ಕಾಶ್ಮೀರ ಕಣಿವೆಯಲ್ಲಿ ಮತ್ತೆ ಅಟ್ಟಹಾಸ ಮೆರೆದ ಉಗ್ರರು: ಇಬ್ಬರು ಯೋಧರು ಹುತಾತ್ಮ ಉಭಯ ಕಾರ್ಮಿಕರ ಸಾವು
ಕಾಶ್ಮೀರ ಕಣಿವೆಯಲ್ಲಿ ಮತ್ತೆ ಅಟ್ಟಹಾಸ ಮೆರೆದ ಉಗ್ರರು: ಇಬ್ಬರು ಯೋಧರು ಹುತಾತ್ಮ ಉಭಯ ಕಾರ್ಮಿಕರ ಸಾವು
ಜಮ್ಮು ಕಾಶ್ಮೀರದ ರಾಜ್ಯದಲ್ಲಿ ಚುನಾಯಿತ ಸರ್ಕಾರ ರಚನೆಯಾದ ನಂತರ ಮತ್ತೆ ಉಗ್ರರ ಉಪಟಳ ಶುರುವಾಗಿದ್ದು,
ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ಉಗ್ರರು ಮಿಲಿಟರಿ ವಾಹನದ ಮೇಲೆ ಸಂಚು ರೂಪಿಸಿ ದಾಳಿ ನಡೆಸಿದ್ದು, ಇಬ್ಬರು ಯೋಧರು ಮತ್ತು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಅಲ್ಲದೆ ಮೂವರು ಸೈನಿಕರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.
ಜಿಲ್ಲೆಯ ಗುಲ್ಮಾರ್ಗ್‌ನ ಪ್ರಸಿದ್ಧ ಸ್ಟೀ-ರೆಸಾರ್ಟ್ ಬಳಿಯ ಬೋಟಪಾತ್ರ ಪ್ರದೇಶದಲ್ಲಿ ಭಾರಿ ಶಸ್ತ್ರಸಜ್ಜಿತ ಉಗ್ರಗಾಮಿಗಳು, 18ನೇ ರಾಷ್ಟ್ರೀಯ ರೈಫಲ್ಸ್‌ನ (ಆರ್‌ಆರ್) ಸೇನಾ ವಾಹನದ ಮೇಲೆ ಬೋಟಪಾತ್ರದ ನಾಗಿನ್ ಧೋಕ್ ಪ್ರದೇಶದಲ್ಲಿ ಹಠಾತ್ ಗುಂಡು ಹಾರಿಸಿ ದಾಳಿ ನಡೆಸಿದ್ದಾರೆ.
ನಾಗರಿಕ ಸಂಚಾರಕ್ಕೆ ನಿರ್ಬಂಧವಿರುವ ಈ ಪ್ರದೇಶವು ಗುಲ್ಮಾರ್ಗ್ ಸ್ಟೀ-ರೆಸಾರ್ಟ್‌ನಿಂದ ಸುಮಾರು ಏಳು ಕಿಲೋಮೀಟರ್ ಅಳತೆ ದೂರದಲ್ಲಿದ್ದು, ಗಡಿ ನಿಯಂತ್ರಣ ರೇಖೆಯ (ಎಲ್‌ಓಸಿ) ಸಮೀಪದಲ್ಲಿದೆ.
'ಇಬ್ಬರು ಸೈನಿಕರು ಮತ್ತು ಸೇನೆಗಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೂವರು ಸೈನಿಕರು ಗಾಯಗೊಂಡಿದ್ದಾರೆ.
ಉಗ್ರರು ದಟ್ಟ ಅರಣ್ಯದಲ್ಲಿ ಪರಾರಿಯಾಗುವುದನ್ನು ತಡೆಯಲು ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದೆ ಎಂದು ಮೂಲಗಳು ತಿಳಿಸಿವೆ.
ದಾಳಿ ನಡೆದಿರುವ ಪ್ರದೇಶಕ್ಕೆ ಹೆಚ್ಚಿನ ಸೇನೆಯನ್ನು ನಿಯೋಜಿಸಲಾಗಿದೆ' ಎಂದು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಾಗಿನ್ ಪೋಸ್ಟ್ ಸುತ್ತಮುತ್ತ ಬಾರಾಮುಲ್ಲಾ ಜಿಲ್ಲೆಯ ಬೋಟಪತ್ರ ವಲಯದಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ' ಎಂದು ಬಾರಾಮುಲ್ಲಾ ಪೊಲೀಸರು 'ಎಕ್ಸ್'ನಲ್ಲಿ ಪೋಸ್ಟ್ ಮಾಹಿತಿ ನೀಡಿದ್ದಾರೆ.
ಉಗ್ರರ ದಾಳಿ ನಡೆದಿರುವ ಈ ಪ್ರದೇಶವು ಸಾಮಾನ್ಯವಾಗಿ, ಭಯೋತ್ಪಾದಕ ಮುಕ್ತ ಪ್ರದೇಶವೆನಿಸಿತ್ತು. ಗುಲ್ಮಾರ್ಗ್ ಮತ್ತು ಅದರ ಮೇಲ್ಬಾಗದ ಬೋಟ್ ಪಾತ್ರ ಪ್ರದೇಶವು ಸದಾ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ .
ಈ ಸ್ಥಳವು ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣವಾಗಿದ್ದು, ಪ್ರವಾಸಿಗರಲ್ಲಿ ಇಂತಹ ಬೆಳವಣಿಗೆ ಆತಂಕ ಮೂಡಿಸಿದೆ.
ಸ್ಥಳೀಯ ಸರ್ಕಾರ ಉಗ್ರರ ಉಪಟಳಕ್ಕೆ ಕಡಿವಾಣ ಹಾಕುವ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಬೇಕೆಂಬುದು ಅಲ್ಲಿಯ ಜನರ ಅಂಬೋಣ.