ನಾಲವಾರ ಜಾತ್ರೆಗೆ ಸಂಭ್ರಮದ ತೆರೆ
ನಾಲವಾರ ಜಾತ್ರೆಗೆ ಸಂಭ್ರಮದ ತೆರೆ
ಲೋಕಉದ್ದಾರಕ್ಕಾಗಿ ಕೋರಿ ಸಿದ್ದೇಶ್ವರ ಜನನ ಡಾ.ಸಿದ್ಧತೋಟೇಂದ್ರ ಶ್ರೀ
ಲೋಕದಲ್ಲಿ ಅಶಾಂತಿ ದೂರ ಮಾಡಲು ಮತ್ತು ಜನರಲ್ಲಿನ ಅಂಧಕಾರ ಕಳೆಯಲು ಸಿದ್ದಿಪುರುಷರಾಗಿ ನಂಬಿ ಬರುವ ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿ ಈ ಲೋಕಕ್ಕೆ ಜನಿಸಿದವರು ಸಿದ್ದಿಪುರುಷ ಶ್ರೀ ಕೋರಿಸಿದ್ದೇಶ್ವರರು ಎಂದು ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ರಾತ್ರಿನಾಲವಾರ ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ರಥದ ಕಳಸಾವರೋಹಣ(ಕಳಸ ಇಳಿಸುವ) ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಮನುಷ್ಯ ದೇವರು ಮತ್ತು ಧರ್ಮದ ಬಗ್ಗೆ ನಂಬಿಕೆ ಕಳೆದುಕೊಂಡಿಲ್ಲ.ಏನೆಲ್ಲಾ ಸಿರಿ-ಸಂಪತ್ತು, ಸೌಲತ್ತುಗಳಿದ್ದರೂ ಸಹ ಮನುಷ್ಯ ಮಾನಸಿಕ ನೆಮ್ಮದಿಗೆ ಮನುಷ್ಯ ಕೊನೆಗೆ ಆಶ್ರಯಿಸುವುದು ದೇವರನ್ನೇ! ಅಂತಹ ಅಪಾರವಾದ ನಂಬಿಕೆಗೆ ಇಂಬುಕೊಡುವಂತೆ ಜನಸಮುದಾಯವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಮೂಲಕ ಶ್ರೀ ಕೋರಿಸಿದ್ದೇಶ್ವರ ಜನಿಸಿದ್ದರು ಲೋಕ ಕಲ್ಯಾಣವೇ ಅವರ ಮೂಲ ಉದ್ದೇಶವಾಗಿತ್ತು ಅವರ ಎಂದರು.
ನಾಲವಾರ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಗ್ರಾಮೀಣ ಭಾಗದಲ್ಲಿದ್ದರೂ ಸಹ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಬಂದು ಭಕ್ತಿ ಭಾವದಿಂದ, ಅಷ್ಟೇ ಸಡಗರ ಸಂಭ್ರಮದಿಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದನ್ನು ಕಂಡು ಮನಸ್ಸು ತುಂಬಿ ಬಂದಿದೆ.ನಾಡಿಗೆ ಭಗವಂತ ಕೋರಿಸಿದ್ಧೇಶ್ವರ ಸುಖ-ಸಮೃದ್ಧಿಯನ್ನು ದಯಪಾಲಿಸಲಿ ಎಂದು ಎಲ್ಲರ ಪರವಾಗಿ ನಾವೂ ಪ್ರಾರ್ಥಿಸುತ್ತೇವೆ ಎಂದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಕಳೆದ ಹದಿನೈದು ದಿನಗಳಿಂದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆದು,ನಾಡಿನ ಹಿರಿಯ ಮಠಾಧೀಶರು,ಸಾಂಸ್ಕೃತಿಕ, ಸಾಮಾಜಿಕ ಲೋಕದ ಗಣ್ಯರು, ರಾಜಕೀಯ ಧುರೀಣರು ಪಾಲ್ಗೊಂಡು ಜಾತ್ರೆಯ ಮೆರುಗನ್ನು ಹೆಚ್ಚಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಡೆದ ಬೃಹತ್ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಎತ್ತುಗಳಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ನಡೆಯಿತು.
ರಥೋತ್ಸವದ ದಿನ ರಥಕ್ಕೆ ಅಲಂಕರಿಸಲಾಗಿದ್ದ ಕಳಸಗಳನ್ನು ಇಳಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಬಿತ್ತು.
ಕಳಸಾವರೋಹಣದ ಈ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವ ಕಾರ್ಯಕ್ರಮ,ಜಾನಪದ ಕಲಾತಂಡಗಳ ಕಲಾಪ್ರದರ್ಶನ ಏರ್ಪಡಿಸಲಾಗಿತ್ತು.
ಜಾತ್ರೆಯ ಯಶಸ್ಸಿಗೆ ದುಡಿದ ನೂರಾರು ದಾನಿಗಳನ್ನು, ಸೇವಾಕರ್ತರನ್ನು ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.
ಕೊನೆಯಲ್ಲಿ ಡಾ.ಸಿದ್ಧತೋಟೇಂದ್ರ ಶ್ರೀಗಳೇ ತಮ್ಮ ಕೈಯಾರೆ ಬಗೆಬಗೆಯ ಭಕ್ಷ್ಯಗಳನ್ನು ನೆರೆದಿದ್ದ ಭಕ್ತರಿಗೆ ಪ್ರಸಾದ ರೂಪದಲ್ಲಿ ಉಣಬಡಿಸಿ ಸಂಭ್ರಮಿಸಿದರು.