ಮುದ್ರಣ ಕ್ಷೇತ್ರ ಎರಡನೇ ಕ್ಷಿಪ್ರ ವೇಗದ ಬೆಳವಣಿಗೆ ರಂಗ : ತುಷಾರ್ ಧೋತೆ

ಭಾರತ್ ಪ್ರಿಂಟ್ ಎಕ್ಸ್ ಪೋ - 2025 ಜಾಗೃತಿ ಅಭಿಯಾನಕ್ಕೆ ಕಲಬುರಗಿ ಯಲ್ಲಿ ಚಾಲನೆ:
ಮುದ್ರಣ ಕ್ಷೇತ್ರ ಎರಡನೇ ಕ್ಷಿಪ್ರ ವೇಗದ ಬೆಳವಣಿಗೆ ರಂಗ : ತುಷಾರ್ ಧೋತೆ
ಕಲಬುರಗಿ: ಜಾಗತಿಕ ಮಟ್ಟದಲ್ಲಿ ಮುದ್ರಣ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿದೆ ಎಂದುಬೆಂಗಳೂರಿನಲ್ಲಿ ನಡೆಯಲಿರುವ ಭಾರತ್ ಎಕ್ಸ್ ಪೋ 2025 ರ ಸಹ ಚೇರ್ ಮನ್ ತುಷಾರ್ ವಿ. ಧೋತೆ ಹೇಳಿದರು.
ಬೆಂಗಳೂರಿನಲ್ಲಿ ಏ. 24ರಿಂದ 26 ರ ವರೆಗೆ ನಡೆಯಲಿರುವ ಭಾರತ್ ಎಕ್ಸ್ ಪೋ- 2025 ಪ್ರಿಂಟ್ ಮತ್ತು ಪರಿವರ್ತನೆಯ ಪ್ರದರ್ಶನ ಜಾಗೃತಿ ಅಭಿಯಾನವನ್ನು ಕಲಬುರ್ಗಿಯಲ್ಲಿ ಚಾಲನೆ ನೀಡಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿರುವ ಮುದ್ರಣ ರಂಗವು ಭಾರತದಲ್ಲಿ ಔಷಧ ಕಂಪೆನಿಗಳ ಆದಾಯಕ್ಕಿಂತಲೂ ಮುದ್ರಣ ರಂಗದ ಆದಾಯವು ಹೆಚ್ಚಿದೆ. ಮುದ್ರಣ ರಂಗಕ್ಕೆ ಸೇವಾ ಕ್ಷೇತ್ರ ಎಂದು ಪರಿಗಣಿಸದೆ ಕೈಗಾರಿಕಾ ಮಾನ್ಯತೆ ನೀಡಬೇಕಾಗಿದೆ.ಮುದ್ರಣ ರಂಗಕ್ಕೆ ಉತ್ತೇಜನ ನೀಡಲು 5 ಸಾವಿರ ಕೋಟಿ ರೂ. ಎಂಎಸ್ ಎಂಇ ಇಲಾಖೆಯಲ್ಲಿದ್ದರೂ ಶೇ.10ರಷ್ಟು ಬಳಕೆಯಾಗುತ್ತಿಲ್ಲ. ಕ್ಲಸ್ಟರ್ ಸ್ಥಾಪನೆ ಮಾಡಿ ಮುದ್ರಣ ತಂತ್ರಜ್ಞಾನದ ಅತ್ಯಾಧುನಿಕ ಉದ್ಯಮ ಆರಂಭಿಸಲು ಮುಂದಾಗಬೇಕು. ಕ್ಲಸ್ಟರ್ ಗೆ ಶೇ.90ರಷ್ಟು ಆರ್ಥಿಕ ನೆರವು ರಾಜ್ಯ ಮತ್ತು ಕೇಂದ್ರ ನೀಡುತ್ತಿದ್ದು ಕೇವಲ ಶೇ.10ರಷ್ಟು ಬಂಡವಾಳದೊಂದಿಗೆ ಆರಂಭಿಸಬಹುದು.ಕಲಬುರ್ಗಿಯಲ್ಲಿ ಉತ್ತಮ ಅವಕಾಶವಿದೆ ಎಂದರು.
ಭಾರತ್ ಎಕ್ಸ್ ಪೋ ದಲ್ಲಿ 50ರಷ್ಟು ವಿದೇಶಿ ಕಂಪನಿ ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.250ಕ್ಕೂ ಹೆಚ್ಚು ಮಳಿಗೆಗಳು ಇರಲಿದೆ ಎಂದರು.
ಭಾರತದ ಆರ್ಥಿಕತೆ ಗೆ ಮುದ್ರಣ ಕ್ಷೇತ್ರದ ಕೊಡುಗೆ ಅಪಾರ: ಡಾ. ಪೆರ್ಲ
ಭಾರತವು ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿರುವ ಹಾಗೂ ಭೌಗೋಳಿಕವಾಗಿ ಪ್ರಭಾವ ಬೀರುತ್ತಿರುವ ಪ್ರಪಂಚದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮುಂದಿನ ಐದು ವರ್ಷಗಳಲ್ಲಿ ಹೊರಹೊಮ್ಮುತ್ತಿರುವಾಗ ಭಾರತದಲ್ಲಿ ಮುದ್ರಣ ಕ್ಷೇತ್ರವು ಶೇಕಡ 2.9 ರಷ್ಟು ಬೆಳವಣಿಗೆ ದರವನ್ನು ದಾಖಲಿಸಲಿದೆ ಎಂದು ಭಾರತ ಎಕ್ಸ್ ಪೋ 2025 ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.
2024ರಲ್ಲಿ 35.5 ಲಕ್ಷ ಕೋಟಿ ಅಮೆರಿಕನ್ ಡಾಲರ್ ವ್ಯವಹಾರದ ಮುದ್ರಣ ಕ್ಷೇತ್ರವು 2003 ರಲ್ಲಿ 45.9 ಲಕ್ಷ ಕೋಟಿ ವ್ಯವಹಾರ ಮಾಡಲಿದ್ದು ಇದು ಶೇಕಡ 2.9ರಷ್ಟು ಬೆಳವಣಿಗೆ ದರವನ್ನು ದಾಖಲಿಸುತ್ತದೆ ಎಂದು ವರದಿ ತಿಳಿಸಿದೆ ಎಂದರು.
ಯುವಕರು ಎಂಎಸ್ಎಂಇ ಹಾಗೂ ಸ್ಟಾರ್ಟ್ ಅಪ್ ಯೋಜನೆಗಳನ್ನು ಬಳಸಿಕೊಂಡು ಮುದ್ರಣ ಕ್ಷೇತ್ರಕ್ಕೆ ಪ್ರವೇಶ ಮಾಡುವುದರೊಂದಿಗೆ ಆರ್ಥಿಕ ಸಬಲೀಕರಣಕ್ಕೆ ಸಜ್ಜಾಗಬೇಕಾಗಿದೆ. ಮುದ್ರಣ ಕ್ಷೇತ್ರದವರು ಗ್ರಾಹಕರ ಮನೋಧರ್ಮಕ್ಕೆ ಅನುಗುಣವಾಗಿ ಟ್ರೆಂಡ್ ಕ್ರಿಯೇಟರ್ ಆಗಿ ಗ್ರಾಹಕ ಮನೋಧರ್ಮವನ್ನು ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಿಂಟರ್ಸ್ ಅಸೋಸಿಯೇಷನ್ ಸಂಚಾಲಕರಾದ ಮಹೇಶ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿ ಪ್ರತಿ ವಿಭಾಗದಲ್ಲಿ ಕ್ಲಸ್ಟರ್ ರಚನೆ ಮಾಡಿ ಅತ್ಯಾಧುನಿಕ ತಂತ್ರಜ್ಞಾನದ ಮುದ್ರಣ ವ್ಯವಸ್ಥೆ ಅನುಷ್ಠಾನ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಹಾಗೂ ಮುದ್ರಣ ಕ್ಷೇತ್ರದ ಅತ್ಯಧುನಿಕ ಬದಲಾವಣೆಗೆ ಮುದ್ರಣಕಾರರು ತೆರೆದುಕೊಳ್ಳಲು ಭಾರತ್ ಎಕ್ಸ್ ಪೋ 2025 ಉತ್ತಮ ಅವಕಾಶ ಕಲ್ಪಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ನ ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ ಚಾವ್ಡ ಮಾತನಾಡಿದರು. ಕಲಬುರ್ಗಿ ಜಿಲ್ಲಾ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಾಣಿಕ ಪ್ರಭು ಮಾದಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ರವೀಂದ್ರ ಮುಕ್ಕಾ ಸ್ವಾಗತಿಸಿ ನಿರೂಪಿಸಿದರು. ಜಿಲ್ಲಾ ಕೋಶಾಧಿಕಾರಿ ಕೈಲಾಸ್ ಮೋರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದರಾಮ ಹಂಚಿನಾಳ ಪ್ರಾರ್ಥನ ಗೀತೆ ಹಾಡಿದರು. ನೀಲಕಂಠ ಬಿರಾದಾರ್, ಶಿವಕುಮಾರ್ ಬಿರಾದಾರ್ ಶರಣು ಹಡಲಗಿ, ಮಾಲ್ಪನಿ, ನ್ಯೂಯಾರ್ಕ್, ಲಿಂಗರಾಜ ಹರಶೆಟ್ಟಿ, ಪ್ರಶಾಂತ್ ತಡಕಲ್ ವಿನಾಯಕ ಅತನೂರು, ರಾಜು ಡಿಗ್ಗಿ, ಅರುಣ್ ಕಳಸ್ಕರ್, ಸಿದ್ದು ಧನ ಶೆಟ್ಟಿ,ಮಂಜುನಾಥ ಕಾಳಗಿ, ರಮೇಶ್ ಪುರಾಣಿಕ್, ನಾಗರಾಜ್ ಬಿರಾದಾರ್, ಅನಿಲ್, ಬಸವರಾಜ ವಾಗ್ದಾಳೆ, ಗೋರಖ್ ನಾಥ ಮೂಲಗೆ, ರಘುವೀರ ಚೌಹಾಣ, ಶಿವಕುಮಾರ್ ಶಾಬಾದಿ, ಮಂಜುನಾಥ ಕಲಬುರಗಿ, ಸಿದ್ದು ಹೂಗಾರ್ ಮತ್ತಿತರರಿದ್ದರು.