ಬೋಂತಿ ತಾಂಡಾದಲ್ಲಿ ಹೋಳಿ ಹಬ್ಬದ ಸಂಭ್ರಮ ಕುಣಿದು ಕುಪ್ಪಳಿಸಿದ ಶಾಸಕ ಪ್ರಭು ಚವ್ಹಾಣ

ಬೋಂತಿ ತಾಂಡಾದಲ್ಲಿ ಹೋಳಿ ಹಬ್ಬದ ಸಂಭ್ರಮ ಕುಣಿದು ಕುಪ್ಪಳಿಸಿದ ಶಾಸಕ ಪ್ರಭು ಚವ್ಹಾಣ

ಬೋಂತಿ ತಾಂಡಾದಲ್ಲಿ ಹೋಳಿ ಹಬ್ಬದ ಸಂಭ್ರಮ ಕುಣಿದು ಕುಪ್ಪಳಿಸಿದ ಶಾಸಕ ಪ್ರಭು ಚವ್ಹಾಣ-

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಾ.14ರಂದು ಸ್ವ-ಗ್ರಾಮ ಬೋಂತಿ ತಾಂಡಾದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕುಟುಂಬ ಸಮೇತ ಹಬ್ಬದಲ್ಲಿ ಪಾಲ್ಗೊಂಡ ಶಾಸಕರು, ಬಂಜಾರಾ ಕಲಾವಿದರೊಂದಿಗೆ ಕೋಲಾಟವಾಡಿದರು. ಮಹಿಳಾ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಯುವಕರೊಂದಿಗೆ ಧ್ವನಿವರ್ಧಕದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಯುವಕ, ಯುವತಿಯರು, ಮಕ್ಕಳು, ಮಹಿಳೆಯರು, ವೃದ್ಧರು ಕುಣಿದು ಸಂತೋಷಪಟ್ಟರು. 

ಮಹಿಳೆಯರು ಸಾಂಪ್ರದಾಯಿಕ ಬಣ್ಣ-ಬಣ್ಣದ ಉಡುಗೆಗಳನ್ನು ಧರಿಸಿದ್ದರೆ, ಪುರುಷರು ಪೇಟಾ‌ ಧರಿಸಿ ಗಮನ ಸೆಳೆದರು. ಶಾಸಕರು ಎಲ್ಲರ ಬಳಿಗೆ ತೆರಳಿ ಬಣ್ಣ ಹಾಕಿ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ವೇಳೆ ವಿವಿಧ ಗ್ರಾಮಗಳಿಂದ ಆಗಮಿಸಿದ ಪುರುಷ ಮತ್ತು ಮಹಿಳಾ ಕಲಾ ತಂಡಗಳಿಂದ ಸಾಂಪ್ರದಾಯಿಕ ಹಾಡು, ನೃತ್ಯ ಪ್ರದರ್ಶನ ಹಾಗೂ ಕೋಲಾಟಗಳು ನಡೆದವು.

ಈ ವೇಳೆ ಮಾತನಾಡಿದ ಶಾಸಕರು, ಹೋಳಿ ಹಬ್ಬಕ್ಕೆ ದೇಶದ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನಮಾನವಿದೆ. ವಿಶೇಷವಾಗಿ ಬಂಜಾರಾ ಸಮಾಜದಲ್ಲಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ಷೇತ್ರದ 165 ತಾಂಡಾಗಳಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.

ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಎಲ್ಲ ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸುವ ನಾನು, ಅಧಿವೇಶನಗಳು ನಡೆಯುತ್ತಿದ್ದರೂ ಕೂಡ ಹಬ್ಬದಲ್ಲಿ ಭಾಗವಹಿಸಿದ್ದೇನೆ. ಔರಾದ(ಬಿ) ಕ್ಷೇತ್ರ ಸಮೃದ್ಧಿಯಾಗಬೇಕು. ರೈತರು ಮತ್ತು ಎಲ್ಲ ನಾಗರಿಕರಿಗೂ ಒಳಿತಾಗಬೇಕೆಂದು ದೇವರಲ್ಲಿ ಬೇಡಿಕೊಂಡಿದ್ದೇನೆ‌ ಎಂದು ಹೇಳಿದರು.

ಸಾಕಷ್ಟು ಸಂಖ್ಯೆಯಲ್ಲಿ ಜನ ವೇಶ ಭೂಷಣಗಳೊಂದಿಗೆ ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತೋಷವಾಗುತ್ತಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕು. ಈ ದಿಶೆಯಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಮಾರುತಿ‌‌‌ ಚವ್ಹಾಣ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಪ್ರತೀಕ್ ಚವ್ಹಾಣ, ಪ್ರದೀಪ ಪವಾರ್, ಬಾಲಾಜಿ ಠಾಕೂರ, ಮಂಜು ಸ್ವಾಮಿ, ಸಚಿನ ರಾಠೋಡ, ಜೈಪಾಲ ರಾಠೋಡ, ಗುರುನಾಥ ರಾಜಗೀರಾ, ಬಾಲಾಜಿ ವಾಗ್ಮಾರೆ‌ ಸೇರಿದಂತೆ ಇತರರು ಉಪಸ್ಥಿತರಿದ್ದರು.