ಆಳಂದ ಮಹಾಂತೇಶ್ವರ ಹಿರೇ ಮಠದಲ್ಲಿ ಇಂದಿನಿಂದ (ಫೆ. 20ರಿಂದ ) ಆಧ್ಯಾತ್ಮಿಕ ಪ್ರವಚನ ಮಹೋತ್ಸವ ಆರಂಭ
ಆಳಂದ ಮಹಾಂತೇಶ್ವರ ಹಿರೇ ಮಠದಲ್ಲಿ ಇಂದಿನಿಂದ (ಫೆ. 20ರಿಂದ ) ಆಧ್ಯಾತ್ಮಿಕ ಪ್ರವಚನ ಮಹೋತ್ಸವ ಆರಂಭ
ಆಳಂದ: ಐತಿಹಾಸಿಕ ಧಾರ್ಮಿಕ ಪರಂಪರೆಯೊಂದಿಗೆ ಕಂಗೊಳಿಸುವ ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ, ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ನಿಮಿತ್ತ, ಶುಕ್ರವಾರ ದಿಂದ ಫೆಬ್ರವರಿ ಮಂಗಳವಾರದವರ 24ರವರೆಗೆ ಐದು ದಿನಗಳ ಕಾಲ ಭವ್ಯ ಆಧ್ಯಾತ್ಮಿಕ ಪ್ರವಚನ ಮಹೋತ್ಸವವನ್ನು ಆಯೋಜಿಸಲಾಗಿದೆ.
ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಪ್ರತಿದಿನ ಸಂಜೆ 7.30 ಗಂಟೆಗೆ ಭಕ್ತರ ಮನ–ಮನಸ್ಸಿಗೆ ಶಾಂತಿ, ಶ್ರದ್ಧೆ ಮತ್ತು ಚೈತನ್ಯ ತುಂಬುವ ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.
ಕಿರಿಯ ಪೀಠಾಧಿಪತಿಗಳಾದ ಶ್ರೀ ಡಾ. ಅಭಿನವ ಚನ್ನಬಸವ ಶಿವಾಚಾರ್ಯರ ಸಮ್ಮುಖದಲ್ಲಿ, ತೋಳನೂರಿನ ಖ್ಯಾತ ಪ್ರವಚನ ಪಟು ಸಿದ್ಧಯ್ಯ ಶಾಸ್ತ್ರಿಗಳಿಂದ ನಿತ್ಯ ಪ್ರವಚನ ಜರುಗಲಿದೆ. ಕಲಾವಿದ ಶಿವಶರಣಪ್ಪ ಪೂಜಾರಿ ಅವರ ಸಂಗೀತ ಹಾಗೂ ಬಸವರಾಜ ಆಳಂದ ಅವರ ಸಾಥ್ ಕಾರ್ಯಕ್ರಮಕ್ಕೆ ಭಕ್ತಿಭಾವದ ಸೊಬಗು ತುಂಬಲಿದೆ.
ಫೆಬ್ರವರಿ 24ರಂದು ಬೆಳಿಗ್ಗೆ 5 ಗಂಟೆಗೆ ಕರ್ತೃಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯ ಮಹಾಮಂಗಲ ನಡೆಯಲಿದ್ದು, ಬೆಳಿಗ್ಗೆ 10.30 ಗಂಟೆಗೆ ಧರ್ಮಸಭೆ ಆಯೋಜಿಸಲಾಗಿದೆ. ಈ ಸಭೆಯ ಸಾನ್ನಿಧ್ಯವನ್ನು ಸಂತೆಕೆಲ್ಲೂರ ಫಿರೋಜಾಬಾದ್ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು.
ಈ ಸಂದರ್ಭದಲ್ಲಿ ಹರಸೂರ ಕರಸಿದ್ಧೇಶ್ವರ ಕಲ್ಮಠದ ಶ್ರೀ ಕರಸಿದ್ಧೇಶ್ವರ ಶಿವಾಚಾರ್ಯರು, ಆಳಂದ ಸಿದ್ಧಲಿಂಗ ಶಿವಾಚಾರ್ಯ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಸೇರಿದಂತೆ ಅನೇಕ ಗಣ್ಯ ಧಾರ್ಮಿಕ ಗುರುಗಳು ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಡಾ. ಅಪ್ಪಾರಾವ್ ದೇಶಮುಖ, ಧನೇಶ ದೇಶಮುಖ ಹಿರೋಳಿ, ಬೆಂಗಳೂರಿನ ಚಂದಾರಾವ್ ದೇಶಮುಖ, ಕಲಬುರಗಿ ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಸಂಜಯ ಎಸ್. ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಈ ಐದು ದಿನಗಳ ಆಧ್ಯಾತ್ಮಿಕ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದರ್ಶನ–ಆಶೀರ್ವಾದ ಪಡೆದು, ಆತ್ಮಶಾಂತಿ ಹಾಗೂ ಧಾರ್ಮಿಕ ಚೈತನ್ಯವನ್ನು ಅನುಭವಿಸಬೇಕೆಂದು ಶ್ರೀಮಠವು ಭಕ್ತರಲ್ಲಿ ಕೋರಿದೆ. ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಪತ್ರಕರ್ತರಾದ ಶ್ರೀ ಮಠದ ಕಮೀಟಿಯ ಕಾರ್ಯದರ್ಶಿ ಮಹಾದೇವ ವಡಗಾವ ನೆರವೆರಿಸಲಿದ್ದಾರೆ.
ವರದಿ ಡಾ. ಅವಿನಾಶ .S. ದೇವನೂರ
