ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಶಾಂತಿ ಸಮಿತಿ ಸಭೆ || ಪರಸ್ಪರ ಸೌಹಾರ್ದತೆಯಿಂದ ಶಾಂತಿಯುತವಾಗಿ ಹಬ್ಬ ಆಚರಣೆಗೆ ಡಿ.ಸಿ. ಕರೆ

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಶಾಂತಿ ಸಮಿತಿ ಸಭೆ || ಪರಸ್ಪರ ಸೌಹಾರ್ದತೆಯಿಂದ ಶಾಂತಿಯುತವಾಗಿ ಹಬ್ಬ ಆಚರಣೆಗೆ ಡಿ.ಸಿ. ಕರೆ

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಶಾಂತಿ ಸಮಿತಿ ಸಭೆ:

ಪರಸ್ಪರ ಸೌಹಾರ್ದತೆಯಿಂದ ಶಾಂತಿಯುತವಾಗಿ ಹಬ್ಬ ಆಚರಣೆಗೆ ಡಿ.ಸಿ. ಕರೆ

ಕಲಬುರಗಿ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬ ಒಟ್ಟೊಟ್ಟಿಗೆ ಬಂದಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಸಮುದಾಯದವರು ಪರಸ್ಪರ ಶಾಂತಿಯುತವಾಗಿ ಸಂಭ್ರಮದಿಂದ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ‌ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆ ನಡೆಸಿದ ಅವರು ಸೆ.7ಕ್ಕೆ ಗಣಪತಿ ಪ್ರತಿಷ್ಠಾಪನೆಯಾಗಿ 11 ದಿನಗಳ ಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇನ್ನು ಸೆ.16ಕ್ಕೆ ಈದ್ ಮಿಲಾದ್ ಹಬ್ಬ ಇದೆ. ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಜಿಲ್ಲೆಯ ಜನತೆ ಸಹೋದರತ್ವದಿಂದ ಈ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿ ಒಂದು ಸಿಂಗಲ್ ವಿಂಡೋ ಸಿಸ್ಟಮ್‌ ತೆರಯಾಲಾಗುತ್ತಿದ್ದು, ಗಣೇಶ ಪ್ರತಿಷ್ಠಾಪನೆ ಸ್ಥಾಪನೆ, ಈದ್ ಮಿಲಾದ್ ಮೆರವಣಿಗೆ ಸಂಬಂಧಪಟ್ಟಂತೆ ಇಲ್ಲಿಂದ ಪರವಾನಿಗೆ ಪಡೆಯಬಹುದಾಗಿದೆ ಎಂದರು.

ಕಲಬುರಗಿ‌ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ನಗರದೆಲ್ಲೆಡೆ ಸುಮಾರು 600 ಗಣೇಶ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ನೀಡಲು ಅಸಾಧ್ಯ. ಆದರೆ ಪ್ರತಿ ಪೆಂಡಾಲ್ ಗೆ ಪೊಲೀಸ್ ಬೀಟ್ ಮಾದರಿಯಲ್ಲಿ ಪೊಲೀಸ್ ಸಿಬ್ಬಂದಿ 2-3 ಗಂಟೆಗೊಮ್ಮೆ ಭೇಟಿ ನೀಡಲಿದ್ದಾರೆ. ಕೋಮು ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಕಲಬುರಗಿ. ಹೀಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಏನೇ ಅಹಿತಕರ ಘಟನೆ ನಡೆದರೆ ಕೂಡಲೆ ಪೊಲೀಸರ ಗಮನಕ್ಕೆ ತರಬೇಕು ಎಂದರು.

ಸುಳ್ಳು ಸುದ್ದಿಗೆ ಕಿವಿಗೊಡಬೇಡಿ:

ಎಸ್.ಪಿ. ಅಡ್ಡೂರು ಶ್ರೀನಿವಾಸಲು ಮಾತನಾಡಿ ಹಬ್ಬದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸಮಾಜದ ಸಾಮರಸ್ಯ ಹಾಳು ಮಾಡಲು ಸಾಮಾಜಿಕ‌ ಜಾಲತಾಣ ಮೂಲಕ ಸುಳ್ಳು ಸುದ್ದಿ ಹರಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಇದನ್ನು ಫಾರ್ವಡ್ ಮಾಡುವ ಮುನ್ನ ಇದರ ಸತ್ಯತೆ ಅರಿಯಬೇಕು. ರಾತ್ರಿ ವೇಳೆಯಲ್ಲಿ ಗಣೇಶ ಪೆಂಡಾಲ್ ಬಳಿ ಆಯೋಜಕರು ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು. ಪೊಲೀಸ್ ರಿಂದ ರಾತ್ರಿ ಪ್ಯಾಟ್ರೋಲಿಂಗ್ ಸಹ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾತ್ರಿ 10 ಗಂಟೆ‌ ನಂತರ ಧ್ವನಿವರ್ಧಕ ಬಳಸಬಾರದು. ಇನ್ನು ಮೆರವಣಿಗೆ ವೇಳೆಯಲ್ಲಿ ಜನಸಮೂಹ ನಿಯಂತ್ರಣಕ್ಕೆ ಸ್ವಯಂ ಸೇವಕರ ಪಟ್ಟಿ ನೀಡಿದಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.

ಪರಿಸರ ಸ್ನೇಹಿ ಗಣಪ ನಮ್ಮದಾಗಲಿ:

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ ಪಿ.ಓ.ಪಿ. ಗಣಪ ಪ್ರತಿಷ್ಟಾಪನೆಗೆ ನಿಷೇಧವಿದ್ದು, ರಸಾಯನಿಕ ಬಣ್ಣ ಇಲ್ಲದೆ ಮಣ್ಣಿನ ಗಣಪ ಪ್ರತಿಷ್ಟಾಪಿಸಿ ಅದನ್ನು ಜಲ ಮಾಲಿನ್ಯವಾಗದಂತೆ ವಿಸರ್ಜನೆ ಮಾಡುವ ಮೂಲಕ ಈ ವರ್ಷ ನಾವೆಲ್ಲರು ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಲು ಪಣ ತೊಡಬೇಕಿದೆ ಎಂದು ಕರೆ ನೀಡಿದರು.

ಕಲಬುರಗಿ ನಗರದಾದ್ಯಂತ ವಾರ್ಡ್ ವಾರು ಸಣ್ಣ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಿರುವ ಪುಟಾಣಿ ಗಣಪಗಳ ವಿಸರ್ಜನೆಗೆ ಪಾಲಿಕೆಯಿಂದ ಅಲ್ಲಲ್ಲಿ ಟ್ರಾಕ್ಟರ್ ನಲ್ಲಿ ಟಾರ್ಪಲಿನ್ ಹಾಕಿ ವಿಸರ್ಜನೆಗೆ ತಾತ್ಕಲಿಕ ವ್ಯವಸ್ಥೆ ಮಾಡಲಾಗುತ್ತಿದ್ದು, ಇಲ್ಲಿಯೆ ಇಂತಹ ಗಣಪಗಳನ್ನು ವಿಸರ್ಜನೆ ಮಾಡಬೇಕು. ಶರಣಬಸವೇಶ್ವರ ಕೆರೆ ಆವರಣದಲ್ಲಿ ಒಂದು ಕಡೆ ದೊಡ್ಡ ಗಣಪಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಕೆರೆ ಸುತ್ತ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಜಲಮೂಲಗಳಲ್ಲಿ ರಸಾಯನಿಕ ಗಣಪಗಳನ್ನು ವಿಸರ್ಜನೆ ಮಾಡಬಾರದು ಎಂದು ಮನವಿ ಮಾಡಿದರು.

ವಿದ್ಯುತ್ ಪೂರೈಕೆ ನಿತಂತರವಾಗಿರಲಿ:

ಸಭೆಯಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡ ಬಾಬುರಾವ ಜಾಹಾಗಿರದಾರ್ ಮಾತನಾಡಿ, ಸೆ.7ಕ್ಕೆ ಗಣೇಶನನ್ನು ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಿ ಐದು, ಏಳು ಹಾಗೂ ಹನ್ನೊಂದು ದಿನಕ್ಕೆ ವಿಸರ್ಜನೆ ಮಾಡಲಾಗುತ್ತಿದ್ದು, ಪ್ರತಿ ದಿನ ಪೆಂಡಾಲ್ ಗೆ ವಿದ್ಯುತ್ ನಿರಂತರ ಪೂರೈಕೆಯಾಗಬೇಕು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅವಘಡವಾಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕು. 11 ದಿನಗಳ ಅವಧಿಗೆ ಪ್ರತಿ ದಿನ ರಾತ್ರಿ ವಿದ್ಯುತ್ ಸಮಸ್ಯೆ ಅವಘಡ ತಪ್ಪಿಸಲು ಮತ್ತು ಪೊಲೀಸ್ ಭದ್ರತೆ ದೃಷ್ಡಿಯಿಂದ ಪ್ರತ್ಯೇಕ ವಾಹನದೊಂದಿಗೆ ತಂಡ ನಿಯೋಜಿಸಬೇಕೆಂದರು. ಇನ್ನು ಸಭೆಯಲ್ಲಿ ಭಾಗವಹಿಸಿದ‌ ಅನೇಕ ಮುಖಂಡರು ಮಾತನಾಡಿ ವಿಸರ್ಜನಾ ಸ್ಥಳದಲ್ಲಿ ಸಿ.ಸಿ.ಟಿ.ವಿ ಅಳವಡಿಕೆ, ನಿರಂತರ ವಿದ್ಯುತ್ ಪೂರೈಕೆ, ನಗರದಲ್ಲಿನ ರಸ್ತೆ ಗುಂಡಿ‌ ಮುಚ್ಚುವುದು ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಕೆ.ಕೆ.ಆರ್.ಟಿ.ಸಿ. ಎಂ.ಡಿ. ಎಂ. ರಾಚಪ್ಪ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಅಯುಕ್ತೆ ರೂಪಿಂದರ್ ಸಿಂಗ್ ಕೌರ್, ಎ.ಸಿ.ಪಿ. ಬಿಂದುರಾಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.