ಬಳಸಿದರೆ ಬೆಳೆಯುವುದು ಕನ್ನಡ : ಜೋಶಿ

ಬಳಸಿದರೆ ಬೆಳೆಯುವುದು ಕನ್ನಡ : ಜೋಶಿ

ಬಳಸಿದರೆ ಬೆಳೆಯುವುದು ಕನ್ನಡ : ಜೋಶಿ

ಸೇಡಂ : ನಿತ್ಯ ಜೀವನದ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸುತ್ತಿದ್ದಾಗ ಮಾತ್ರ ಬೆಳೆಯುತ್ತದೆ ಎಂದು ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಹೇಳಿದರು. 

ಲಡ್ಡಾ ಕಾನೂನು ಮಹಾ ವಿದ್ಯಾಲಯದ ಪ್ರಾಂಗಣದಲ್ಲಿ ವಿದ್ಯಾಮಂದಿರ ರಾಜ್ಯ ಪಠ್ಯಕ್ರಮದ ಆಂಗ್ಲಮಾಧ್ಯಮದ ಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗಡಿ ಪ್ರದೇಶದಲ್ಲಿ ಸಹಜವಾಗಿಯೇ ಅನ್ಯಭಾಷೆಗಳ ಪ್ರಭಾವದಿಂದಾಗಿ ಬೇರೆ ಭಾಷೆಯಲ್ಲಿ ವ್ಯವಹರಿಸಬೇಕಾಗುತ್ತದೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಭಾಷಾಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದರು.

ಕಲಿಯುವ ದೃಷ್ಟಿಯಿಂದ ಅನೇಕ ಭಾಷೆಗಳಿವೆ. ಯಾವ ಕಾರಣಕ್ಕೂ ಬೇರೆ ಭಾಷೆಯನ್ನು ದ್ವೇಷ ಮಾಡಬಾರದು. ಎಲ್ಲಾ ಭಾಷೆಗಳನ್ನು ಗೌರವಿಸುತ್ತಲೇ ಕನ್ನಡವನ್ನು ಪ್ರೀತಿಸಬೇಕು, ಮೋಹಿಸಬೇಕು. ಕನ್ನಡ ಭಾಷೆಯ ಮಹತ್ವವನ್ನು ಅರಿತುಕೊಳ್ಳಬೇಕು. ಕನ್ನಡದ ಮೂಲಕವೇ ಜಗತ್ತನ್ನು ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಲಡ್ಡಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶರಣಗೌಡ ಪಾಟೀಲರು ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾಮಂದಿರ ಶಾಲೆಯ ಮುಖ್ಯಗುರುಗಳಾದ ಅಶ್ವಿನಿ ರುದ್ನೂರ ಅವರು, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಭಾಷಾ ಶಿಕ್ಷಕಿ ಸಿದ್ದಮ್ಮ ಮಠಪತಿ ಮಾರ್ಗದರ್ಶನದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನ ಆಯೋಜಿಸಲಾಗಿತ್ತು. ಸಂತೋಷ, ಸುಭಾಷ, ಆಲಿ ಮಾಸ್ಟರ್ ಇತರರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಸುಧಾರಾಣಿ ನಿರೂಪಿಸಿದರು.