ಅಂಗನವಾಡಿ ಮೇಲ್ವಿಚಾರಕಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ
ಅಂಗನವಾಡಿ ಮೇಲ್ವಿಚಾರಕಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ
ಶಹಾಬಾದ್ : ಅಂಗನವಾಡಿ ಕಾರ್ಯಕರ್ತೆಯರಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ, ಹಾಗೂ ಅಂಥಹ ಅಧಿಕಾರಿಯನ್ನು ಅಮಾನತ್ತು ಅಥವಾ ವರ್ಗಾವಣೆ ಮಾಡಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯ ಅಧ್ಯಕ್ಷೆ ಶಾಂತ ಗಂಟಿ ಹೇಳಿದರು.
ಅಶೋಕ್ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತ ಮೇಲೆ ಮೇಲ್ವಿಚಾರಕಿ ಮಾನಸಿಕ ಹಿಂಸೆ ನಿಂದನೆ ಮತ್ತು ಕಿರುಕುಳ ತಾಳದೆ ಅಂಗನವಾಡಿ ಕಾರ್ಯಕರ್ತೆ ಗುರುವಾರ ಮೂರ್ಚೆ ಹೋಗಿದ್ದ ಘಟನೆಯನ್ನು ಖಂಡಿಸಿ, ಮತ್ತು ಮೇಲ್ವಿಚಾರಕಿ ಅವರ ಮೇಲೆ ಹಣ ವಸೂಲಿ ಆರೋಪ ಕೂಡ ಕೇಳಿ ಬರುತ್ತಿವುದನ್ನು ವಿರುದ್ಧ ಸಿಡಿಪಿಓ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಘದ ಜಿಲ್ಲಾ ಅಧ್ಯಕ್ಷ ಗೌರಮ್ಮ ಸಿ. ಪಾಟೀಲ ಮಾತನಾಡಿ, ಅಂಗನವಾಡಿ ಮೇಲ್ವಿಚಾರಕಿ ಸಂಗಮ್ಮ ಪಾಟೀಲ ಅವರ ನಡೆ-ನುಡಿ ಬದಲಾಗಬೇಕು, ಇದರಿಂದ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ, ಅದಕ್ಕೆ ಅವಕಾಶ ನೀಡಬಾರದು, ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಿಡಿಪಿಓ ಅಧಿಕಾರಿ ಡಾ. ವಿಜಯಲಕ್ಷ್ಮಿ ಹೇರೂರು ಮನವಿ ಪತ್ರ ಸ್ವೀಕರಿಸಿ ಅಂಗನವಾಡಿ ಮೇಲ್ವಿಚಾರಕಿ ಕ್ಷುಲ್ಲಕ ಕಾರಣಕ್ಕೆ ಅತಿರೇಕದ ಮಾತುಗಳು ಆಗಿರುವುದರಿಂದ, ಅಂಗನವಾಡಿ ಕಾರ್ಯಕರ್ತೆ ಮಾನಿಸಿಕ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ, ಇಂತಹ ಘಟನೆ ಮರು ಕಳಿಸಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದೇನೆ, ಪುನಹ ಎಂಥ ಘಟನೆ ನಡೆದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ನಂತರ ಕಾರ್ಯಕರ್ತೆಯರು ಪ್ರತಿಭಟನೆ ವಾಪಸ್ಸು ಪಡೆದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಬಣ್ಣ ಗುಡುಬಾ, ಸಾಬಮ್ಮ ಎಂ. ಕಾಳಗಿ, ಸುವರ್ಣಾ, ಮೈತ್ರಾಬಾಯಿ ತಳವಾರ, ಅಂಬುಜಾ, ಸುಜಾತಾ ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಹಾಬಾದ್ ವರದಿ ನಾಗರಾಜ್ ದಂಡಾವತಿ