ಶಾಸಕರಿಂದ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥ

ಶಾಸಕರಿಂದ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥ
ಕಮಲನಗರ:ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ ಅವರ ಪ್ರಯತ್ನದಿಂದ ಔರಾದ(ಬಿ) ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅಂಕಪಟ್ಟಿ ಸಮಸ್ಯೆ ಇತ್ಯರ್ಥಗೊಂಡಿದೆ.
2022-23ನೇ ಸಾಲಿನಲ್ಲಿ ಔರಾದ(ಬಿ) ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳು ಅಂಕಪಟ್ಟಿ ಸಿಗದೆ ತೊಂದರೆಗೆ ಸಿಲುಕಿದ್ದರು. ಹಿಂದಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಪೂರ್ಣ ಪರೀಕ್ಷಾ ಶುಲ್ಕ ವಿಶ್ವವಿದ್ಯಾಲಯಕ್ಕೆ ಪಾವತಿಸಲು ವಿಳಂಬ ಮಾಡಿದ್ದರಿಂದ ಅಂಕಪಟ್ಟಿ ಬಂದಿರಲಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಶಾಸಕರನ್ನು ಬೇಟಿ ಮಾಡಿ ಅಳಲನ್ನು ತೋಡಿಕೊಂಡಾಗ ಕೂಡಲೇ ಬಾಕಿ ಶುಲ್ಕ ಪಾವತಿಸಿ ಅಂಕಪಟ್ಟಿಯನ್ನು ತರಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದರು.
ಅಲ್ಲದೇ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಹಾಗೂ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಸಮಸ್ಯೆ ಬೇಗ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ಪತ್ರ ಬರೆದು ಕಾಲೇಜು ಮತ್ತು ವಿಶ್ವವಿದ್ಯಾಲಯದ ಸಮಸ್ಯೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮತ್ತು ಉದ್ಯೋಗ ಪಡೆಯಲು ಸಮಸ್ಯೆ ಎದುರಿಸುತ್ತಾರೆ. ಮಕ್ಕಳಿಗೆ ಬೇಗ ಅಂಕಪಟ್ಟಿಗಳನ್ನು ಒದಗಿಸಲು ಅಗತ್ಯ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದರು.
ನಿರಂತರ ಪ್ರಯತ್ನಗಳಿಂದಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯದ ನಡುವಿನ ಸಮಸ್ಯೆ ಇತ್ಯರ್ಥಗೊಂಡಿದೆ. ಎರಡು ದಿನಗಳೊಳಗೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದೆಂದು ಶಾಸಕರಾದ ಪ್ರಭು ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.