡಿ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ಸೇವೆ ಸಲ್ಲಿಸುತ್ತಿದೆ. ಪತ್ರಕರ್ತರು ಸಮಾಜದ ಒಂದು ಭಾಗವಾಗಿ ಕೆಲಸ ನಿರ್ವಹಿಸುತ್ತಿದೆ. ಇಂತಹ ಪತ್ರಕರ್ತರನ್ನು ಅಧಿಕಾರಿಗಳು ಬೆದರಿಕೆ ಹಾಕಿ, ಮಾನಸಿಕವಾಗಿ ಕಿರುಳು ನೀಡಿ, ಪತ್ರಕರ್ತ ನಾಗಯ್ಯಸ್ವಾಮಿ ಅವರ ಸಾವಿಗೆ ಕಾರಣರಾಗಿರುವ ಪಿಡಿಓ ಅವರ ನಡೆ ಖಂಡನೀಯವಾಗಿದ್ದು, ಸರಕಾರ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಿ, ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದರು. 

ಹಿರಿಯ ಪತ್ರಕರ್ತ ಶಾಮರಾವ ಚಿಂಚೋಳಿ ಅವರು ಮಾತನಾಡಿ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಚಿತ್ತಾಪೂರ ತಾಲೂಕಿನ ಪತ್ರಕರ್ತ ನಾಗಯ್ಯಸ್ವಾಮಿ ಅವರು ಸುದ್ದಿ ಪ್ರಕಟಿಸಲು ಮಾಹಿತಿ ಕೇಳಿದಕ್ಕೆ ಅಳ್ಳೋಳ್ಳಿ ಗ್ರಾಮ ಪಂಚಾಯತ್ ಅಧಿಕಾರಿ ಪಿಡಿಓ ದೇವೇಂದ್ರ ಭಾಲ್ಕಿ ಅವರು ಪತ್ರಕರ್ತನಿಗೆ ಬೆದರಿಕೆ ಹಾಕಿ ಮಾನಸಿಕ ಕಿರುಳ ನೀಡಿ ನಾಗಯ್ಯಸ್ವಾಮಿ ಅವರ ಸಾವಿಗೆ ಕಾರಣನಾಗಿರುವ ಪಿಡಿಓ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಸಾರ್ವಜನಿಕರ ಸಮಸ್ಯೆಗಳ ಸುದ್ದಿ ಪ್ರಕಟಿಸಿದ ಪತ್ರಕರ್ತರ ಮೇಲೆ ದಬ್ಬಾಳಿಕೆ ಮತ್ತು ಫೋನ್ ಕರೆ ಮಾಡಿ ಬೆದರಿಕೆಗಳನ್ನು ಹಾಕಿರುವ ಘಟನೆಗಳು ಕೂಡ ಚಿಂಚೋಳಿ ತಾಲೂಕಿನ ಆಡಳಿತದ ಹಿರಿಯ ಅಧಿಕಾರಿಗಳಿಂದ ಜರುಗಿದೆ. ಸಮಾಜದ ಧ್ವನಿಯಾಗಿ ಕೆಲಸ ಮಾಡುವ ಪತ್ರಿಕಾ ರಂಗದ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಂಡು, ಪತ್ರಕರ್ತನ ಸಾವಿಗೆ ನ್ಯಾಯ ಒದಗಿಸಬೇಕು ಎಂದರು. 

ಹಿರಿಯ ಪತ್ರಕರ್ತ ಎಂ.ಪಿ ರಾಮರಾವ ಕುಲಕರ್ಣಿ, ಜಗನ್ನಾಥ ಶೇರಿಕಾರ ಅವರು ಮಾತನಾಡಿ, ಖಂಡಿಸಿದರು. 

ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರಾದ ಹಣಮಂತ ಪೂಜಾರಿ, ಗೋಪಾಲ ಗಾರಂಪಳ್ಳಿ, ವೀಠಲ್ ಕುಸಾಳೆ, ದಯಾನಂದ ಹಿತ್ತಲ್, ಪತ್ರಕರ್ತರಾದ ಮೋಯಿಜ್ ಪಟೇಲ, ಮಹೇಬೂಬ್ ಶಾ ಅಣವಾರ, ರಾಜೇಂದ್ರ ಪ್ರಸಾದ, ಶಿವರಾಜ ವಾಲಿ, ಚಾಂದ ಪಾಶಾ, ಶಿವಕುಮಾರ ತಳವಾರ, ವಾಸೀಮ್ ಪಟೇಲ, ಸುಮಂತ ಸಂಗೈದ್, ಹರ್ಷವರ್ಧನ್, ಗೌತಮ್, ಹಫೀಜ್ ಇಸ್ಮಾಯಿಲ್ ಅವರು ಉಪಸ್ಥಿತರಿದರು.