ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಕ್ಕ ಭಾಗ್ಯ ಕಲಬುರಗಿಗೆ ಇಲ್ಲ !

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಕ್ಕ ಭಾಗ್ಯ ಕಲಬುರಗಿಗೆ ಇಲ್ಲ !

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಕ್ಕ ಭಾಗ್ಯ ಕಲಬುರಗಿಗೆ ಇಲ್ಲ !

ಒಂದು ವಿಮಾನಕ್ಕಾಗಿ ಕಾಯುವ 250 ಸಿಬ್ಬಂದಿ:

ಕಲಬುರಗಿ : ಇಲ್ಲಿನ ವಿಮಾನ ನಿಲ್ದಾಣದಿಂದ 2019 ರಿಂದ ಸಂಚಾರ ಪ್ರಾರಂಭಗೊಂಡರೂ ಈಗ ದಿಢೀರನೆ ವಿಮಾನ ಸಂಚಾರವನ್ನು 

ಮೊಟಕುಗೊಳಿಸಿದೆ. ಈ ವರ್ಷ ಆರಂಭಗೊಂಡ ಶಿವಮೊಗ್ಗದಿಂದ ನಾನ ಭಾಗಗಳಿಗೆ ಅನೇಕ ವಿಮಾನಗಳು ಸಂಚರಿಸುವ ಭಾಗ್ಯವಿದ್ದರೂ ಕಲಬುರಗಿಗೆ ಮಾತ್ರ ಇದ್ದ ವಿಮಾನಗಳು ಮೊಟಕುಗೊಂಡು ವಿಮಾನ ಭಾಗ್ಯದ ಕೊರತೆ ಕಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಬೇಸರ ವ್ಯಕ್ತಪಡಿಸಿದ್ದಾರೆ

                   ಕಲಬುರಗಿಗೆ ಬೆಂಗಳೂರು, ತಿರುಪತಿ , ದೆಹಲಿ ಮುಂತಾದಡೆಗಳಿಗೆ ಸಂಪರ್ಕವಿದ್ದ ವಿಮಾನ ಸಂಚಾರವು ಮೊಟಕುಗೊಂಡು ಈಗ ವಾರದಲ್ಲಿ ಬೆಂಗಳೂರಿಗೆ ಕೇವಲ ಮೂರು ದಿನ ಸಂಚಾರವೆಂದು ಪ್ರಕಟಿಸಿದ್ದರೂ ವಾಸ್ತವದಲ್ಲಿ ವಾರದಲ್ಲಿ ಒಂದೇ ದಿನ ಮಾತ್ರ ಸಂಚರಿಸುತ್ತಿದೆ. ಇದರಿಂದ ಕಲಬುರಗಿಯಿಂದ ಪ್ರಯಾಣ ಮಾಡುವವರಿಗೆ ತೀವ್ರ ನಿರಾಸೆ ಉಂಟಾಗಿದೆ. ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣದಿಂದ ಪ್ರಸ್ತುತ ಬೆಂಗಳೂರು, ತಿರುಪತಿ, ಚೆನ್ನೈ, ಗೋವಾ ಮುಂತಾದೆಡೆಗಳಿಗೆ ವಿಮಾನ ಸಂಚಾರ ವಿದ್ದು ತೀವ್ರ ಚಟುವಟಿಕೆಯಲ್ಲಿದೆ. ಆದರೆ ಕಲಬುರಗಿ ವಿಮಾನ ನಿಲ್ದಾಣ ಐದು ವರ್ಷಗಳ ಹಿಂದೆ ಪ್ರಾರಂಭಗೊಂಡರೂ ವಿಮಾನ ಸಂಚಾರ ವಿಸ್ತಾರ ಗೊಳ್ಳುವ ಬದಲು ಕಡಿತದ ಆಘಾತ ಅನುಭವಿಸುವಂತಾಗಿದೆ. 

     ಉಡಾನ್ ಯೋಜನೆಯಡಿಯಲ್ಲಿ ಪ್ರಾರಂಭವಾದ ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಮಾನ ಸಂಚಾರದಿಂದ ಲಾಭದಾಯಕ ವ್ಯವಹಾರ ನಡೆಯುತ್ತಿತ್ತು. ಆದರೆ ಇತ್ತೀಚಿನ ಅತಂತ್ರ ಪರಿಸ್ಥಿತಿಯಿಂದ ತೀವ್ರ ನಷ್ಟ ಕಾಡುತ್ತಿದೆ. ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ ಕೊನೆಯ ಕ್ಷಣದಲ್ಲಿ ವಿಳಂಬ ಅಥವಾ ರದ್ದಾಗುತ್ತಿರುವುದರಿಂದ ಖಾತ್ರಿ ಇಲ್ಲದ ಪ್ರಯಾಣದ ತೊಂದರೆ ಅನುಭವಿಸಿ ಪ್ರಯಾಣಿಕರ ಇಳಿಮುಖವಾಗಲು ಮುಖ್ಯ ಕಾರಣವಾಗಿದೆ. ದೆಹಲಿ ಸಂಚಾರ ಮೊದಲಿಗೆ ರದ್ದು ಆಗಿ ಈಗ ವರ್ಷದ ಒಳಗೆ ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ ಸಂಚಾರ ಕೂಡ ಬಂದ್ ಆಗಿದೆ. ಹೆಚ್ಚು ವಿಮಾನಗಳು ಸಂಚಾರ ಪ್ರಾರಂಭಿಸಿದ ಕಾರಣದಿಂದ ಕೆ ಕೆ ಆರ್ ಟಿ ಸಿ ವಿಮಾನ ನಿಲ್ದಾಣಕ್ಕೆ ಬಸ್ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿತ್ತು. ನೈಟ್ ಲ್ಯಾಂಡಿಂಗ್ ಸೌಲಭ್ಯವು ಹೊಂದಿದ್ದರೆ ಈಗ ಎಲ್ಲವೂ ನಿಷ್ಪ್ರಯೋಜಕವಾಗಿದೆ. ಈಗ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಾಧಿಕಾರ, ಪೊಲೀಸ್ ಅಗ್ನಿಶಾಮಕ ದಳ ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಿಸುತ್ತಿದ್ದಾರೆ. ಆದರೆ ಒಂದು ವಿಮಾನಕ್ಕಾಗಿ ಬಕ ಪಕ್ಷಿಯ ಹಾಗೆ ಕಾಯುವ ಸ್ಥಿತಿ ಇವರದು. ವಿಮಾನ ನಿಲ್ದಾಣ ಬಿಕೋ ಅನ್ನುತ್ತಿದೆ.

ಕೇಂದ್ರದ ಭರವಸೆ

   ಕಲಬುರಗಿಯಿಂದ ದೆಹಲಿ ಮುಂಬೈ ಬೆಂಗಳೂರು ಮುಂತಾದಡೆಗಳಿಗೆ ಸಂಚಾರ ಪ್ರಾರಂಭಕ್ಕಾಗಿ ಈ ಹಿಂದಿನ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಮೂಲಕ ಕೇಂದ್ರ ವಿಮಾನ ನಿಲ್ದಾಣ ಖಾತೆಯ ಸಚಿವರಿಗೆ ಮನವಿ ಸಲ್ಲಿಸಿದಾಗ ಯೋಜನೆಯ ವಿಸ್ತರಣೆ ಹಾಗೂ ಖಾಸಗಿ ಏರ್ ಲೈನ್ಸ್ ಗಳಾದ ಇಂಡಿಗೋ, ವಿಸ್ತಾರ,ಆಕಾಶ್ ಏರ್ ಮುಂತಾದವುಗಳ ಜೊತೆ ಮಾತುಕತೆ ಮಾಡಿ ವಿಸ್ತರಣೆ ಕೈಗೆತ್ತಿಕೊಳ್ಳಲಾಗುವುದು. ದೇಶದಲ್ಲಿ ಸಾವಿರ ರೂಟ್ ಗಳಲ್ಲಿ ವಿಮಾನ ಸೇವೆ ಆರಂಭವಾಗಲಿದ್ದು ಉಡಾನ್ ನಿಲ್ದಾಣಗಳಿಗೆ ಇದರಲ್ಲಿ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಮಾಜಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಬರೆದ ಪತ್ರಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು.ರಾಜ್ಯಸಭಾ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಕೂಡ ಒತ್ತಾಯಿಸಿದ್ದರುಆದರೆ ಕಲಬುರಗಿ ಜನತೆಯ ಆಸೆ ಮಾತ್ರ ಈಡೇರಲಿಲ್ಲ. ಕಲಬುರಗಿ ಸುತ್ತು ಮುತ್ತಲ ಜಿಲ್ಲೆಗಳ ಪ್ರಯಾಣಿಕರು ಕಾಯುವ ಪರಿಸ್ಥಿತಿ ಇನ್ನೂ ತಪ್ಪಿಲ್ಲ. 

ವಿಮಾನಗಳ ಕೊರತೆ

  ಸ್ಟಾರ್ ಏರ್ ವಿಮಾನಗಳ ಕೊರತೆಯಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆ ಸಂಸ್ಥೆ ಮಾಹಿತಿ ನೀಡಿದ್ದು ಸ್ಟಾರ್ ಏರ್ ವಿಮಾನಗಳ ಸಂಚಾರವು ಈಗ ಪೂರ್ಣ ಬಂದ್ ಆಗಿದ್ದು ಅನೇಕ ತಿಂಗಳುಗಳೇ ಕಳೆದಿವೆ. ಏರ್ ಬಸ್ ದುರಸ್ತಿಯ ನೆಪದಲ್ಲಿ ಕಲಬುರಗಿಯ ಸಂಚಾರ ಬಂದ್ ಆಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಒಗ್ಗೂಡಿತ ಪ್ರಯತ್ನ ಅಗತ್ಯ:

ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಾಜ್ಯದ ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣವು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು, ಸೊಲ್ಲಾಪುರ, ನಾಂದೇಡ್ ಭಾಗದ ಪ್ರಯಾಣಿಕರಿಗೂ ತುಂಬಾ ಅನುಕೂಲಕರವಾಗಿತ್ತು. ಈ ಪ್ರಯಾಣಿಕ ದಟ್ಟಣೆ ಹೊಂದಿದ್ದರೂ ದಿಢೀರ್ ಸಂಚಾರ ಕಡಿತದಿಂದಾಗಿ ಇದೀಗ ತೀವ್ರ ತೊಂದರೆ ಉಂಟಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ನಾಗರಿಕ ವಿಮಾನ ಯಾನ ಖಾತೆಯ ಸಚಿವರ ಗಮನಕ್ಕೆ ಲೋಕಸಭಾ ಸದಸ್ಯರು, ಸಂಘ-ಸಂಸ್ಥೆಗಳು ತೀವ್ರ ಒತ್ತಡ ಹೇರಿ ಒಗ್ಗೂಡಿತ ಪ್ರಯತ್ನ ಮಾಡುವ ಮೂಲಕ ಇನ್ನಷ್ಟು ಖಾಸಗಿ ವಿಮಾನಗಳು ವಿವಿಧ ಭಾಗಗಳಿಗೆ ಸಂಚಾರ ಪ್ರಾರಂಭ ಮಾಡಲು ಒತ್ತಡ ಹೇರಬೇಕಾಗಿದೆ. ಕಾರ್ಗೋ ಸೌಲಭ್ಯ ಆರಂಭಿಸಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೇರಳ ಅವಕಾಶವಿದ್ದು ತೊಗರಿ , ಭತ್ತ ಸೇರಿದಂತೆ ಅನೇಕ ಸಾಮಗ್ರಿಗಳ ರವಾನೆಗೆ ಕೂಡ ಅನುಕೂಲಕರವಾಗಲಿದೆ. ಕಲಬುರಗಿ ವಿಮಾನ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿ ಪ್ರಯಾಣಿಕರಿಗೆ ಅನುಕೂಲವಾಗುವ ಭಾಗ್ಯ ಸಿಗಲಿ ಎಂದು ಡಾ. ಪೆರ್ಲ ಒತ್ತಾಯಿಸಿದ್ದಾರೆ