ನುಲಿಯ ಚಂದಯ್ಯ

ಕಾಯದಿಂದ ಕಾಬುದು ಕುರುಹಿನ ಮೂರ್ತಿಯ.
ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ.
ಅರಿವ ಕುರುಹ ಮರೆದಲ್ಲಿ ಪರಮ. ದಾಸೋಹದಿಂದ ಪರಶಿವಮೂರ್ತಿಯ. ಕಾಣಬಂದಿತ್ತು. ಚನ್ನಬಸವಣ್ಣಪ್ರಿಯ
ಚಂದೇಶ್ವರ ನೀನೆ ಬಲ್ಲೆ.
ನುಲಿಯ ಚಂದಯ್ಯ ವಚನ ಅನುಸಂಧಾನ
ಶರಣರ ತಾತ್ವಿಕ ವಿಚಾರಗಳು; ಪ್ರಾಮಾಣಿಕವಾದ ಮತ್ತು ಪರಿಶುದ್ಧವಾದ ಅರಿವು ಆಚರಣೆಯಲ್ಲೇ ಜೀವ ತಳೆಯುವಂಥವು. ಈ ಮಾತನ್ನು ಶರಣರು ತಾತ್ವಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಹೇಳದೇ ಅದನ್ನು ಅವರು ತಮ್ಮ ನಿತ್ಯದ ನಿಜ ಬದುಕಿನಲ್ಲಿ ನೈಜವಾಗೇ ನಡೆನುಡಿಗಳ ಸಾಂಗತ್ಯದಲ್ಲಿ ಬದುಕಿ ತೋರಿಸಿದ್ದಕ್ಕಾಗೇ ವಚನಗಳು ಜನಮಾನಸದಲ್ಲಿ ಇಂದಿಗೂ ಜ್ವಲಂತ ಸಾಕ್ಷಿಯಾಗಿ ಉಳಿದಿವೆ. ಈ
ವಚನಗಳು; ಜೀವ ದೇವ ಜಗತ್ತು ಹಾಗೂ ತನು ಮನ ಧನ ಮತ್ತು ಗುರು ಲಿಂಗ ಜಂಗಮ ಹಾಗೂ ಅರಿವು ಆಚರಣೆ ಅನುಭಾವ ಹೀಗೆ ಅತಿಮುಖ್ಯ ಮೂರು ಪದಗಳ ಮೂರು ಸಂಗತಿಗಳನ್ನುಳ್ಳಂತ ಸುಸಂಗತ ಎಳೆಯ ಸೂಕ್ಷ್ಮವಾದ ಹಾಗೂ ಸೂಕ್ತ ವಾದ ಒಳ ಕರುಳ ಸಾವಯವ ಸಂಬಂಧವನ್ನು ಮುಪ್ಪುರಿಗೊಂಡು ಅಂತಿಮ ಗಂತವ್ಯದ ಪರಮ ಪರಿಣಾಮವನ್ನು ಬೀರುವಂಥಾ ದಿವ್ಯ ಚೈತನ್ಯದ ಚಿನ್ಮಯ ಶಕ್ತಿಯನ್ನ ಒಳಗೊಂಡಿದೆ. ಈ ನುಡಿಯ
ಬೆಳಕಿನಲ್ಲಿ ಪ್ರಸ್ತುತ ನುಲಿಯ ಚೆಂದಯ್ಯಶರಣರ
ಈ ಮೇಲಿನ ವಚನವನ್ನು ಅನುಸಂಧಾನ ಮಾಡಿ ನೋಡೋಣ.
*ಕಾಯದಿಂದ ಕಾಬುದು ಕುರುಹಿನ ಮೂರ್ತಿಯ.*
*ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ.*
ಇಲ್ಲಿ ವಚನಕಾರರು ಪರಿಭಾವಿಸಿಕೊಂಡು ಕಂಡ ಎರಡು ಮೂರ್ತಿಗಳ ಹೆಸರು ಹೇಳಿ ಅವುಗಳನ್ನು ಕಾಣುವ ಎರಡು ನೆಲೆಗಳ ಬಗ್ಗೆಯೂ ಕೂಡಾ ಹೇಳಿ ಆ ಅವಸ್ಥೆಗಳನ್ನ ಇಲ್ಲಿ ಈ ಸಾಲಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪರಾತ್ಪರ ಪರಶಿವಶಕ್ತಿಯ ಪರಮ ಕುರುಹು ಆಗಿರುವ ಇಷ್ಟಲಿಂಗವನ್ನೇ ಅವರಿಲ್ಲಿ ಕುರುಹಿನ ಮೂರ್ತಿ ಎಂದು ಕರೆದಿದ್ದಾರೆ. ಇದನ್ನು ಭೌತಿಕವಾದ ಲೌಕಿಕದ ಕಣ್ಣಿನಲ್ಲಿ ಕಾಣಬಹುದು. ಮತ್ತೊಂದು ಅಂತರಂಗದ ಆ ಅರಿವಿನ ಮೂರ್ತಿ ಅದನ್ನ ಈ ತನವಿನ ಕಣ್ಣಲ್ಲಿ ಕಾಣಲು ಸಾಧ್ಯವಿಲ್ಲ
ಹಾಗಾಗಿ ಅದನ್ನು ಅಂತರಂಗದ ಆತ್ಮನ ಅರಿವಿನ ಕಣ್ಣಿನಲ್ಲಿಯೇ ಕಾಣಬೇಕಾದ ಅನಿವಾರ್ಯ ಇದೆ ಎಂದು ಇಲ್ಲಿ ನುಲಿಯ ಚೆಂದಯ್ಯ ಶರಣ ಸರಳ ವಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ದಾರೆ. ತನ್ಮೂಲಕ ತನುವಿನ ಕಣ್ಣಿನ ಇತಿಮಿತಿಯನ್ನೂ ಎತ್ತಿ ಹಿಡಿದು ತೋರಿಸಿದ್ದಾರೆ.
*ಅರಿವ ಕುರುಹ ಮರೆದಲ್ಲಿ ಪರಮ ದಾಸೋಹದಿಂದ* *ಪರಶಿವಮೂರ್ತಿಯ ಕಾಣಬಂದಿತ್ತು.* *ಚನ್ನಬಸವಣ್ಣಪ್ರಿಯ*
ಚಂದೇಶ್ವರ ನೀನೆ #ಬಲ್ಲೆ.
ಅಂತರಂಗದ ಆತ್ಮವೇ ಒಳಗಣ್ಣಾಗಿ ಕಾಣುವ ಅರಿವಿನ ಮೂರ್ತಿಯ ಮತ್ತು ಬಹಿರಂಗದಲ್ಲಿನ ಭೌತಿಕ ಕಣ್ಣುಗಳ ಮೂಲಕ ಪರಮನ ಕುರುಹಿನ ಮೂರ್ತಿಯ ಕಾಣುವ ಮೂಲಕ ಪಡೆದ ಅರಿವು ಹಾಗೂ ಕುರುಹು ಇವುಗಳನ್ನ ಒಂದು ಹಂತದಲ್ಲಿ ಮರೆತು ಮುಂದೆ ಸಾಗಿ ಬಂದಾಗ ಮಾತ್ರ ಪರಮ ಶಿವ ಮೂರ್ತಿಯನ್ನು ಕಾಣಬಹುದು ಎಂದು ಇಲ್ಲಿ ಖಚಿತಪಡಿಸಿದ್ದಾರೆ. ಇದಕ್ಕೆ 'ಚನ್ನಬಸವಣ್ಣಪ್ರಿಯ
ಚಂದೇಶ್ವರ ನೀನೆ ಬಲ್ಲೆ' ಎನ್ನುವ ಮೂಲಕ ಬಹು ಮುಖ್ಯವಾದ ಸಾಕ್ಷಿಯನ್ನು ಚೆಂದಯ್ಯ ಶರಣರು ಮುಂದೆ ತಂದಿರುವರು. ತನ್ಮೂಲಕ ಮೂರನೇ ಹಂತದ ಸಂಗತಿಯ ಅಂತಿಮ ಗಂತವ್ಯದಲ್ಲಿಯೇ ಪರಮ ಪರಿಣಾಮವನ್ನ ಸಾಬೀತು ಪಡಿಸುವರು.
ಮೊದಲ ಹಂತದಲ್ಲಿ ಬಹಿರಂಗದ ಭೌತಿಕ ಕಣ್ಣಿನ ಮೂಲಕ ಎರಡನೇ ಹಂತದಲ್ಲಿ ಆತ್ಮದ ಅರಿವಿನ ಕಣ್ಣಿನ ಮೂಲಕ ಸಾಧನೆಯ ದಾರಿಯ ಕ್ರಮಿಸಿ ಮೂರನೇ ಹಂತದಲ್ಲಿ ಪರಮ ಪರಿಣಾಮವನ್ನು ದಕ್ಕಿಸಿಕೊಳ್ಳುವರು. ಇದನ್ನು ಇನ್ನೂ ಸ್ಪಷ್ಟವಾಗಿ ತಿಳಿದು ಕೊಳ್ಳಲು ಗಮನಿಸಬೇಕಾದ್ದು ಏನೆಂದರೆ; ಉಪಗ್ರಹವನ್ನ ಅಂತರಿಕ್ಷಕ್ಕೆ ತಲುಪಿಸಬೇಕಾದರೆ ರಾಕೆಟ್ ಉಡಾವಣೆ ಮಾಡುವರು ಆಗ ರಾಕೆಟ್ ಹಂತ ಹಂತವಾಗಿ ಕಳಚಿಕೊಂಡು ಅಂತಿಮವಾಗಿ ನೆಲೆಯ ತಲುಪಿ ತನ್ನ ಚಟುವಟಿಕೆ ಮಾಡುವಂತೆ ಶರಣರ ತಾತ್ವಿಕ ವಿಚಾರವೂ ತ್ರಿಗುಣಾತ್ಮಕವಾದ ಒಟ್ಟಾರೆ ನೆಲೆಯಲ್ಲಿ ಪರಿಣಾಮ ಬೀರುತ್ತದೆಂಬ ಸತ್ಯವು ಎಷ್ಟು ವೈಜ್ಞಾನಿಕವಾಗಿದೆಯಲ್ಲಾ ಎಂದು ಖಂಡಿತಾ ಅನಿಸುತ್ತದೆ.
ಅಳಗುಂಡಿ ಅಂದಾನಯ್ಯ