ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಕ್ಷಣ ಸ್ಪಂದನೆ ಸಿಗಲಿ: ಶಾಸಕ ಪ್ರಭು ಚವ್ಹಾಣ
ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಕ್ಷಣ ಸ್ಪಂದನೆ ಸಿಗಲಿ: ಶಾಸಕ ಪ್ರಭು ಚವ್ಹಾಣ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಜ.31 ರಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದ ವಿವಿಧೆಡೆ ಗ್ರಾಮ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಕಪ್ಪಿಕೇರಿ, ಜೊನ್ನಿಕೇರಿ, ಜೋಜನಾ, ಸಂತಪೂರ, ನಾಗೂರ(ಬಿ), ಬೆಳಕೋಣಿ(ಚೌ), ಮಹಾಡೋಣಗಾಂವ, ಮುಂಗನಾಳ ಹಾಗೂ ಗೌಂಡಗಾಂವ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ನೇರ ಸಂವಾದ ನಡೆಸಿ, ಕೃಷಿ, ತೋಟಗಾರಿಕೆ, ಆರೋಗ್ಯ, ಕಂದಾಯ, ಕುಡಿಯುವ ನೀರು, ಇಂಧನ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸ್ಪಂದಿಸಿದರು.
ಗ್ರಾಮ ಸಂಚಾರದ ವೇಳೆ ಗ್ರಾಮಸ್ಥರು, ಕೆಲವೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯಿಂದ ತಕ್ಷಣದ ಸ್ಪಂದನೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಾಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಅವರಿಂದ ವಿವರಣೆ ಪಡೆದರು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಜನತೆಗೆ ಸ್ಪಂದಿಸದ ಮುಖ್ಯ ವೈದ್ಯಾಧಿಕಾರಿಗಳನ್ನು ಬದಲಿಸುವಂತೆ ನಿರ್ದೇಶನ ನೀಡಿದರು.
ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಕಲ್ಪಿಸಬೇಕು. ತಾಲ್ಲೂಕು ಆರೋಗ್ಯಾಧಿಕಾರಿಗಳು ಕಾಲಕಾಲಕ್ಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳನ್ನು ಸರಿಪಡಿಸಬೇಕು. ಕಟ್ಟಡ ಹಾಗೂ ಮತ್ತಿತರೆ ಸೌಕರ್ಯಗಳ ಅವಶ್ಯಕತೆಯಿದ್ದಲ್ಲಿ ನಾನು ಕೊಡಲು ಸಿದ್ಧ ಆದರೆ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಬಡ ಹಾಗೂ ಗ್ರಾಮೀಣ ಜನತೆಗೆ ಸುಲಭವಾಗಿ ಆರೋಗ್ಯ ಸೇವೆ ಒದಗಿಸಲು ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗೆ ಬಡ ರೋಗಿಗಳು ಬರುವುದರಿಂದ ಪ್ರತಿಯೊಬ್ಬ ರೋಗಿಗೂ ಗೌರವಯುತ ಚಿಕಿತ್ಸೆ ಮತ್ತು ಮಾನವೀಯ ಸ್ಪಂದನೆ ದೊರೆಯಬೇಕು. ರೋಗಿಗಳ ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಸಮಯ ಪಾಲನೆ ಮಾಡಬೇಕು. ಸರ್ಕಾರದ ಯೋಜನೆಗಳು, ಔಷಧಿ, ಪರೀಕ್ಷಾ ಸೌಲಭ್ಯಗಳು ಮತ್ತು ತಾಯಿ ಮತ್ತು ಮಕ್ಕಳ ಆರೈಕೆ ಸೇವೆಗಳು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ,ಜೆಸ್ಕಾಂ ಎಇಇ ರವಿ ಕಾರಬಾರಿ, ಸಿಡಿಪಿಓ ಇಮಲಪ್ಪ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ, ರಾಜಪ್ಪ ಸೋರಳ್ಳಿ, ಶಿವಾಂಜಯ ಬಿರಾದಾರ, ಶಿವಾಜಿರಾವ ಕಾಳೆ, ಯೋಗೇಶ ಪಾಟೀಲ ಹಾಗೂ ಮತ್ತಿತರರು ಇದ್ದರು.
