ದೇಹ - ನೇತ್ರದಾನ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಡಾ.ಪೆರ್ಲ ಅಭಿನಂದನೆ
ದೇಹ - ನೇತ್ರದಾನ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಡಾ.ಪೆರ್ಲ ಅಭಿನಂದನೆ
ನಿವೃತ್ತಿಯಲ್ಲೂ ಆದರ್ಶ ಮೆರೆದ ಪುಂಡಲೀಕ ನಾಯಕ್
ಕಲಬುರಗಿ :ಸೇವಾನಿವೃತ್ತಿಯ ದಿನ ತನ್ನ ದೇಹ ಮತ್ತು ನೇತ್ರವನ್ನು ದಾನ ಮಾಡಿದ ಕೆ ಎಸ್ ಆರ್ ಪಿ ಕಲಬುರಗಿ ಘಟಕದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೂಲತಃ ಕರಾವಳಿಯ ಕುಂದಾಪುರದ ಪುಂಡಲೀಕ ಆರ್. ನಾಯಕ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ರೂಪಾ ಅವರ ಆದರ್ಶ ವಾದ ಸಮಾಜ ಸೇವೆಯು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಹರ್ಷ ವ್ಯಕ್ತಪಡಿಸಿದ್ದಾರೆ ಕೆಎಸ್ ಆರ್ ಪಿ ಕಲಬುರಗಿಯ ಆರನೇ ಘಟಕದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪುಂಡಲಿಕ ನಾಯಕ್ ಅವರು ನವೆಂಬರ್ 30ರಂದು ಸೇವಾ ನಿವೃತ್ತಿ ಹೊಂದಿರುವ ಸಮಾರಂಭದಲ್ಲಿ ತಾನು ಹಾಗೂ ತನ್ನ ಪತ್ನಿ ಜೊತೆಯಾಗಿ ದೇಹ ಮತ್ತು ನೇತ್ರವನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾನ ಮಾಡಿರುವುದಾಗಿ ಘೋಷಣೆ ಮಾಡಿ ಸಮಾಜ ಸೇವೆಗೊಂದು ಆದರ್ಶದ ಕೆಲಸ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಧಾರ್ಮಿಕ ಮತ್ತು ಸಾಮಾಜಿಕವಾಗಿ ಕೊಡುಗೈ ದಾನಿಯಾಗಿರುವ ಪುಂಡಲಿಕ ನಾಯಕ್ 40 ವರ್ಷ ಎಂಟು ತಿಂಗಳು 15 ದಿನಗಳ ಕಾಲ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ದುಡಿದು ಕೀರ್ತಿ ತಂದಿದ್ದಾರೆ. 1984ರಲ್ಲಿ ಬೆಂಗಳೂರಿನಲ್ಲಿ ಕೆ ಎಸ್ ಆರ್ ಪಿ ಯಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಸೇರಿ 19 ವರ್ಷಗಳ ನಂತರ ಅಲ್ಲಿಂದ ಕಲಬುರಗಿಗೆ ಬಂದು ನಿವೃತ್ತಿಯವರೆಗೂ ಇಲ್ಲಿ ಸೇವೆ ಸಲ್ಲಿಸಿದರು. ಅವರ ಅನುಪಮ ಸೇವೆಗಾಗಿ ಈ ವರ್ಷ ರಾಷ್ಟ್ರಪತಿ ಪುರಸ್ಕಾರ ಲಭಿಸಿದೆ.
ಉಡುಪಿ ಜಿಲ್ಲೆಯ ಹಾಲಾಡಿ ಸಮೀಪದ ಜನ್ನಾಡಿಯ ರಾಮರಾಯ ನಾಯಕ್ ಇವರ ತಂದೆ. ಎಳವೆಯಲ್ಲೆ ರಾಷ್ಟ್ರಸೇವೆಯ ತುಡಿತ ಹೊಂದಿದ ಇವರು ಪೊಲೀಸ್ ಇಲಾಖೆಗೆ ಅಥವಾ ಮಿಲಿಟರಿಗೆ ಸೇರುವ ಆಸಕ್ತಿ ಹೊಂದಿದ್ದರು. ಕೆ ಎಸ್ ಆರ್ ಪಿ ಯಲ್ಲಿ ವೃತ್ತಿಗೆ ಸೇರಿ ಪ್ರಮುಖ ಘಟನೆಗಳ ವೇಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ವಿಶೇಷ ಅನುಭವವನ್ನು ಕೂಡಾ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾ ವರದಿಯೊಂದನ್ನು ವಿರೋಧಿಸಿ ಕೋಮು ಸಂಘರ್ಷದ ವೇಳೆ 15 ಮಂದಿ ಸಾವನ್ನಪ್ಪಿದ ಘಟನೆಯ ವೇಳೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 1989 ರಿಂದ1991 ರವರೆಗೆ ವೀರಪ್ಪನ್ ಕಾರ್ಯಾಚರಣೆಯ ಕಮಾಂಡೋ ಗ್ರೂಪಿನಲ್ಲಿ ಸೇವೆ ಸಲ್ಲಿಸಿ ಒಂದು ಕೋಟಿ 20 ಲಕ್ಷದ ಶ್ರೀಗಂಧ ವಶಪಡಿಸಿಕೊಂಡ ಪ್ರಕರಣ ಹಾಗೂ ಗುಜರಾತ್, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಛತ್ತಿಸ್ ಗಢ, ಮಧ್ಯಪ್ರದೇಶ ತೆಲಂಗಾಣ, ದೆಹಲಿ ಮುಂತಾದೆಡೆಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಅನುಭವವನ್ನೂ ಹೊಂದಿದ್ದಾರೆ. ಕರಾವಳಿಯಲ್ಲಿ ಹುಟ್ಟಿ ಬೆಳೆದು ಶೂರತನ ಮೈಗೂಡಿಸಿಕೊಂಡ ಪುಂಡಲಿಕ ನಾಯಕ್ ಅವರ ಬದುಕು ಇತರರಿಗೆ ಆದರ್ಶ ಹಾಗೂ ಪ್ರೇರಣೆ ಎಂದು ಡಾ. ಸದಾನಂದ ಪೆರ್ಲ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.