ಡಿ.26ರಕ್ಕೆ ಮಾದನಹಿಪ್ಪರಗಾದಿಂದ ಚಾಲನೆ ಭ್ರಷ್ಟಾಚಾರ ವಿರುದ್ಧ ಪಾದಯಾತ್ರೆಯ ಮೂಲಕ ಹೋರಾಟ: ಗುತ್ತೇದಾರ

ಡಿ.26ರಕ್ಕೆ ಮಾದನಹಿಪ್ಪರಗಾದಿಂದ ಚಾಲನೆ  ಭ್ರಷ್ಟಾಚಾರ ವಿರುದ್ಧ ಪಾದಯಾತ್ರೆಯ ಮೂಲಕ ಹೋರಾಟ: ಗುತ್ತೇದಾರ

ಡಿ.26ರಕ್ಕೆ ಮಾದನಹಿಪ್ಪರಗಾದಿಂದ ಚಾಲನೆ 

ಭ್ರಷ್ಟಾಚಾರ ವಿರುದ್ಧ ಪಾದಯಾತ್ರೆಯ ಮೂಲಕ ಹೋರಾಟ: ಗುತ್ತೇದಾರ 

ಆಳಂದ: ಸ್ಥಳೀಯ ಶಾಸಕರ ಭ್ರಷ್ಟಾಚಾರ, ದ್ವೇಷ ರಾಜಕೀಯ, ಅಧಿಕಾರ ದುರುಪಯೋಗ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಡಿ.26ರಿಂದ ತಾಲೂಕಿನ ಮಾದನಹಿಪ್ಪರಗಾದಿಂದ ಆಳಂದವರೆಗೆ ಎರಡು ದಿನಗಳ ಕಾಲದ ಬೃಹತ್ ಪ್ರತಿಭಟನೆ ಪಾದಯಾತ್ರೆಯ ಮೂಲಕ ಹೋರಾಟ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ ಇಂದಿಲ್ಲಿ ಪ್ರಕಟಿಸಿದ್ದಾರೆ. 

ಈ ಕುರಿತು ಪಟ್ಟಣದ ಎಸ್‌ಆರ್‌ಜಿ ಕಾಂಪ್ಲೆಕ್ಸ್ ಹಿಂಬದಿಯಲ್ಲಿನ ಬಿಜೆಪಿ ನೂತನ ಕಚೇರಿಯಲ್ಲಿ ಕರೆದ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಬಿಜೆಪಿ ಮಂಡಲ ಆಶ್ರಯದಲ್ಲಿ 26ರಂದು ಮಾದನಹಿಪ್ಪರಗಾದಿಂದ ಜಿಡಗಾವರೆಗೆ ಆರಂಭಗೊಳ್ಳುವ ಪಾದಯಾತ್ರೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ ಚಾಲನೆ ನೀಡುವರು. 27ರಂದು ಜಿಡಗಾ ಗ್ರಾಮದಿಂದ ಆಳಂದ ವರೆಗೆ ಸಾಗುವ ಪಾದಯಾತ್ರೆಯ ಸಮಾರೋಪಕ್ಕೆ ವಿಧಾನ ಪರಿಷತ ವಿಪಕ್ಷ ನಾಯಕ ನಾರಾಯಣಸ್ವಾಮಿ ಚಲವಾದಿ, ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ಮುಖಂಡರು ಪಾಳ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. 

ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸರ್ವಾಂಗೀಣ ಅಭಿವೃದ್ಧಿ ಬಯಸುವ ಸರ್ವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. 

ಶಾಸಕ ಬಿ.ಆರ್. ಪಾಟೀಲ ಅವರು ಅಧಿಕಾರಕ್ಕೆ ಬಂದಾಗಿನಿಂದ ಜನ ಸಾಮಾನ್ಯರ ಸಮಸ್ಯೆಗಳು ಹೆಚ್ಚಾಗಿದೆ. ಸಾವಿರಾರು ಬಡವರ ಪಡಿತರ ಚೀಟಿ ರದ್ದುಮಾಡಲಾಗಿದೆ. ನೂರಾರು ಖಾಸಗಿ ಮಠ, ಮಂದಿರ ರೈತ ಹೊಲಗಳು ವಕ್ಪ್ ಆಸ್ತಿ ಎಂದು ನಮೂದಿಸಿ ತೊಂದರೆ ನೀಡಲಾಗಿದೆ. ತೊಗರಿ ನೆಟೆರೋಗದಿಂದ ಹಾಳಾಗಿ ಕಂಗಾಲಾದ ರೈತರಿಗೆ ಪರಿಹಾರ ತರುವ ಕೆಲಸವಾಗಿಲ್ಲ. ಕಬ್ಬು ಬೆಳೆಗಾರರಿಗೆ ಹೆಚ್ಚಿನ ದರ ಕೂಡಿಸದೆ ಕಾರ್ಖಾನೆ ವಿರುದ್ಧ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದರು. 

ರೈತರ ಪಂಪಸೆಟ್ ಸಂಪರ್ಕ ಟ್ರಾನ್ಸಫಾರಂಗಳು ಸುಟ್ಟರು ಸಕಾಲಕ್ಕೆ ಹೊಸ ಟಿಸಿ ಪೂರೈಕೆಯಾಗುತ್ತಿಲ್ಲ. ವಿಳಂಬದಿಂದಾಗಿ ಬೆಳೆಗಾರರು ಬೆಳೆ ಒಣಗಿ ತೊಂದರೆ ಪಡುತ್ತಿದ್ದಾರೆ. ರಸ್ತೆಗಳಲ್ಲಿ ಗುಂಡಿಬಿದ್ದಿವೆ. ಆದರೆ ದುರಸ್ಥಿ ಮಾಡುವ ಬದಲು ರಸ್ತೆ ನಿರ್ಮಾದ ಹೆಸರಿನಲ್ಲಿ ಅದಲು ಬದಲು ಹೆಸರಿಟ್ಟು ಶಾಸಕರು ಅಧಿಕಾರಿಗಳು ಸೇರಿ ಹಣ ಎತ್ತಿಹಾಕುತ್ತಿದ್ದಾರೆ ಎಂದು ಆರೋಪಿಸಿದರು. 

ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಸೌಕರ್ಯವಿಲ್ಲದೆ ತೊಂದರೆ ಅನುಭವಿಸಿ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಸ್ಪಿಂಕ್ಲರ್ ಪೈಪ್‌ಗಳು ಅರ್ಜಿಯ ಹಿರಿತನ ಮೇಲೆ ವಿತರಿಸದೆ ಇರುವುದು ತನಿಖೆ ಆಗಬೇಕು. ರೇಷ್ಮೆ ಹಾಗೂ ತೋಟಗಾರಿಕೆ ಯೋಜನೆಗಳು ಅರ್ಹರಿಗೆ ತಲುಪಬೇಕು. ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಸಿಎಸ್‌ಆರ್ ಅನುದಾನದ ಅವ್ಯವಹಾರ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು. 

ಕೆಎಂಎಫ್‌ನಲ್ಲಿ ನೇಮಕಾತಿಯಲ್ಲಿ ಹಗರಣ ನಡೆದಿದೆ. ಗ್ರಾಪಂಗಳಲ್ಲಿ ಶಾಸಕರ ಹಸ್ತಕ್ಷೇಪ ನಿಲ್ಲಬೇಕು. ಅಂಗನವಾಡಿಗಳಲ್ಲಿ ಸಮಪರ್ಕ ಆಹಾರಧಾನ್ಯ ವಿತರಿಸಬೇಕು ಎಂಬ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಪಾದಯಾತ್ರೆ ನಡೆಯಲಿದೆ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದುಗುಳೇ, ನ್ಯಾಯವಾದಿ ಬಾಬಾಸಾಹೇಬ್ ವಿ. ಪಾಟೀಲ್, ಸಂತೋಷ ಹಾದಿಮನಿ, ಸುನಿಲ್ ಹೀರೋಳಿಕರ್ ಹಾಗೂ ಪ್ರಕಾಶ್ ಮನೆ ಉಪಸ್ಥಿತರಿದ್ದರು.