ಕೆ.ಕೆ.ಆರ್.ಡಿ.ಬಿ. ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಆಗ್ರಹ

ಕೆ.ಕೆ.ಆರ್.ಡಿ.ಬಿ. ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಆಗ್ರಹ

ಕೆ.ಕೆ.ಆರ್.ಡಿ.ಬಿ. ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ : ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ.ಆರ್.ಐ.ಡಿ.ಎಲ್) ಕೆ.ಕೆ.ಆರ್.ಡಿ.ಬಿ.ಯಿಂದ ವಹಿಸಿರುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಇಲ್ಲದೆ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಬಾಲರಾಜ ಗುತ್ತೇದ್ದಾರ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಕೆ.ಆರ್.ಡಿ.ಬಿ.ಯ ಯಾವುದೇ ಕಾಮಗಾರಿಗಳಿಗೆ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ವ್ಯವಸ್ಥೆ ಇಲ್ಲದಿರುವುದರಿಂದ ಅನ್ಯ ಹೆಸರಿನಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬರುತ್ತಿಲ್ಲ ಎಂದು ದೂರಿದರು. ಈ ಹಿನ್ನೆಲೆ ಮಾನ್ಯ ಮುಖ್ಯಮಂತ್ರಿಗಳು ಕೆ.ಕೆ.ಆರ್.ಡಿ.ಬಿಯಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರಗಳ ಸಮಗ್ರ ತನಿಖೆಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವ್ಯಾಪ್ತಿಯ ವಿವಿಧ ಯೋಜನೆಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ತಜ್ಞರ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು

ಕಲಬುರಗಿ ಜಿಲ್ಲೆಯಲ್ಲಿ ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ನೀರಾವರಿ ಯೋಜನೆಗಳನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಗುತ್ತೇದ್ದಾರ ಟೀಕಿಸಿದರು.

ಭೀಮಾ ಏತ ನೀರಾವರಿ, ಗಂಡೋರಿ ಹಾಗೂ ಅಮರ್ಜಾ ನೀರಾವರಿ ಯೋಜನೆಗಳು ದೂರದೃಷ್ಟಿಯ ಕೊರತೆಯಿಂದಾಗಿ ಇಂದಿಗೂ ರೈತರ ಹೊಲಗಳಿಗೆ ನೀರುಣಿಸಲು ಸಾಧ್ಯವಾಗಿಲ್ಲ ಎಂದರು.

ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಟೆಂಡರ್ ಕರೆಯಲಾಗಿದ್ದರೂ, ಅನಗತ್ಯ ರಾಜಕಾರಣದ ಕಾರಣದಿಂದ ಯೋಜನೆ ಟೆಂಡರ್ ಹಂತದಲ್ಲಿಯೇ ತ್ರಿಶಂಕು ಸ್ಥಿತಿಗೆ ತಲುಪಿದೆ. ಕೆಲವರ ಪ್ರತಿಷ್ಠೆಗೆ ರೈತರ ಹಿತ ಬಲಿಯಾಗುತ್ತಿರುವುದು ದುರಂತಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರಾವರಿ ತಜ್ಞರೊಂದಿಗೆ ಸಮಗ್ರ ಚರ್ಚೆ ನಡೆಸಿ, ರೈತರ ಹಿತದೃಷ್ಟಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿ ಎಲ್ಲ ನೀರಾವರಿ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ವೇಗ ನೀಡಬೇಕೆಂದು ಆಗ್ರಹಿಸಿದರು.

ಮರೀಚಿಕೆಯಾದ ಉದ್ಯೋಗ ಸೃಷ್ಟಿ ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಜನರ ಆರ್ಥಿಕ ಮಟ್ಟ ಸುಧಾರಣೆಗೆ ಅಗತ್ಯ ಯೋಜನೆಗಳನ್ನು ರೂಪಿಸುವ ಬದಲು, ಕೆ.ಕೆ.ಆರ್.ಡಿ.ಬಿ ಹಾಗೂ ಕೆ.ಆರ್.ಐ.ಡಿ.ಎಲ್ ಮುಂತಾದ ಸಂಸ್ಥೆಗಳ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಾಲರಾಜ ಗುತ್ತೇದ್ದಾರ ಹೇಳಿದರು.

ಉದ್ಯೋಗ ಸೃಷ್ಟಿಯ ಬದಲು ಕೆಲವು ಸ್ಥಳೀಯ ರಾಜಕಾರಣಿಗಳ ವೈಭವೋಪೇತ ಜೀವನಕ್ಕೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಿಂದ ಸ್ಥಳೀಯ ಯುವಕರು ನಿರುದ್ಯೋಗದ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಈ ವಿಷಯಕ್ಕೆ ಗಂಭೀರವಾಗಿ ಗಮನಹರಿಸಿ, ವರ್ತಮಾನ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ ಎಂ. ನಾಟಿಕಾರ್, ಬಸವರಾಜ ಭಿರಬಟ್ಟಿ, ಶ್ರೀ ಮಹಾಂತಪ್ಪ ಮದ್ರಿ, ಮಲ್ಲಿಕಾರ್ಜುನ ಸಂಗಾಣಿ, ಶ್ರೀ ದೇವಿಂದ್ರ ಹಾಸನಾಪೂರ, ಶ್ರೀ ಪ್ರವೀಣ ಜಾಧವ್ ಹಾಗೂ ಶ್ರೀ ರಾಜು ಬಡದಾಳ ಉಪಸ್ಥಿತರಿದ್ದರು.