ಮೀಸಲಾತಿ ತಾಯಿಯ ಅಂತಃಕರಣದಂತೆ: ಪ್ರೊ. ಎಸ್. ಜಿ. ಸಿದ್ದರಾಮಯ್ಯ

ಮೀಸಲಾತಿ ತಾಯಿಯ ಅಂತಃಕರಣದಂತೆ: ಪ್ರೊ. ಎಸ್. ಜಿ. ಸಿದ್ದರಾಮಯ್ಯ
ಕಲಬುರ್ಗಿ, ಏಪ್ರಿಲ್ 6 ಕರ್ನಾಟಕ ಸ್ಮಾರಕ ನಿಧಿ, ಬೆಂಗಳೂರು ಹಾಗೂ ರೇಶ್ಮಿ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ನಗರದಲ್ಲಿ ನಡೆದ 'ಮಾನವೀಯ ಮೌಲ್ಯಗಳ ಕುರಿತು ಗಾಂಧೀಜಿಯವರ ವಿಚಾರಗಳು' ಎಂಬ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಮಾತನಾಡುತ್ತಾ, ಮೀಸಲಾತಿ ಎಂಬುದು ತಾಯಿಯ ಅಂತಃಕರಣದಂತೆ ಎಂದು ಅಭಿಪ್ರಾಯಪಟ್ಟರು.
ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಮೀಸಲಾತಿ ವ್ಯವಸ್ಥೆ ತಾಯಿಯು ತನ್ನೆಲ್ಲ ಮಕ್ಕಳಿಗೆ ಸಮಾನ ಪ್ರೀತಿಯನ್ನು ಹಂಚುವಾಗ, ಅಂಗವಿಕಲ ಮಗುವಿಗೆ ನೀಡುವ ವಿಶೇಷ ಪ್ರೀತಿಯಂತೆ ಇದೆ ಎಂದರು. ಆದರೆ ಇಂದಿನ ಸರ್ಕಾರಗಳು ಈ ಮೀಸಲಾತಿಯ ಮೂಲ ಆಶಯಕ್ಕೆ ಧಕ್ಕೆ ತರುವಂತಹ ನೀತಿ ನಿರ್ಧಾರಗಳನ್ನು ಕೈಗೊಂಡು, ಅಂಬೇಡ್ಕರ್ ಅವರ ದೃಷ್ಠಿಕೋಣಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ತಮ್ಮ ಬೇಸರವನ್ನು ಅವರು ವ್ಯಕ್ತಪಡಿಸಿದರು.
ಇನ್ನು ಕೆಲವರು ಇತರರ ತಟ್ಟೆಯ ಆಹಾರವನ್ನು ಕದಿಯುವಂತಹ ಕಾಯ್ದೆ-ಕಾನೂನುಗಳನ್ನು ರೂಪಿಸುತ್ತಿರುವುದು ಸರಿಯಲ್ಲ. ಯುವ ಪೀಳಿಗೆ ಇದನ್ನು ಸೂಕ್ಷ್ಮ ಮನಸ್ಸಿನಿಂದ ಗಮನಿಸಬೇಕು ಎಂದು ಕರೆ ನೀಡಿದರು. ಗಾಂಧೀಜಿಯವರ ಶಾಂತಿ, ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಯುವಕರು ಅನುಸರಿಸಬೇಕು ಎಂದು ಪ್ರೋತ್ಸಾಹಿಸಿದರು.
ದೆಹಲಿಯ ನಿರ್ಭಯ ಹಾಗೂ ಕರ್ನಾಟಕದ ಸೌಜನ್ಯ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಹೆಣ್ಣು ಮಕ್ಕಳ ರಕ್ಷಣೆಯು ನಾವೆಲ್ಲರ ಹೊಣೆ ಎಂಬುದನ್ನು ನೆನಪಿಸಿದರು. ನ್ಯಾಯ ನೀಡಲು ವಿಫಲವಾಗುತ್ತಿರುವ ಸಮಾಜದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಿಬಿರದ ಭಾಗಿಯಾಗಿದ್ದ ಮಕ್ಕಳಿಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರಗಳ ಬಗ್ಗೆ ಕಿವಿಯಾಗಿರಲು ಹಾಗೂ ತೆರೆದ ಮನಸ್ಸು ಹಾಗೂ ಹೃದಯದಿಂದ ಪ್ರತಿಕ್ರಿಯಿಸಬೇಕೆಂದು ಕರೆ ನೀಡಿದರು.
ಗಾಂಧೀಜಿಯವರ ಜೀವನದ ಉದಾಹರಣೆಗಳನ್ನು ನೀಡಿದ ಅವರು, ದಕ್ಷಿಣ ಆಫ್ರಿಕಾದಲ್ಲಿನ ಅನ್ಯಾಯವನ್ನು ವೈಯಕ್ತಿಕವಾಗಿ ಅಲ್ಲ, ಸಾಮಾಜಿಕ ಪಿಡುಗಾಗಿ ಕಂಡದ್ದರಿಂದ ಬ್ಯಾರಿಸ್ಟರ್ ಗಾಂಧಿ ಸತ್ಯಾಗ್ರಹಿಯಾಗಿ ಭಾರತಕ್ಕೆ ಮರಳಿದರು ಎಂದರು. ಗಾಂಧೀಜಿಯವರ ಹೋರಾಟದ ಫಲವಾಗಿ ಬ್ರಿಟಿಷ್ ವಸಾಹತುಶಾಹಿಗಳು ದೇಶ ಬಿಟ್ಟರು, ಆದರೆ ಸಾಂಸ್ಕೃತಿಕ ದಾಸ್ಯತ್ವ ಉಳಿದಿದೆ ಎಂದು ವೀಕ್ಷಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳೇ ಅನ್ಯಾಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಗಾಂಧೀಜಿಯವರ ಅಹಿಂಸೆ ಮಾತ್ರ ಈ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿಯಾದ ಅಸ್ತ್ರವಲ್ಲದೆ, ಮಹಿಳೆಯರು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಲ್ಲರು ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.
– ವರದಿKKP ನ್ಯೂಸ್