“ಬೇಟಿ ಬಚಾವೊ – ಬೇಟಿ ಪಡಾವೊ” ಯೋಜನೆಯಡಿ ಡಿಜಿಟಲ್‌ ಸಾಕ್ಷರತೆ ಹಾಗೂ ಸೈಬರ್‌ ಭದ್ರತಾ ಅರಿವು ಕಾರ್ಯಕ್ರಮ

“ಬೇಟಿ ಬಚಾವೊ – ಬೇಟಿ ಪಡಾವೊ” ಯೋಜನೆಯಡಿ ಡಿಜಿಟಲ್‌ ಸಾಕ್ಷರತೆ ಹಾಗೂ ಸೈಬರ್‌ ಭದ್ರತಾ ಅರಿವು ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯದಲ್ಲಿ “ಬೇಟಿ ಬಚಾವೊ – ಬೇಟಿ ಪಡಾವೊ” ಯೋಜನೆಯಡಿ ಡಿಜಿಟಲ್ ಸಾಕ್ಷರತೆ ಹಾಗೂ ಸೈಬರ್‌ ಭದ್ರತಾ ಅರಿವು ಕಾರ್ಯಕ್ರಮ ನಡೆಯಿತು 

ದಿನಾಂಕ 14-11-2025 ರಂದು ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿ ಯಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸರಕಾರಿ ಮಹಾವಿದ್ಯಾಲಯ ಮತ್ತು ಜಿಲ್ಲಾ ಮಹಿಳಾ ಸಬಲೀಕರಣ ಘಟಕಗಳ ಸಂಯುಕ್ತಾಶ್ರಯದಲ್ಲಿ “ಬೇಟಿ ಬಚಾವೊ – ಬೇಟಿ ಪಡಾವೊ” ಯೋಜನೆಯಡಿ *ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್‌ ಭದ್ರತಾ ಕುರಿತು ವಿದ್ಯಾರ್ಥಿಗಳ ಅರಿವು ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀ ರಾಜಕುಮಾರ ರಾಠೋಡ ಅವರು ಅತಿಥಿ ಗಣ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರಿಗ್ಸ್ವಾಗತ ಕೋರಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್‌ ಅವರು ಮಕ್ಕಳ ದಿನದ ಶುಭಾಶಯ ಕೋರಿ, ಇಂದಿನ ಡಿಜಿಟಲ್ ಯುಗದಲ್ಲಿ ಹೆಣ್ಣು-ಗಂಡು ಮಕ್ಕಳು ಸಮಾನವಾಗಿ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್‌ ಭದ್ರತಾ ಜ್ಞಾನ ಹೊಂದುವುದು ಅತ್ಯವಶ್ಯಕ ಎಂದು ತಿಳಿಸಿದರು. ಪ್ರತಿಭೆಯನ್ನು ಗುರುತಿಸಿ ಬೆಳೆಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ದೇಶದ ಅಭಿವೃದ್ಧಿಗೆ ಹೆಣ್ಣು ಮಕ್ಕಳ ಶಿಕ್ಷಣವೇ ಆಧಾರ ಎಂದು ಒತ್ತಿಹೇಳಿದರು. “ಇಂತಹ ಅರಿವು ಕಾರ್ಯಕ್ರಮಗಳಿಂದ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ, ಸೈಬರ್‌ ಅಪರಾಧಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ” ಎಂದರು.

ಕಲಾ ವಿಭಾಗದ ಡೀನ್ ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ವಿಜಯಕುಮಾರ ಸಾಲಿಮನಿ ಅವರು ಮಾತನಾಡಿ, ಜಿಲ್ಲೆಯ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್‌ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿರುವುದು ಶಿಕ್ಷಣ ಪಡೆದ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಬಹುದೆಂಬುದಕ್ಕೆ ಉದಾಹರಣೆ ಎಂದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಶ್ರೀಮಂತ ಹೊಳ್ಕರ ಅವರು ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಶೋಷಣೆಗಳನ್ನು ತಡೆಗಟ್ಟಲು ಡಿಜಿಟಲ್‌ ಜಾಗೃತಿ ಅಗತ್ಯವಿದೆ ಎಂದು ಹೇಳಿದರು.

ಸೈಬರ್‌ ಅಪರಾಧ ವಿಭಾಗದ ಪೊಲೀಸ್‌ ನಿರೀಕ್ಷಕ ಡಾ. ಸಂಜೀವಕುಮಾರ ಕಂಬಾರಗೇರೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ದಿಟ್ಟವಾಗಿ ಉಪನ್ಯಾಸ ನೀಡಿ, ಮೊಬೈಲ್ ಹಾಗೂ ಇಂಟರ್ನೆಟ್‌ ಬಳಕೆಯಿಂದ ಉಂಟಾಗುವ ಅಪಾಯಗಳನ್ನು ವಿವರಿಸಿದರು. ಸೈಬರ್‌ ಅಪರಾಧಗಳಿಗೆ ಬಲಿಯಾಗುವ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಯಾವುದೇ ಭಯವಿಲ್ಲದೆ ಪೊಲೀಸರಿಗೆ ದೂರು ನೀಡಬೇಕು ಎಂದು ಧೈರ್ಯ ತುಂಬಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಸವಿತಾ ತಿವಾರಿ ಅವರು “ಬೇಟಾ ಭಾಗ್ಯಸೇ ಹೋತಾ ಹೆ, ಬೇಟಿ ಸೌಭಾಗ್ಯಸೇ ಹೊತಿ ಹೆ” ಎಂಬ ಸಂದೇಶ ನೀಡಿ, ಹೆಣ್ಣು ಮಕ್ಕಳು ವಿದ್ಯೆಯ ಮೂಲಕ ದೇಶವನ್ನು ಆಳುವ ಶಕ್ತಿಯುಳ್ಳವರು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಮಹೇಶ ಮೇಗಣ್ಣವರ್, ಸಿಬ್ಬಂದಿ ಕಾರ್ಯದರ್ಶಿ ಡಾ. ರವೀಂದ್ರಕುಮಾರ ಭಂಡಾರಿ, ಜಿಲ್ಲಾ ನಿರೂಪಣಾಧಿಕಾರಿ ಶ್ರೀ ಮುರುಗೇಶ ಗುಣಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ರೀ ಶಿವಶರಣಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಎನ್‌.ಸಿ.ಸಿ. ಯಲ್ಲಿ ವಿಶೇಷ ಸಾಧನೆ ಮಾಡಿದ ಕುಮಾರಿ ಅಶ್ಮಿತಾ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಕುಮಾರಿ ಸ್ವಪ್ನಾರೆಡ್ಡಿ ಇವರಿಗೆ ಜಿಲ್ಲಾಧಿಕಾರಿಗಳು ವಿಶೇಷ ಸನ್ಮಾನ ಮಾಡಿದರು.

ಡಾ. ಬಲಭೀಮ ಸಾಂಗ್ಲಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಮಿಷನ್ ಸಂಯೋಜಕಿ ಶ್ರೀಮತಿ ವಿಜಯಲಕ್ಷ್ಮಿ ಜಾಧವ್ ಮಿಷನ್ ಶಕ್ತಿ ಯೋಜನೆ ಕುರಿತ ಸಂಕ್ಷಿಪ್ತ ಮಾಹಿತಿ ನೀಡಿ ವಂದನೆಗಳೊಂದಿಗೆ ಕಾರ್ಯಕ್ರಮಕ್ಕೆ ತೆರೆಬೀಳಿಸಿದರು.