ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ಶಾಸಕ ಪ್ರಭು ಚವ್ಹಾಣ

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ಶಾಸಕ ಪ್ರಭು ಚವ್ಹಾಣ

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ಶಾಸಕ ಪ್ರಭು ಚವ್ಹಾಣ

ಡಾ‌.ಬಿ.ಆರ್‌ ಅಂಬೇಡ್ಕರ್ ಅವರು ನೀಡಿದ ಭಾರತದ ಸಂವಿಧಾನವು ವಿಶ್ವದಲ್ಲೇ ಶ್ರೇಷ್ಠವಾದ, ಸಮಾನತೆ, ಸ್ವಾತಂತ್ರ್ಯ, ಸೌಹಾರ್ದತೆಯ ಮೌಲ್ಯಗಳನ್ನು ಒಳಗೊಂಡ ಮಾದರಿ ಸಂವಿಧಾನವಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.

ಔರಾದ(ಬಿ) ತಾಲ್ಲೂಕು ಆಡಳಿತದ ವತಿಯಿಂದ ಜ.26ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ವಿವಿಧ ಭಾಷೆ, ಧರ್ಮ, ಆಚಾರ-ವಿಚಾರ, ಉಡುಗೆ-ತೊಡುಗೆಗಳು ಪ್ರತಿಯೊಂದರಲ್ಲಿ ವೈವಿದ್ಯದತೆಗಳನ್ನು ಕಾಣುತ್ತೇವೆ. ಇಂತಹದರಲ್ಲೂ ಎಲ್ಲರಿಗೂ ಅನ್ವಯವಾಗುವಂತಹ ಉತ್ತಮ ಸಂವಿಧಾನ ಪಡೆದಿರುವುದು ನಮ್ಮ ಸೌಭಾಗ್ಯ. ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ದೇಶದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಆದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬಂದ ನಂತರ ಅಂಬೇಡ್ಕರ್ ಅವರಿಗೆ ಹೆಚ್ಚಿನ ಪ್ರಧಾನ್ಯತೆ ಸಿಕ್ಕಿದೆ. ಅವರ ಜನ್ಮಸ್ಥಳ, ಶಿಕ್ಷಣ ಪಡೆದ ಸ್ಥಳ, ಕರ್ಮಭೂಮಿ, ಸಮಾಧಿ ಸ್ಥಳ ಸೇರಿದಂತೆ ಅಂಬೇಡ್ಕರ್ ಅವರ ಎಲ್ಲ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಪ್ರಧಾನಿಯವರ ನೇತೃತ್ವದಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗುವತ್ತ ಮುನ್ನುಗ್ಗುತ್ತಿದೆ. ವಿಶ್ವದೆಲ್ಲೆಡೆ ದೇಶದ ಗೌರವ ಹೆಚ್ಚಾಗಿದೆ. ಆಯುಷ್ಮಾನ ಭಾರತ, ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳು ಬಡವರು, ಶ್ರಮಿಕರು, ಹಿಂದುಳಿದವರ ಶ್ರೇಯಸ್ಸಿಗೆ ಸಹಕಾರಿಯಾಗಿವೆ ಎಂದರು.

ಮಹಾಜನತೆಯ ಆಶೀರ್ವಾದದಿಂದ ನಾನು ನಾಲ್ಕು ಬಾರಿ ಶಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು, ಔರಾದ(ಬಿ) ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಔರಾದ(ಬಿ) ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು 3 ಕೋಟಿ ಅನುದಾನ ಮೀಸಲಿಟ್ಟಿದ್ದೇನೆ. ಮರಾಠಾ ಭವನ, ಲಿಂಗಾಯತ ಭವನ, ಹಟಕರ್ ಭವನ, ಕನಕ ಭವನ ಹಾಗೂ ಗುರುಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.

560 ಕೋಟಿಯ 36 ಕೆರೆ ತುಂಬಿಸುವ ಯೋಜನೆ, ನಾಗೂರ(ಬಿ) ನಲ್ಲಿ 118 ಕೋಟಿಯ 220 ಕೆವಿ ಸ್ಟೇಷನ್, ಬಲ್ಲೂರ(ಜೆ)ನಲ್ಲಿ 90 ಕೋಟಿಯ ಸಿಪೆಟ್ ಕಾಲೇಜು, ಕಾರಂಜಾ ಜಲಾಶಯದಿಂದ ಔರಾದ್‌ಗೆ ನೀರು ಸರಬರಾಜು ಮಾಡಲು 84 ಕೋಟಿ, ಹೆಡಗಾಪೂರನಲ್ಲಿ ಜಾನುವಾರು ತಳಿ ಸಂವರ್ಧನ ಕೇಂದ್ರ ಮತ್ತು ಗೋಶಾಲೆ, ಚಿಮ್ಮೇಗಾಂವ-ಮಾಳೆಗಾಂವನಲ್ಲಿ ಪವರ್ ಗ್ರಿಡ್ ಸಬ್ ಸ್ಟೇಷನ್, ಔರಾದನಲ್ಲಿ ಸುಸ್ಸಜ್ಜಿತ ನ್ಯಾಯಾಲಯ ಸಂಕೀರ್ಣ, ಔರಾದ(ಬಿ) ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಂಜೂರು, ಇಂದಿರಾಗಾಂಧಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳ ನಿರ್ಮಾಣ, ಒಳಾಂಗಣ ಕ್ರೀಡಾಂಗಣ, ಟ್ರೀ ಪಾರ್ಕ್, ಕಮಲನಗರ ಮಿನಿ ವಿಧಾನಸೌಧ, ಉಗ್ರಾಣಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಪ್ರಗತಿ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ತರುವ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತನಾಗಿದ್ದು, ಇದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿದ್ದೇನೆ. ಇದರ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ, ವಿದ್ಯುತ್ ಪ್ರಸರಣ ಕೇಂದ್ರಗಳು ನಾನಾ ರೀತಿಯ ಅಭಿವೃದ್ಧಿ ಕೆಲಸಗಳು ಕೈಗೊಂಡಿದ್ದೇನೆ. ಇದರಿಂದಾಗಿ ಔರಾದನಲ್ಲಿ ನಿವೇಶನ ಬೆಲೆಗಳು ಕೋಟಿಗಳಿಗೆ ಏರಿಕೆಯಾಗಿದೆ. ಇದರ ಮಧ್ಯೆ ಅಭಿವೃದ್ಧಿ ಕಲಸಗಳಿಗೆ ಅಡ್ಡಿಪಡಿಸುವ ಪ್ರಯತ್ನಗಳು ಕೆಲವರಿಂದ ನಡೆಯುತ್ತಿದ್ದು ಇಂಥವುಗಳಿಗೆ ಎಂದಿಗೂ ಹೆದರುವುದಿಲ್ಲ. ನನ್ನ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯಲಿವೆ ಎಂದು ತಿಳಿಸಿದರು.

ಠಾಣಾ ಕುಶನೂರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ದತ್ತಾತ್ರಿ ಮಡಿವಾಳ ಅವರು ವಿಶೇಷ ಉಪನ್ಯಾಸ ನೀಡಿ, ಸಾಕಷ್ಟು ಮಹನೀಯರು ತ್ಯಾಗ ಬಲಿದಾನಗಳನ್ನು ನೀಡಿ ದೇಶವನ್ನು ಕಟ್ಟಿ ಬೆಳೆಸಿದ್ದಾರೆ. ಡಾ.ಬಿಆರ್ ಅಂಬೇಡ್ಕರ್ ಅವರು ಸುಂದರ ಸಂವಿಧಾನವನ್ನು ನೀಡಿದ್ದಾರೆ. ಅವರ ಆಶಯಗಳಂತೆ ಜೀವಿಸಬೇಕೆಂದು ತಿಳಿಸಿದರು.

ಪ್ರೋಬೆಷನರಿ ಐಎಎಸ್ ಅಧಿಕಾರಿ ರಮ್ಯ ರಂಗಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಸಕರು ನಗದು ಬಹುಮಾನ ನೀಡಿ ಗೌರವಿಸಿದರು.

ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ಆರಕ್ಷಕ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ, ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಪಂಚಾಯತ ರಾಜ್ ಎಂಜಿನಿಯರಿಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಮಾಣಿಕ ನೇಳಗೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಾಹಿತಿ ಮಾರುತಿ ಗಾದಗೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಿಸಲಾಯಿತು.