ಶ್ರೀ ರಾಮ ನವಮಿ ಧಾರ್ಮಿಕ ಆಚರಣೆ: ಶ್ರೀ ರಾಮ ದೇವರ ಆದರ್ಶಗಳನ್ನು ಅಳವಡಿಸೋಣ ಎಂಬ ಸಂದೇಶ

ಶ್ರೀ ರಾಮ ನವಮಿ ಧಾರ್ಮಿಕ ಆಚರಣೆ: ಶ್ರೀ ರಾಮ ದೇವರ ಆದರ್ಶಗಳನ್ನು ಅಳವಡಿಸೋಣ ಎಂಬ ಸಂದೇಶ
ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ರಾಮ ನವಮಿಯನ್ನು ಭಕ್ತಿ ಭಾವದಿಂದ ಕೂಡಿದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಈ ಪವಿತ್ರ ಸಂದರ್ಭವನ್ನು ಆಚರಿಸಲು ಸಾವಿರಾರು ಭಕ್ತರು ಮಹಾ ಸಂಖ್ಯೆಯಲ್ಲಿ ಸೇರಿದ್ದರು.
ಕಾರ್ಯಕ್ರಮ ಬೆಳಿಗ್ಗೆ ಅರ್ಚಕರಾದ ಶ್ರೀ ಗುಂಡಾಚಾರ್ಯ ನರಿಬೋಳ ಅವರ ನೇತೃತ್ವದಲ್ಲಿ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಮಹಾಪೂಜೆಯಿಂದ ಆರಂಭವಾಯಿತು. ನಂತರ ಪವಿತ್ರ ರಾಮಪಾರಾಯಣ ಕಾರ್ಯಕ್ರಮ ಜರುಗಿತು. ಆಕಾಶಾಚಾರ್ಯ ಅವರಿಂದ ಪ್ರವಚನ ನಡೆಯಿತು. ಪ್ರವಚನದಲ್ಲಿ ಶ್ರೀ ರಾಮ ದೇವರ ಸಜ್ಜನರಕ್ಷಕ ಗುಣಗಳು, ಶಿಸ್ತಿನ ಜೀವನಶೈಲಿ ಹಾಗೂ ಮಿತಭಾಷಿತ್ವದ ಮಹತ್ವವನ್ನು ವಿವರಿಸಿದರು.
ಭಜನೆ ಕಾರ್ಯಕ್ರಮದ ಬಳಿಕ, ಮಧ್ಯಾಹ್ನ 12 ಗಂಟೆಗೆ ಶ್ರೀ ರಾಮದೇವರ ತೊಟ್ಟಿಲ ಸೇವೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.
ಅರ್ಚಕರಾದ ಗುಂಡಾಚಾರ್ಯ ನರಿಬೋಳ ಮಾತನಾಡುತ್ತಾ, "ಶ್ರೀ ರಾಮ ದೇವರು ಜಗದೊಡೆಯನಾದರೂ ಮಾನವೀಯ ಗುಣಗಳಿಂದ ಭರಿತ ಜೀವನ ನಡೆಸಿದನು. ತಂದೆಯ ಮಾತಿಗೆ ವಿಧೇಯನಾಗಿ ವನವಾಸ ಹೋದನು, ದುಷ್ಟರನ್ನು ಶಿಕ್ಷಿಸಿ ಸಜ್ಜನರ ರಕ್ಷಣೆ ಮಾಡಿದನು. ಆತನ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಹೇಳಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಮರಾವ ಕುಲಕರ್ಣಿ, ಗೋಪಾಲರ ತೆಂಗಲಿ, ಅನಿಲ ಕಕ್ಕೇರಿ, ಮಾಧವಚಾರ್ಯ ಗುಡಿ, ಸುಭಾಷ್ ದೇಶಪಾಂಡೆ ಸೇರಿದಂತೆ ಅನೇಕ ಮಹಿಳಾ ಮಂಡಳಿಯ ಸದಸ್ಯರು ಸಹ ಭಾಗವಹಿಸಿದ್ದರು.
- ವರದಿ: KKP ಪತ್ರಿಕೆ