ಅನುಕಂಪ ಆಧಾರದ ಸರ್ಕಾರಿ ನೌಕರಿ ನಿಗದಿತ ಸಮಯಕ್ಕೆ ಸೀಮೀತ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅನುಕಂಪ ಆಧಾರದ ಸರ್ಕಾರಿ ನೌಕರಿ ನಿಗದಿತ ಸಮಯಕ್ಕೆ ಸೀಮೀತ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ : ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯುವುದು ವ್ಯಕ್ತಿಯ ಜನ್ಮಸಿದ್ಧ ಹಕ್ಕು ಎಂದೆನು ಇಲ್ಲ.

ಅದನ್ನು ಉದ್ಯೋಗಿಯು ಸಾವನಪ್ಪಿದ ನಿಗದಿತ ಅವಧಿಯೊಳಗೆ ಕುಟುಂಬಸ್ಥರು ಪಡೆತಕ್ಕದ್ದು, ಯಾವಾಗ ಬೇಕಾದರೂ ಕೊಡುವಂತದ್ದಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

 ಸೇವಾವಧಿಯಲ್ಲಿ ಇರುವಾಗಲೇ ಮೃತಪಡುವ ನೌಕರನೊಬ್ಬ ಹೊಂದಿರುವ ಸೇವಾ ಷರತ್ತೂ ಸಹ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ (ನ.13) ತಿಳಿಸಿದೆ.

1997ರಲ್ಲಿ ಮೃತಪಟ್ಟ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಪುತ್ರನಿಗೆ ಅನುಕಂಪ ಆಧಾರಿತ ಉದ್ಯೋಗ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ, ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮೇಲಿನಂತೆ ತಿಳಿಸಿದೆ.

ನೇಮಕಾತಿ ನೀತಿಗೆ ವಿರುದ್ದವಾಗಿ ಮತ್ತು ಕಾನೂನು ಬಾಹಿರವಾಗಿ ಒಬ್ಬರ ಪರವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅನುಕಂಪ ಆಧಾರಿತ ನೇಮಕಾತಿಯು, ಮೃತರ ಕುಟುಂಬಕ್ಕೆ ಆ ಸಮಯದಲ್ಲಿ ತುರ್ತು ಆರ್ಥಿಕ ಸಹಾಯ ಮಾಡಲು ಇರುವುದೇ ಹೊರತು, ಅದು ಅವರ ಸಂಪೂರ್ಣ ಹಕ್ಕು ಎಂದು ಭಾವಿಸಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ : 1997ರಲ್ಲಿ ಜೈ ಪ್ರಕಾಶ್ ಎಂಬ ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯದ ವೇಳೆ ಮೃತಪಟ್ಟಿದ್ದ. ಆಗ ಅವರ ಮಗ ಟಿಂಕು ಎಂಬುವವ ಕೇವಲ 7 ವರ್ಷದವನಾಗಿದ್ದ. ಪ್ರಕಾಶ್ ಪತ್ನಿ ಅನಕ್ಷರಸ್ಥೆಯಾಗಿದ್ದ ಕಾರಣ, ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಕೊಡುವಂತೆ ಅವರು ಆ ಸಮಯದಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಬದಲಾಗಿ, ಅಪ್ರಾಪ್ತ ಮಗ ವಯಸ್ಕನಾದ ನಂತರ ಆತನಿಗೆ ಉದ್ಯೋಗ ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.

ಅದರಂತೆ, ಟಿಂಕು ವಯಸ್ಸಿಗೆ ಬಂದ ಮೇಲೆ 2008ರಲ್ಲಿ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಅದನ್ನು ತಿರಸ್ಕರಿಸಿದ್ದ ಅಧಿಕಾರಿಗಳು, ನೌಕರ ಸಾವನ್ನಪ್ಪಿ 3 ವರ್ಷದೊಳಗೆ ಅರ್ಜಿ ಸಲ್ಲಿಸಬಹುದಷ್ಟೇ ಎಂದು ಹೇಳಿದ್ದರು. ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಕೂಡ ಉದ್ಯೋಗ ಕೋರಿದ್ದ ಮನವಿ ತಿರಸ್ಕರಿಸಿತ್ತು.

ಹಾಗಾಗಿ, ಕಾನ್‌ಸ್ಟೇಬಲ್ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಈ ಅರ್ಜಿ ತಿರಸ್ಕರಿಸುತ್ತಾ, ಮೃತಪಟ್ಟ ಪೇದೆಯ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.