ವಿವಿಧ ಗ್ರಾಮಗಳಲ್ಲಿ ಶಾಸಕ ಪ್ರಭು ಚವ್ಹಾಣ ಸಂಚಾರ ಜೆಜೆಎಂ ಲೋಪಕ್ಕಾಗಿ ಅಧಿಕಾರಿಗಳ ವಿರುದ್ಧ ಕೆಂಡ
ವಿವಿಧ ಗ್ರಾಮಗಳಲ್ಲಿ ಶಾಸಕ ಪ್ರಭು ಚವ್ಹಾಣ ಸಂಚಾರ ಜೆಜೆಎಂ ಲೋಪಕ್ಕಾಗಿ ಅಧಿಕಾರಿಗಳ ವಿರುದ್ಧ ಕೆಂಡ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಗ್ರಾಮ ಸಂಚಾರ ಆರಂಭಿಸಿದ್ದು, ಡಿ.22ರಂದು ಚಿಂತಾಕಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲಾಯಿತು. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದು ಗಮನಕ್ಕೆ ಬಂದಾಗ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ಧುಡುಕನಾಳ, ವನಮಾರಪಳ್ಳಿ, ಬಾದಲಗಾಂವ, ನಾರಾಯಣಪೂರ ಗ್ರಾಮಗಳಲ್ಲಿ ಎಲ್ಲ ಮನೆಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲವೆಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ ಅಧಿಕಾರಿಗಳಿಂದ ಜಲ ಜೀವನ್ ಮಿಷನ್(ಜೆಜೆಎಂ) ಕಾಮಗಾರಿಯ ಬಗ್ಗೆ ವಿವರಣೆ ಪಡೆದರು. ಜನತೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಬೇಕೆಂಬ ಉದ್ದೇಶದಿಂದ ಹಿಂದೆ ಸಚಿವನಾಗಿದ್ದಾಗ ಸಾಕಷ್ಟು ಪ್ರಯತ್ನಪಟ್ಟು ಅನುದಾನ ತಂದಿದ್ದು, ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ. ಕೆಲಸ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿದ್ದರೂ ಕೆಲಸವೇಕೆ ಸರಿಯಾಗಿ ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಕಡೆಗಳಲ್ಲಿ ನೀರಿನ ಸಂಪನ್ಮೂಲಗಳ ಲಭ್ಯತೆ ಇಲ್ಲದಿದ್ದರೂ ಕೆಲಸ ಮಾಡಿರುವುದರಿಂದ ಸಮಸ್ಯೆ ಉಲ್ಬಣಗೊಂಡಿರುವುದು ಕಂಡುಬAದಿದೆ. ಹಲವೆಡೆ ಸಂಪೂರ್ಣ ಕಳಪೆ ಮಟ್ಟದ ಕೆಲಸವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಾಕಷ್ಟು ದಿನಗಳಿಂದ ಹೇಳುತ್ತಾ ಬರುತ್ತಿದ್ದೇನೆ. ಆದರೂ ಏಕೆ ಸುಮ್ಮನಿದ್ದೀರಿ ಎಂದು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.
ಬಾವಿಯ ಅಗತ್ಯವಿರುವ ಕಡೆ ಕೂಡಲೇ ಹೊಸ ಬಾವಿ ಕೊರೆಸಲು ವ್ಯವಸ್ಥೆ ಮಾಡಬೇಕು. ನೀರು ಸರಬರಾಜಿಗೆ ಏನು ತೊಂದರೆಯಿದೆ ಎನ್ನುವುದನ್ನು ಪತ್ತೆ ಹಚ್ಚಿ ತಕ್ಷಣ ಸರಿಪಡಿಸಲು ಮುಂದಾಗಬೇಕು. ಕಾಮಗಾರಿ ಮುಗಿದ ಕಡೆಗಳಲ್ಲಿ ಪ್ರತಿ ಮನೆಯ ನಲ್ಲಿಗಳನ್ನು ಪರಿಶೀಲಿಸಿ ಸರಿಯಾಗಿ ನೀರು ಬರುವುದು ಖಚಿತವಾದ ನಂತರವೇ ಕಡ್ಡಾಯವಾಗಿ ಗ್ರಾಮ ಸಭೆ ನಡೆಸಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷö್ಯ ವಹಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲವೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ-ಬೇಸರ: ಗ್ರಾಮ ಸಂಚಾರದ ಸಂದರ್ಭದಲ್ಲಿ ಶಾಸಕರು ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಶಾಲೆಗಳಲ್ಲಿ ಮಕ್ಕಳ ಕೊರತೆಯಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದರು.
ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಶಾಲೆಗಳಲ್ಲಿ ಮಕ್ಕಳು ಇಲ್ಲದೇ ಇರುವುದು ಉತ್ತಮ ಬೆಳವಣಿಗೆಯಲ್ಲ. ಒಂದು ತರಗತಿಯಲ್ಲಿ 3-4 ವಿದ್ಯಾರ್ಥಿಗಳು ಇರುವುದು ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಿದ್ದರೆ ಮಾತ್ರ ಶಾಲೆಗಳು ಉಳಿಯಲು ಸಾಧ್ಯ. ಮತ್ತು ಶಿಕ್ಷಕರನ್ನು ಕೂಡ ಬೇರೆ ಕಡೆಗೆ ವರ್ಗವಣೆ ಮಾಡಲಾಗುತ್ತದೆ. ಹಾಗಾಗಿ ಮುಖ್ಯಗುರುಗಳು ಮಕ್ಕಳ ದಾಖಲಾತಿಯತ್ತ ಹೆಚ್ಚಿನ ಗಮನ ಹರಿಸಬೇಕು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸಿದರೆ ತಾನಾಗಿಯೇ ದಾಖಲಾತಿ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ಎಲ್ಲ ಶಿಕ್ಷಕರು ಸರಿಯಾಗಿ ಪಾಠ ಮಾಡಬೇಕು. ಪ್ರತಿ ವರ್ಷ ಮನೆ-ಮನೆಗೆ ಭೇಟಿ ನೀಡಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲಿಸುವಂತೆ ಮನವೊಲಿಸಬೇಕೆಂದು ಶಿಕ್ಷಕರಿಗೆ ನಿರ್ದೇಶನ ನೀಡಿದರು.
ಮಕ್ಕಳ ಕೊರತೆಯಿರುವ ಕಡೆ ಹೆಚ್ಚಿನ ಶಿಕ್ಷಕರಿದ್ದಲ್ಲಿ ಕೂಡಲೇ ಅಂತಹ ಶಾಲೆಯ ಶಿಕ್ಷಕರನ್ನು ಅಗತ್ಯವಿರುವ ಕಡೆಗೆ ನಿಯೋಜನೆ ಮಾಡಬೇಕು. ಕೆಲವು ಕಡೆ ಶಿಕ್ಷಕರು ಶಾಲೆಗೆ ಹೋಗುವುದೇ ಇಲ್ಲವೆಂಬ ದೂರುಗಳು ಕೂಡ ಬರುತ್ತಿವೆ. ಅಂಥವುಗಳನ್ನು ಗಮನಿಸಿ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕ್ರಮ ವಹಿಸಬೇಕೆಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಮದಾಪೂರ, ಅಲ್ಲಾಪೂರ, ತೇಗಂಪೂರ, ಯನಗುಂದಾ ಹಾಗೂ ಖಾಶೆಂಪೂರ ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಬೆಳೆ ಹಾನಿ ಪರಿಹಾರ, ಚರಂಡಿ ಸ್ವಚ್ಛತೆ, ವೃದ್ಧಾಪ್ಯ ವೇತನ, ವಿಧವಾ ವೇತನ, ಪಡಿತರ ವಿತರಣೆಯಂತಹ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ರಸ್ತೆ, ಸೇತುವೆ, ಸಿಸಿ ರಸ್ತೆಯಂತಹ ದೊಡ್ಡ ಕಾಮಗಾರಿಗಳ ಕುರಿತ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಆದ್ಯತೆಗೆ ಅನುಗುಣವಾಗಿ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಬೇಕು. ಬಗೆಹರಿಸಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ಜನತೆಗೆ ಅನುಕೂಲ ಮಾಡಿಕೊಡೇಕೆಂಬ ಉದ್ದೇಶದಿಂದ 2009ರಿಂದ ಗ್ರಾಮ ಸಂಚಾರ ನಡೆಸುತ್ತಾ ಬರುತ್ತಿದ್ದೇನೆ. ಅದರಂತೆ ಈ ವರ್ಷವೂ ಆರಂಭಿಸಿದ್ದು, ಜನತೆಯೊಂದಿಗೆ ಮುಖಾಮುಖಿಯಾಗಿ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ರಸ್ತೆ, ಸಿಸಿ ರಸ್ತೆ, ಸಮುದಾಯ ಭವನಂತಹ ಕಾಮಗಾರಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಜೆಸ್ಮಾಂ ಎಇಇ ರವಿ ಕಾರಬಾರಿ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಸಣ್ಣ ನೀರಾವರಿ ಇಲಾಖೆಯ ಎಇಇ ಸಂಗಮೇಶ ಖಳೂರೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಕಿರಣ ಪಾಟೀಲ, ಯಾದುರಾವ ಸಗರ, ಯೋಗೇಶ ಪಾಟೀಲ, ಸಂಜು ವಡೆಯರ್, ಬಸವರಾಜ ಹಳ್ಳೆ, ಅಶೋಕ ಶಂಬೆಳ್ಳೆ, ಆನಂದ ದ್ಯಾಡೆ, ರಾಮರೆಡ್ಡಿ ಪಾಟೀಲ, ಮೃತ್ಯುಂಜಯ ಬಿರಾದಾರ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
