ಬಂಜಾರಾ ಹಾಡಿನ ಜನಪ್ರಿಯತೆ ಖುಷಿ ತಂದಿದೆ: ಅಮೃತಾ ಫಡ್ನವೀಸ್

ಬಂಜಾರಾ ಕಲಾರತ್ನ ಪ್ರಶಸ್ತಿ ಪ್ರದಾನ
ಬಂಜಾರಾ ಹಾಡಿನ ಜನಪ್ರಿಯತೆ ಖುಷಿ ತಂದಿದೆ: ಅಮೃತಾ ಫಡ್ನವೀಸ್
ನವದೆಹಲಿ: ಬಂಜಾರ ಸಮುದಾಯದ "ಮಾರೋದೇವಾ ಸೇವಾಲಾಲ್ ಮಾರೋ ಬಾಪು ಸೇವಾಲಾಲ್" ಹಾಡನ್ನು ಹಾಡಿ ಜನಪ್ರಿಯಗೊಂಡು ಇದೀಗ ನನ್ನನ್ನು ಬಂಜಾರಾ ಸಮುದಾಯದ ಮಗಳೆಂದು ಗುರುತಿಸಿರುವುದಕ್ಕೆ ಅತಿವ ಖುಷಿಯಾಗುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರ ಧರ್ಮಪತ್ನಿ ಸಾಮಾಜಿಕ ಕಾರ್ಯಕರ್ತ ಗಾಯಕಿ ಶ್ರೀಮತಿ ಅಮೃತಾ ಫಡ್ನವಿಸ್ ಸಂತಸ ಹಂಚಿಕೊಂಡರು.
ನವದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಫೆಬ್ರವರಿ 28ರಂದು ನಡೆದ ಸಂತ ಸೇವಾಲಾಲರ 286ನೇ ಜಯಂತಿ ಸಂದರ್ಭದಲ್ಲಿ ಕೊಡ ಮಾಡಿದ ಬಂಜಾರಾ ಕಲಾರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದ ಸಂಭ್ರಮವಾದರೆ ನಮ್ಮ ದೆಹಲಿಯಲ್ಲಿ ಬಂಜಾರ ಸಮುದಾಯದವರ ಕುಂಭಮೇಳ ಉತ್ಸವ ರೂಪದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದು ಹೆಮ್ಮೆಯ ಸಂಗತಿ. ಬಂಜಾರ ಸಮುದಾಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಹಾಡನ್ನು ಹಾಡಲು ಸಮಗ್ರ ಅಧ್ಯಯನ ಮಾಡಿ ತಿಳಿದುಕೊಂಡೆನು. ಸೇವಾಲಾಲರ ಆಶೀರ್ವಾದದಿಂದ ಈ ಹಾಡು ಇಡೀ ದೇಶದ ಬಂಜಾರಾ ಜನರ ಮನಮೆಚ್ಚುವಂತಾದುದು ಖುಷಿ ತಂದಿದೆ ಎಂದರು. ನನ್ನ ರೋಮ ರೋಮಗಳಲ್ಲೂ ಕೂಡ ಸೇವಾಲಾಲರ ಭಕ್ತಿ ಸಂಚಯನಾಗುವಂತೆ ಆಗಿರುವುದಕ್ಕೆ ಧನ್ಯತೆ ಹೊಂದಿದ್ದೇನೆ. ಸೇವಾಲಾಲರ ಪ್ರಕೃತಿ ಪ್ರೇಮ ಮತ್ತು ಜನತೆಯ ಮೇಲಿನ ಪ್ರೇಮ ನನಗೆ ಪ್ರೇರಣೆ ನೀಡಿದ್ದು ಈ ಹಾಡನ್ನು ಹಾಡುವುದರ ಮೂಲಕ ಬಂಜಾರಾ ಸಮುದಾಯದ ಹೆಣ್ಣು ಮಗಳಾಗಿ ನನ್ನನ್ನು ಗುರುತಿಸಿ ರುವುದಕ್ಕೆ ಧನ್ಯತೆ ಇದೆ. ಮೊಘಲರ ವಿರುದ್ಧ ಯುದ್ಧ ಮಾಡಿ ಹೋರಾಡಿದ ಈ ಜನಾಂಗದ ಬಗ್ಗೆ ಹೆಮ್ಮೆಯಿದೆ ಎಂದರು.
ನಂತರ ಬಹುಜನರ ಅಪೇಕ್ಷೆಯ ಮೇರೆಗೆ ಮಾರೋ ದೇವಾ ಮಾರೋ ದೇವಾ ಸೇವಾಲಾಲ್ ಮಾರೋ ಬಾಪೂ ಸೇವಾಲಾಲ ಹಾಡನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಲಂಬಾಣಿ ನೃತ್ಯ ಗಾತಿಯರ ತಂಡದ ಜೊತೆ ಹೆಜ್ಜೆ ಹಾಕಿ ಅಮೃತಾ ಫಡ್ನವೀಸ್ ಸೇರಿದ ಜನಸ್ತೋಮವನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಇಡೀ ಕಾರ್ಯಕ್ರಮದಲ್ಲಿ ಅಮೃತಾ ಫಡ್ನವೀಸ್ ತಾರಾ ಮೆರುಗು ನೀಡಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ಬಂಜಾರಾ ಭಾಷೆಯಲ್ಲಿ ಭಾಷಣ ಮಾಡಿ ಜನ ಮೆಚ್ಚುಗೆ ಗಳಿಸಿದರು.