ವಾರ್ಡ್ ಸಮಿತಿ ರಚನೆ ಅರ್ಜಿ ಆಹ್ವಾನ: ಉಗ್ರ ಖಂಡನೆ – ಅಧಿಸೂಚನೆ ರದ್ದುಪಡಿಸಲು ಆಗ್ರಹ

ವಾರ್ಡ್ ಸಮಿತಿ ರಚನೆ ಅರ್ಜಿ ಆಹ್ವಾನ: ಉಗ್ರ ಖಂಡನೆ – ಅಧಿಸೂಚನೆ ರದ್ದುಪಡಿಸಲು ಆಗ್ರಹ

ವಾರ್ಡ್ ಸಮಿತಿ ರಚನೆ ಅರ್ಜಿ ಆಹ್ವಾನ: ಉಗ್ರ ಖಂಡನೆ – ಅಧಿಸೂಚನೆ ರದ್ದುಪಡಿಸಲು ಆಗ್ರಹ

ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 55 ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿರುವ ಕ್ರಮವನ್ನು ಉಗ್ರವಾಗಿ ಖಂಡಿಸಿ, ಸದರಿ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸಬೇಕೆಂದು ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪೌರ ನಿಗಮಗಳ ಅಧಿನಿಯಮ – 1976ರ ಕಲಂ 13ಎಚ್ ಅನ್ವಯ ಹಾಗೂ ಸರ್ಕಾರದ ನಿರ್ದೇಶನದ ಮೇರೆಗೆ ವಾರ್ಡ್ ಸಮಿತಿಗಳನ್ನು ರಚಿಸಬೇಕಾಗಿರುವುದಾದರೂ, ಪಾಲಿಕೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹಲವು ಗೊಂದಲಗಳು ಮತ್ತು ಅಸ್ಪಷ್ಟತೆಗಳಿದ್ದು, ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ವಾರ್ಡ್ ಸಮಿತಿಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ 02 ಸ್ಥಾನ, ಮಹಿಳಾ ಸದಸ್ಯರಿಗೆ 03 ಸ್ಥಾನ, ಸಂಘ–ಸಂಸ್ಥೆಗಳಿಗೆ 02 ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ 03 ಸ್ಥಾನ ಮೀಸಲಿರಿಸಲಾಗಿದೆ. ಆದರೆ, ಈ ಮೀಸಲಾತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ತಕ್ಕಷ್ಟು ಮಹತ್ವ ನೀಡಲಾಗಿಲ್ಲ ಹಾಗೂ ನಿಜವಾದ ಜನಪ್ರತಿನಿಧಿತ್ವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಜೆ.ಎಸ್. ವಿನೋದಕುಮಾರ ಅವರು, ಈ ಅಧಿಸೂಚನೆಯ ಮೂಲಕ ವಾರ್ಡ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಜನಸಾಮಾನ್ಯರನ್ನು ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆದ್ದರಿಂದ, ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದ ಪ್ರಸ್ತುತ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆದು, ಸಾರ್ವಜನಿಕ ಚರ್ಚೆ ಹಾಗೂ ಪಾರದರ್ಶಕ ಮಾರ್ಗಸೂಚಿಗಳೊಂದಿಗೆ ಹೊಸ ಅಧಿಸೂಚನೆ ಹೊರಡಿಸಬೇಕೆಂದು ಅವರು ಮಹಾನಗರ ಪಾಲಿಕೆ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.