ಪುಸ್ತಕ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಕೆ.ಎಸ್. ನಾಯ್ಕ್‌ ಅವರಿಗೆ ಗೌರವ

ಪುಸ್ತಕ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಕೆ.ಎಸ್. ನಾಯ್ಕ್‌ ಅವರಿಗೆ ಗೌರವ

ಕಲಬುರಗಿ: ಇತ್ತೀಚೆಗೆ ನಗರದ ಗೋಧುತಾಯಿನಗರ ನಿವಾಸಿ ಹಾಗೂ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್. ನಾಯ್ಕ್‌ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ *ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ*, ಬೆಂಗಳೂರು ಇವರು 2024ನೇ ಸಾಲಿನ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರೊ. ನಾಯ್ಕ್‌ ಅವರ ಆತ್ಮಕಥನಾತ್ಮಕ ಕೃತಿ *ವಲಸೆ ಹಕ್ಕಿಯ ಹಾಡು* ಗೆ ಈ ಪ್ರಶಸ್ತಿ ಲಭಿಸಿದ್ದು, ಅವರು ತನ್ನ ವೃತ್ತಿ ಜೀವನದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಕಾಲೇಜಿನಲ್ಲಿ ಅತ್ಯುತ್ತಮ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಉತ್ತಮ ಲೇಖಕ, ಕವಿ ಹಾಗೂ ಸಾಹಿತಿಯಾಗಿದ್ದು, ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿ, ಜನಮನದಲ್ಲಿ ಗುರುತಿಸಿಕೊಂಡಿದ್ದಾರೆ.

ಜೇವರ್ಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಸಾಹಿತ್ಯ ಸೇವೆಯಲ್ಲಿ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೆ, ಸರಳವಾದ ಜೀವನ ಶೈಲಿಯೊಂದಿಗೆ ಸಮಾಜದಲ್ಲಿ ತಮ್ಮದೇ ಆದ ಗೌರವ ಪಡೆದವರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಜಾಪ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ ಅವರು, "ಇದು ಕಲಬುರಗಿಗೆ ಹೆಮ್ಮೆ ತರಿಸುವ ಘಟನೆ. ಅವರ ಸೇವೆ, ಸಾಹಿತ್ಯ ಮತ್ತು ಸಾಮಾಜಿಕ ಸ್ಪಂದನೆಗೆ ಇದು ಸಿಕ್ಕ ಪ್ರಶಸ್ತಿ ನ್ಯಾಯೋಚಿತವಾಗಿದೆ," ಎಂದರು.