ಜಗದಂಬಾ ಜಾತ್ರೆ: ಜಾನಪದ ಕಲೆಗಳ ಅನಾವರಣ

ಜಗದಂಬಾ ಜಾತ್ರೆ: ಜಾನಪದ ಕಲೆಗಳ ಅನಾವರಣ

ಜಗದಂಬಾ ಜಾತ್ರೆ: ಜಾನಪದ ಕಲೆಗಳ ಅನಾವರಣ

ಔರಾದ(ಬಿ): ತಾಲ್ಲೂಕಿನ ಘಮಸುಬಾಯಿ ತಾಂಡಾ ಬೋಂತಿಯಲ್ಲಿ ಇಚ್ಛಾಪೂರ್ತಿ ಮಾತಾ ಜಗದಂಬಾ ಜಾತ್ರಾ ಮಹೋತ್ಸವದ ನಿಮಿತ್ತ ಫೆ.11ರಂದು ನಡೆದ ಜಾನಪದ ಸಂಭ್ರಮದಲ್ಲಿ ಜಾನಪದ ಕಲೆಗಳ ಅನಾವರಣಗೊಂಡಿತ್ತು.

ಬಿಗ್‌ಬಾಸ್ ಖ್ಯಾತಿಯ ಹನುಮಂತ ಲಮಾಣಿ ಕನ್ನಡ ಮತ್ತು ಬಂಜಾರಾ ಭಾಷೆಯಲ್ಲಿ ಹಾಡಿದ ಹಾಡುಗಳಿಗೆ ಭಕ್ತಾದಿಗಳನ್ನು ಕುಣಿದು ಕುಪ್ಪಳಿಸಿದರು. ಶಿಳ್ಳೆ, ಕೇಕೆ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು. ಶಾಸಕರು ಬಂಜಾರಾ ಕಲಾ ತಂಡ ಹಾಗೂ ಮತ್ತಿತರೆ ಕಲಾವಿದರ ಜೊತೆಗೆ ಕುಣಿದು ಕಲಾವಿದರ ಹುರುಪು ಹೆಚ್ಚಿಸಿದರು.

ಕಲಾಪ್ರರ್ದನ ನೀಡಿದ ಎಲ್ಲ ಕಲಾವಿದರಿಗೆ ಶಾಸಕರು ವೇದಿಕೆಯಲ್ಲಿ ಶಾಲು ಹೊದಿಸಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಾ ತಂಡಗಳು ರಾತ್ರಿವರೆಗೆ ಕಲಾಪ್ರದರ್ಶನ ನೀಡಿದರು.

ರಾಮನಗರದ ವೆಂಕಟೇಶ ತಂಡದ ಪೂಜಾ ಕುಣಿತ, ಅರುಣಕುಮಾರ ತಂಡದ ಚಿಲಿಪಿಲಿ ಗೊಂಬೆ, ಅಜಯಕುಮಾರ ತಂಡದ ಕೋಳಿ ನೃತ್ಯ ಎಲ್ಲರನ್ನು ಆಕರ್ಷಿಸಿದವು. ಬಳ್ಳಾರಿಯ ಕುಚಿಪುಡಿ ಕಲಾವಿದ ಬಸವರಾಜ ಮಯೂರಿ ನೃತ್ಯ ಪ್ರದರ್ಶನ ನೀಡಿ ಕಲಾಸಕ್ತರನ್ನು ರಂಜಿಸಿದರು. ಬರೂರಿನ ಚರ್ಮವಾದ್ಯ, ಕಲಬುರಗಿಯ ಲಮಾಣಿ ನೃತ್ಯ, ಹಗಲು ವೇಶ ಪ್ರದರ್ಶನಗಳು ಜಾತ್ರೆಯ ಮೆರಗನ್ನು ಹೆಚ್ಚಿಸಿದವು.

ಸಂಗಮೇಶ ತಂಡ ಸುಗಮ ಸಂಗೀತ, ಸಂಜೀವ ಉಜನಿ ತಂಡ ವಚನ ಗಾಯನ, ಚನ್ನಮ್ಮ ತಂಡ ಗೀಗಿ ಪದ, ತುಕಾರಾಮ ಭೂತಿ ಜಾನಪದ ಜಾದು, ವೀರಶೆಟ್ಟಿ ತಂಡ ಕುಟ್ಟುವ ಪದ, ರಾಮಚಂದ್ರ ತಂಡ ಕೋಲಾಟ, ಚಂದ್ರಕಾಂತ ತಂಡ ಚಕ್ರ ಭಜನೆ, ಲಲಿತಾ ತಂಡ ಲಮಾಣಿ ನೃತ್ಯ, ವಿಜಯಲಕ್ಷ್ಮಿ ತಂಡ ಬಂಜಾರಾ ಪದಗಳು, ಪಾರ್ವತಿ ತಂಡ ಸಂಪ್ರದಾಯ ಪದಗಳು, ನಾಗಪ್ಪ, ವಿಠಲ, ಮಾರುತಿ ಅವರ ತಂಡಗಳಿಂದ ಜಾನಪದ ಗಾಯನ, ಝರೆಮ್ಮ ತಂಡ ಭಜನೆ ಪದ, ಮಾರುತಿ ತಂಡ ವಚನ ಗಾಯನ, ವಿಜಯಲಕ್ಷ್ಮಿ ಶಿಂಧೆ ಅಂಬೇಡ್ಕರ್ ಪದಗಳು, ಸಂಗೀತ ತಂಡ ದೇಶಭಕ್ತಿ ಗೀತೆಗಳು, ಮಧುಕರ ತಂಡ ಪಾರಿಜಾತ ಭಜನೆ, ಸುಧಾಕರ ತಂಡ ಸಂಗೀತ, ಯಲ್ಲಾಲಿಂಗ ರೊಟ್ಟೆ ಸುಗಮ ಸಂಗೀತ, ಶಾರದಾಬಾಯಿ ತಂಡ ಲಮಾಣಿ ನೃತ್ಯ ಪ್ರದರ್ಶನ ನೀಡಿತು.

 ನಮ್ಮ ಧರ್ಮ ನಮ್ಮ ಹಕ್ಕು:

 ನಮ್ಮ ಧರ್ಮ ನಮ್ಮ ಹಕ್ಕು. ಹಾಗಾಗಿ ನಮ್ಮ ಸನಾನತ ಧರ್ಮವನ್ನು ಉಳಿಸಬೇಕು. ಜೊತೆಗೆ ನಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ದಿಶೆಯಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.

ಇಚ್ಚಾಪೂರ್ತಿ ಮಾತಾ ಜಗದಂಬಾ ಜಾತ್ರಾ ಮಹೋತ್ಸವದ ನಿಮಿತ್ತ ಘಮಸುಬಾಯಿ ತಾಂಡಾ ಭೋಂತಿಯಲ್ಲಿ ಫೆ.11ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸನಾತನ ಧರ್ಮ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ನಮ್ಮಲ್ಲಿರುವ ಪುರಾತನ ಕಲೆಗಳನ್ನು ಸಂರಕ್ಷಿಸಬೇಕು. ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ 2009ರಿಂದ ಜಾತ್ರೆಯಲ್ಲಿ ಜಾನಪದ ಸಂಭ್ರಮದAತಹ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದೇನೆ ಎಂದು ಹೇಳಿದರು.

ಔರಾದ(ಬಿ) ಕ್ಷೇತ್ರದಲ್ಲಿ 320 ಕಲಾವಿದರಿಗೆ ಸರ್ಕಾರದಿಂದ 2 ಸಾವಿರ ಮಾಶಾಶನ ಕೊಡಿಸುವ ವ್ಯವಸ್ಥೆ ಮಾಡಿದ್ದೇನೆ. ಕಲಾವಿದರಿಗೆ ಸರ್ಕಾರದಿಂದ ಇರುವ ಯೋಜನೆಗಳನ್ನು ಒದಗಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಅವರಿಗೆ ಬೇಕಾಗುವ ಎಲ್ಲ ರೀತಿಯ ನೆರವನ್ನು ನೀಡಲು ಸದಾ ಸಿದ್ದನಿದ್ಧೇನೆ. ಮುಂದಿನ ದಿನಗಳಲ್ಲಿ ಕಲಾವಿದರ ಮಾಶಾಸನ 3 ಸಾವಿರಕ್ಕೆ ಏರಿಕೆಯಾಗಲಿದ್ದು, ಕ್ಷೇತ್ರದ ಎಲ್ಲ ಕಲಾವಿದರಿಗೆ ಮಾಶಾಸನ ಸೌಲಭ್ಯ ಸಿಗಬೇಕು ಎಂದು ತಿಳಿಸಿದರು.

ಇಚ್ಚಾಪೂರ್ತಿ ಮಾತಾ ಜಗದಂಬಾ ಶಕ್ತಿಶಾಲಿ ದೇವತೆಯಾಗಿದ್ದು, ಭಕ್ತರು ಶ್ರದ್ದೆಯಿಂದ ಬೇಡಿದರೆ ಎಲ್ಲವನ್ನು ಕೊಡುತ್ತಾಳೆ. ದೇವಿಯ ಕೃಪೆ ಮತ್ತು ಜನತೆಯ ಆಶೀರ್ವಾದದಿಂದಾಗಿ ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಮಕ್ಕಳಿಲ್ಲದೇ ಕೊರಗುವವರು, ನೌಕರಿಗಾಗಿ ಪರಿತಪಿಸುವವರು, ಕೌಟುಂಬಿಕ ಸಮಸ್ಯೆಯಿಂದ ನರಳುತ್ತಿರುವ ಅನೇಕ ಜನರು ದೇವರ ಮೊರೆ ಹೋಗಿ ಸಮಸ್ಯೆಯಿಂದ ವಿಮುಕ್ತಿಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ದೇವಿಯ ಮಹಿಮೆಯನ್ನು ಕೊಂಡಾಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಗಡಿ ಭಾಗದಲ್ಲಿ ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ. ಇಂತಹ ಕೆಲಸಗಳು ಎಲ್ಲ ಕಡೆ ಆಗಬೇಕು ಎಂದು ತಿಳಿಸಿದರು. ಆಶೀರ್ವಚನ ನೀಡಿದ ಪೌರಾದೇವಿಯ ಪೂಜ್ಯ ಬಾಬುಸಿಂಗ ಮಹಾರಾಜರು ಮಾತನಾಡಿ, ಗಡಿ ಭಾಗದಲ್ಲಿ ಕಲೆ, ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಶಾಸಕರಾದ ಪ್ರಭು ಚವ್ಹಾಣ ಅವರು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಬಣ್ಣಿಸಿದರು.

ಈ ಸಂದರ್ಭದಲ್ಲಿ ಪೂಜ್ಯ ಗುರುಬಸವ ಪಟ್ಟದೇವರು, ಡಾ.ಶಂಭುಲಿAಗ ಶಿವಾಚಾರ್ಯರು, ಪೂಜ್ಯ ಜಯಶಾಂತ ಲಿಂಗ ಸ್ವಾಮಿ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿ, ಪೂಜ್ಯ ಬಸವಲಿಂಗ ಮಹಾಸ್ವಾಮಿ, ಪೂಜ್ಯ ಚಿದಾನಂದ ಮಹಾಸ್ವಾಮಿ, ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ, ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಧೊಂಡಿಬಾ ನರೋಟೆ, ಪ್ರತೀಕ ಚವ್ಹಾಣ, ಸಚಿನ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು. ನವಲಿಂಗ ಸ್ವಾಮಿ ನಿರೂಪಿಸಿ ವಂದಿಸಿದರು.