ಕಲ್ಯಾಣ ಕರ್ನಾಟಕ ಭಾಗದ ಮಿಸಲಾತಿ ನಿಯಮದಂತೆ 545 ಪಿ ಎಸ್ ಐ ಹುದ್ದೆ ನೇಮಕಾತಿ ನಡೆಯಲಿ - ಶ್ರೀ ಶಶೀಲ್ ಜಿ ನಮೋಶಿ

ಕಲ್ಯಾಣ ಕರ್ನಾಟಕ ಭಾಗದ ಮಿಸಲಾತಿ ನಿಯಮದಂತೆ 545 ಪಿ ಎಸ್ ಐ ಹುದ್ದೆ ನೇಮಕಾತಿ ನಡೆಯಲಿ - ಶ್ರೀ ಶಶೀಲ್ ಜಿ ನಮೋಶಿ

ಕಲ್ಯಾಣ ಕರ್ನಾಟಕ ಭಾಗದ ಮಿಸಲಾತಿ ನಿಯಮದಂತೆ 545 ಪಿ ಎಸ್ ಐ ಹುದ್ದೆ ನೇಮಕಾತಿ ನಡೆಯಲಿ - ಶ್ರೀ ಶಶೀಲ್ ಜಿ ನಮೋಶಿ 

ಕರ್ನಾಟಕ ಸರಕಾರ ದಿನಾಂಕ 21-01-2021 ರಂದು ಪೋಲಿಸ್ ಇಲಾಖೆಯ ಮೂಲಕ 545 ಪೋಲಿಸ್ ಸಬ್ ಇನ್ಸಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ನಡೆಸಿರುತ್ತದೆ. ಕಾರಣಾಂತರದಿಂದ ಹಿಂದೆ ನಡೆದ ಪರೀಕ್ಷೆಗಳು ರದ್ದಾಗಿ, ಇತ್ತೀಚಿಗೆ ಸರಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುತ್ತದೆ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿ ತಯಾರಿಸುವಾಗ ಅನುಸರಿಸಬೇಕಿರುವ ನಿಯಮಗಳನ್ನು ಕಾಲಕಾಲಕ್ಕೆ ಸರಕಾರವು ಸುತ್ತೋಲೆಯ ಮೂಲಕ ನೀಡುತ್ತ ಬಂದಿರುತ್ತದೆ. ಅದರಂತೆ ಪ್ರಸ್ತುತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದಿನಾಂಕ 01-02-2023ರಂದು ಹೊರಡಿಸಿರುವ ಸುತ್ತೋಲೆಯು ಚಾಲ್ತಿಯಲ್ಲಿರುತ್ತದೆ. ಆ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು 371ಜೆ ಅಡಿಯಲ್ಲಿ ಮೀಸಲಾತಿ ಕೋರಿದ್ದು, ಆಯ್ಕೆ ಪಟ್ಟಿ ತಯಾರಿಸುವಾಗ ಮೊದಲಿಗೆ ಮೆರಿಟ್ ಆಧಾರದಲ್ಲಿ ಅವರನ್ನು ಮಿಕ್ಕುಳಿದ ವೃಂದದಲ್ಲಿ ಪರಿಗಣಿಸಿ, ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಪರಿಗಣಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ.

ಆದರೆ, ಇತ್ತೀಚಿಗೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆಯವರು ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು. ಪೋಲಿಸ್ ಪ್ರಧಾನ ಕಛೇರಿ ಇವರಿಗೆ ಬರೆದ ಪತ್ರದಲ್ಲಿ ದಿನಾಂಕ 01-02-2023ರ ಸುತ್ತೋಲೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಯಲ್ಲಿ ದಾಖಲಾದ ಅರ್ಜಿ ಸಂ.1970/2023, ದಿನಾಂಕ 01-01-2024ರ ತೀರ್ಪಿನಲ್ಲಿ ರದ್ದುಪಡಿಸಿದ್ದು, ಈ ತೀರ್ಪಿನ ವಿರುದ್ದ ಮಾನ್ಯ ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ಸಂ.16343/2024ರಲ್ಲಿ ನೀಡುವ ತೀರ್ಪಿಗೆ ಒಳಪಟ್ಟು ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದಂತೆ ದಿನಾಂಕ: 06/6/2020ರ ಸುತ್ತೋಲೆಯಂತೆ ಕ್ರಮವಹಿಸುವಂತೆ ಸೂಚಿಸಿರುವದು ಸಂವಿಧಾನದ 371ಜೆ ಆಶಯಗಳಿಗೆ

ವಿರುದ್ಧವಾಗಿರುತ್ತದೆ. ಅಲ್ಲದೇ ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂ. 16343/2024ರಲ್ಲಿ ಮಾನ್ಯ ಉಚ್ಚನ್ಯಾಯಾಲಯವು ದಿನಾಂಕ 08-08-2024 ರಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ದಾಖಲಾದ ಅರ್ಜಿ ಸಂ.1970/ 2023, ದಿನಾಂಕ 01-01-2024ರ ತೀರ್ಪಿಗೆ ತಡೆಯಾಜ್ಞೆಯನ್ನು ನೀಡಿರುತ್ತದೆ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸದರಿ ಕೆಎಟಿ ಆದೇಶಕ್ಕೆ ತಡೆಯಾಜ್ಞೆ ಇದ್ದರೂ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆಯವರು ಮುಖ್ಯ ಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ ಅನುಮೋದನೆ ಪಡೆದಿರುವದು ಅತ್ಯಂತ ಅಕ್ಷಮ್ಯವಾಗಿರುತ್ತದೆ.

ಇದರಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸರಕಾರವು ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಭಾವನೆ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ 371ಜೆ ಮೀಸಲಾತಿ ಕೋರಿದ್ದರೂ ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದಲ್ಲಿ ಆಯ್ಕೆ ಮಾಡುವದರಲ್ಲಿ ಯಾವುದೇ ತಪ್ಪು ಕಂಡುಬರುವದಿಲ್ಲ ಹಾಗೂ ಇದು ಸಹಜ ನ್ಯಾಯ ಮತ್ತು ಎಲ್ಲಾ ರೀತಿಯ ಮೀಸಲಾತಿ ಕ್ರಮದಲ್ಲಿಯೇ ಇರುತ್ತದೆ.

ಆದ್ದರಿಂದ. 545 ಪೋಲಿಸ್ ಸಬ್ ಇನ್ಸಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆ ಪಟ್ಟಿ ತಯಾರಿಸುವಾಗ ದಿನಾಂಕ 01-02-2023ರ ಸುತ್ತೋಲೆಯಂತೆಯೇ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು 371ಜೆ ಅಡಿಯಲ್ಲಿ ಮೀಸಲಾತಿ ಕೋರಿದ್ದು, ಆಯ್ಕೆ ಪಟ್ಟಿ ತಯಾರಿಸುವಾಗ ಮೊದಲಿಗೆ ಮೆರಿಟ್ ಆಧಾರದಲ್ಲಿ ಅವರನ್ನು ಮಿಕ್ಕುಳಿದ ವೃಂದದಲ್ಲಿ ಪರಿಗಣಿಸಿ. ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಪರಿಗಣಿಸಿ ಆಯ್ಕೆ ಪಟ್ಟಿಯನ್ನು ತಯಾರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಆಗ್ರಹಿಸಿದ್ದಾರೆ