ಎಸ್‌ವಿಪಿ ವೃತ್ತದಲ್ಲಿ ವಿವಿಧ ಸಂಘಟನೆಯ ವತಿಯಿಂದ ಅಮಿತ್ ಶಾ, ಸಿಟಿ.ರವಿ ಭಾವ ಚಿತ್ರ ಸುಟ್ಟು ಹಾಕಿದರು
ಎಸ್‌ವಿಪಿ ವೃತ್ತದಲ್ಲಿ ವಿವಿಧ ಸಂಘಟನೆಯ ವತಿಯಿಂದ ಅಮಿತ್ ಶಾ, ಸಿಟಿ.ರವಿ ಭಾವ ಚಿತ್ರ ಸುಟ್ಟು ಹಾಕಿದರು
ಕಲಬುರಗಿ: ನಗರದ ಎಸ್‌ವಿಪಿ ವೃತ್ತದಲ್ಲಿ ವಿವಿಧ ಸಂಘಟನೆಯ ವತಿಯಿಂದ ಅಮಿತ್ ಶಾ, ಸಿಟಿ.ರವಿ ಭಾವ ಚಿತ್ರ ಸುಟ್ಟು ಹಾಕಿದರು. ಸಂಸತ್ತಿನ ಅಧಿವೇಶನದಲ್ಲಿ ದೇಶದ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ರವರಿಗೆ ಅವಮಾನ ಮಾಡಿ ಆಡಿದ ಮಾತುಗಳು ಮತ್ತು ಕರ್ನಾಟಕದ ವಿಧಾನಸಭಾ ಅಧಿವೇಶನದಲ್ಲಿ ವಿಧಾನಪರಿಷತ್ತಿನಲ್ಲಿ ಶಾಸಕ ಸಿ.ಟಿ.ರವಿಯವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಸಚಿವರನ್ನುದ್ದೇಶಿಸಿ ಆಡಿದ ಆಕ್ಷೇಪಾರ್ಹ ಮಾತುಗಳನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ.
ಸಂವಿಧಾನದ 75ನೇ ವರ್ಷಾಚರಣೆಯ ಚರ್ಚೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವಹೇಳನ ಮಾಡಿ ಮಾತುಗಳನ್ನಾಡಿರುವುದುನ್ನು ನಾವು ಖಂಡಿಸುತ್ತೇವೆ. ಸ್ವತಃ ದಮನಿತ ಸಮುದಾಯದಿಂದ ಬಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೇತೃತ್ವದಲ್ಲಿ ರಚಿಸಿದ ಸಂವಿಧಾನದಲ್ಲಿ ದೇಶದ ಎಲ್ಲ ಜನರಿಗೆ ಸಮಾನ ಅವಕಾಶ ಸಮಾನ ಅಧಿಕಾರ ಘನತೆಯ ಬದುಕಿನ ಆಶ್ವಾಸನೆಗಳಿವೆ. ಇದು ಜಾತಿ ವ್ಯವಸ್ಥೆಯನ್ನು ಖಾಯಂಗೊಳಿಸಿ ಉಚ್ಚ ನೀಚ ಮೇಲು ಕೀಳುಗಳನ್ನು ಪ್ರತಿಪಾದಿಸುವ ಮನುವಾದವನ್ನು ಒಪ್ಪುವ ಅಮಿತ್ ಶಾ ಮತ್ತು ಅವರ ಪಕ್ಷಕ್ಕೆ ಸಹನೀಯವಲ್ಲ. ಹಾಗಾಗಿಯೇ ಅವರು ಸಂವಿಧಾನದ ಅಡಿಯಲ್ಲಿಯೇ ಕಾರ್ಯನಿರ್ವಹಿಸಬೇಕಾದ ಸಂಸತ್ತಿನಲ್ಲಿಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರನ್ನು ಅವಮಾನಿಸುವ ಮೂಲಕ ಸಂವಿಧಾನವನ್ನು ಮತ್ತು ದೇಶದ ಅಸಂಖ್ಯಾತ ದುಡಿಯುವ ಜನರನ್ನು ಅವಮಾನಿಸಿದ್ದಾರೆ. ಅದನ್ನು ಸಮರ್ಥಿಸಿಕೊಂಡಿರುವ ಪ್ರಧಾನಮಂತ್ರಿಗಳ ನಡೆಯೂ ವಿವೇಚನಾರಹಿತವಾಗಿದೆ.
ದುಡಿದು ತಿನ್ನುವವರಿಗೆ ಅರೆ ಹೊಟ್ಟೆಯ ಊಟವೂ ಇಲ್ಲ. ದೇಶದ ಜನರನ್ನು ಧರ್ಮದ ಹೆಸರಿನಲ್ಲಿ ಒಡೆಯುತ್ತ, ದಲಿತ ದಮನಿತರ, ಮಹಿಳೆಯರ, ಧಾರ್ಮಿಕ ಅಲ್ಪ ಸಂಖ್ಯಾತರ, ಮೇಲೆ ನಿರಂತರವಾಗಿ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ. ಭಾರತೀಯ ಜನತಾ ಪಕ್ಷದ ನೇತೃತ್ವದ ಸರಕಾರ ತನ್ನ ಎಲ್ಲ ತಪ್ಪು ನೀತಿಗಳನ್ನು ಮರೆಮಾಚಲು ಜನರನ್ನು ಭಾವೋದ್ರೇಕಗೊಳಿಸಲು ಇಂತಹ ದಾಳಗಳನ್ನು ಉರುಳಿಸುತ್ತಲೇ ಇರುವ ಸಂಚಿನ ಭಾಗವಾಗಿಯೇ ಅಮಿತ್ ಶಾ ರವರ ಮೇಲಿನ ಮಾತುಗಳು ಬಂದಿವೆ.
ಅAಬೇಡ್ಕರ್ ರವರಿಗೆ ಅವಮಾನ ಮಾಡಿದ ಅಮಿತ್ ಶಾ ರವರಿಗೆ ಸಚಿವರಾಗಿ ಮುಂದುವರಿಯುವ ಯಾವ ಅಧಿಕಾರವೂ ಇಲ್ಲ. ಅವರು ತಕ್ಷಣವೇ ರಾಜಿನಾಮೆ ಕೊಡಬೇಕು.
ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಬಿ.ಜೆ.ಪಿ.ಶಾಸಕ ಸಿ.ಟಿ ರವಿಯವರು ರಾಜ್ಯದ ಮಹಿಳಾ ಸಚಿವರನ್ನುದ್ದೇಶಿಸಿ ಆಡಿದ ಆಕ್ಷೇಪಾರ್ಹ ಮಾತುಗಳನ್ನು ನಾವು ಖಂಡಿಸುತ್ತೇವೆ. ಸಡಿಲ ನಾಲಿಗೆಯ, ಹಗುರ ಮಾತುಗಳನ್ನಾಡುವ ಚಾಳಿಯನ್ನು ಹೊಂದಿರುವ ಸಿ.ಟಿ.ರವಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸುತ್ತೇವೆ.
ಜನಪ್ರತಿನಿಧಿಗಳು ದೇಶದ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ಸದನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅದು ಸದನದ ಒಳಗೂ ಮತ್ತು ಹೊರಗೂ ಅನ್ವಯವಾಗುತ್ತದೆ. ಹಾಗೆಯೇ ಸದನದಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ, ಮಾತನಾಡುವಾಗ ಅವಹೇಳನಕಾರಿ, ಬೈಗುಳಗಳ ಶಬ್ದಗಳನ್ನು ಬಳಸಬಾರದೆಂಬ ಸದನದಲ್ಲಿ ನಡವಳಿಕೆಯ ನೀತಿ ನಿಯಮಗಳಿವೆ. ಸಿ.ಟಿ.ರವಿಯವರು ಈ ಮೇಲಿನ ಎರಡೂ ಅಂಶಗಳನ್ನು ಉಲ್ಲಂಘಿಸಿದ್ದಾರೆ. ದೇಶದ ಸಂವಿಧಾನವು ಮಹಿಳೆಯರಿಗೆ ಘನತೆಯ ಬದುಕಿನ ಅಧಿಕಾರವನ್ನು ನೀಡಿದೆ. ಸಿ.ಟಿ.ರವಿಯವರು ಮಹಿಳೆಯರ ಘನತೆಗೆ ಕುಂದುAಟುಮಾಡುವ ಶಬ್ದಗಳನ್ನು ಬಳಸಿದ್ದಾರೆ. ಇದು ಖಂಡನೀಯ ಮತ್ತು ಶಿಕ್ಷಾರ್ಹ.
ಮಹಿಳೆಯರ ಘನತೆಯ ಬದುಕಿನ ಅಧಿಕಾರವನ್ನು ಖಾತ್ರಿಪಡಿಸಲು ಬಂದಿರುವ ಹಲವು ಕಾನೂನುಗಳ ಉಲ್ಲಂಘನೆಯೂ ಇಲ್ಲಿ ಆಗಿದೆ. ಭಾರತೀಯ ನ್ಯಾಯ ಸಂಹಿತೆಯ ಕಲಮು 75(1)(Iಗಿ) ಪ್ರಕಾರ ಮಹಿಳೆಯರ ಕುರಿತು ಲೈಂಗಿಕ ನೆಲೆಯ ಶಬ್ದಗಳನ್ನು ಬಳಸಿ ಮಾತನಾಡುವುದು ಲೈಂಗಿಕ ಕಿರುಕುಳದ ಅಡಿಯಲ್ಲಿ ಬರುತ್ತದೆ. ಹಾಗೆಯೇ ಕಲಮು 79 ಮಹಿಳೆಯರ ಘನತೆಗೆ ಕುಂದುAಟುಮಾಡುವ ಲೈಂಗಿಕ ಭಾಷೆಯ ಶಬ್ದಗಳು, ಸಂಜ್ಞೆಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ ಎನ್ನುತ್ತದೆ. ಇದರ ಜೊತೆಗೇ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾನೂನಿನ ಉಲ್ಲಂಘನೆಯೂ ಇಲ್ಲಿ ಆಗಿದ್ದು 'ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ' ಕಾನೂನಿನ ಅನ್ವಯವೂ ಅವರು ಶಿಕ್ಷಾರ್ಹರು.
ಸಿ.ಟಿ.ರವಿಯವರು ಸಡಿಲ ನಾಲಿಗೆಯ, ಹಗುರ ಮಾತುಗಳನ್ನು ಈ ಮೊದಲೂ ಸದನದಲ್ಲಿ ಆಡಿರುವುದು ಮಾಧ್ಯಮಗಳ ಮೂಲಕ ಪ್ರಸಾರವಾಗಿದೆ. ಈ ಹಿಂದೆ ಭ್ರಷ್ಟಾಚಾರದ ವಿಷಯದ ಮೇಲೆ ಚರ್ಚೆ ನಡೆಸುವಾಗಲೂ ಅವರು ಮಹಿಳೆಯರನ್ನು ಅವಹೇಳನ ಮಾಡುವ, ಪುರುಷ ಪಾರಮ್ಯ ಮೆರೆಯುವ ಮಾತುಗಳನ್ನೇ ಆಡಿಯೂ ಬಚಾಯಿಸಿಕೊಂಡಿದ್ದಾರೆ. ಸಂವಿಧಾನದ ಬಗ್ಗೆಯಾಗಲಿ, ಮಹಿಳೆಯರ ಬಗ್ಗೆಯಾಗಲಿ ಒಂದಿನಿತೂ ಗೌರವವಿಲ್ಲದ, ಮನಸ್ಸಿಗೆ ಬಂದ ಹಾಗೆಲ್ಲ ಮಾತನಾಡುವ ಇಂತಹವರಿಗೆ ಸದನದಲ್ಲಿ ಮುಂದುವರೆಯುವ ನೈತಿಕ ಅಧಿಕಾರವಿಲ್ಲ. ಸಿ.ಟಿ.ರವಿಯವರ ಅನುಚಿತ ನಡವಳಿಕೆಯನ್ನು ಗುರುತರ ಅಪರಾಧವಾಗಿ ಪರಿಗಣಿಸಿ ಅವರ ಸದಸ್ಯತ್ವವನ್ನು ರದ್ದು ಮಾಡಬೇಕು,
ಇದೇ ಸಂದರ್ಭದಲ್ಲಿ ಇಂದಿನ ಪತ್ರಿಕೆಗಳಲ್ಲಿ ವರದಿಯಾದಂತೆ ಮಾನ್ಯ ಸಭಾಪತಿಗಳು ಪರಿಷತ್ತಿನಲ್ಲಿ ಸಿ.ಟಿ.ರವಿಯವರು ಮಾನ್ಯ ಸಚಿವರಿಗೆ ಬೈದಿರುವ ಬಗ್ಗೆ ಯಾವುದೇ ವಿಡಿಯೋ ಆಡಿಯೋ ದಾಖಲೆ ಸಿಕ್ಕಿಲ್ಲ, ಸದನದ ಕಲಾಪ ಮುಂದೂಡಿದ ನಂತರ ಘಟನೆ ನಡೆದಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದು ಸಖೇದಾಶ್ಚರ್ಯದ ಸಂಗತಿಯಾಗಿದೆ. ಇದೀಗ ಹಲವು ಸಂದೇಹಗಳಿಗೆ ಎಡೆ ಮಾಡಿದೆ. ಘಟನೆಯ ದಿನ ವಿಧಾನಪರಿಷತ್ತಿನಲ್ಲಿ ನಡೆದ ಗದ್ದಲ ಖಾಸಗೀ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಇದು ಪರಿಷತ್ತಿನ ಆಡಿಯೋ. ವಿಡಿಯೋಗಳಲ್ಲಿ ಲಭ್ಯವಿಲ್ಲ ಎಂದಾದರೆ ಸಾಕ್ಷಿ ಸಂಗ್ರಹಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಿ ನ್ಯಾಯದ ಪರವಾಗಿ ವಿಧಾನಪರಿಷತ್ತು ಮಾದರಿ ನಿರ್ಮಿಸಬೇಕಾದ ಅಗತ್ಯವಿದೆ.
ದೇಶದ ಸಂವಿಧಾನದ ಬೆಳಕಿನಲ್ಲಿ ಸರ್ವಸಮಾನತೆಯನ್ನು ಒಪ್ಪಿಕೊಂಡು, ಲಿಂಗ ಜಾತಿ ಮತ ಧರ್ಮ ಬೇಧವಿಲ್ಲದೇ ಬಾಳುವ ಆಶಯವನ್ನು ಹೊಂದಿರುವ ಬಹುತ್ವ ಭಾರತದ ಜನತೆಯಾಗಿ ನಾವು ಈ ಮೇಲಿನ ಒತ್ತಾಯಗಳನ್ನು ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ಕೆ.ನೀಲಾ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಶರಣಬಸಪ್ಪ ಮಮಶೇಟ್ಟಿ, ಪದ್ಮಿನಿ ಕಿರಣಗಿ, ಸುಜಾತಾ, ಸಮುದಾಮ, ಪ್ರಭು ಖಾನಾಪುರ ಸೇರಿದಂತೆ ಇತರರು ಇದ್ದರು.