ಡಿ.ಪಿ.ಆರ್. ಸಲ್ಲಿಸಿದಲ್ಲಿ ಮಿಲೆಟ್ ಹಬ್ ಕಲಬುರಗಿಗೆ ಮಂಜೂರಿಗೆ ಸರ್ವ ಪ್ರಯತ್ನ-ಪ್ರಿಯಾಂಕ್ ‌ಖರ್ಗೆ

ಡಿ.ಪಿ.ಆರ್. ಸಲ್ಲಿಸಿದಲ್ಲಿ ಮಿಲೆಟ್ ಹಬ್ ಕಲಬುರಗಿಗೆ ಮಂಜೂರಿಗೆ ಸರ್ವ ಪ್ರಯತ್ನ-ಪ್ರಿಯಾಂಕ್ ‌ಖರ್ಗೆ
ಡಿ.ಪಿ.ಆರ್. ಸಲ್ಲಿಸಿದಲ್ಲಿ ಮಿಲೆಟ್ ಹಬ್ ಕಲಬುರಗಿಗೆ ಮಂಜೂರಿಗೆ ಸರ್ವ ಪ್ರಯತ್ನ-ಪ್ರಿಯಾಂಕ್ ‌ಖರ್ಗೆ

243.52 ಕೋಟಿ‌ ರೂ. ಬೆಳೆ‌ ವಿಮೆ ಪರಿಹಾರ ವಿತರಣೆಗೆ ಚಾಲನೆ:

ಡಿ.ಪಿ.ಆರ್. ಸಲ್ಲಿಸಿದಲ್ಲಿ ಮಿಲೆಟ್ ಹಬ್ ಕಲಬುರಗಿಗೆ ಮಂಜೂರಿಗೆ ಸರ್ವ ಪ್ರಯತ್ನ-ಪ್ರಿಯಾಂಕ್ ‌ಖರ್ಗೆ

ಕಲಬುರಗಿ,ಮಾ.7(ಕರ್ನಾಟಕ ವಾರ್ತೆ) ಮುಖ್ಯಮಂತ್ರಿಗಳು ಶುಕ್ರವಾರ ಮಂಡಿಸಿರುವ 2026-27ನೇ ಆಯವ್ಯಯದಲ್ಲಿ ರಾಜ್ಯದಲ್ಲಿ ಮಿಲೆಟ್ ಹಬ್ ಸ್ಥಾಪಿಸಲಾಗುವುದುದೆಂದು ಘೋಷಣೆ ಮಾಡಲಾಗಿದೆಯಾದರು 3-4 ಜಿಲ್ಲೆಗಳ ಬೇಡಿಕೆ ಇರುವ ಕಾರಣ ಎಲ್ಲಿ ಅಂತ ಸ್ಪಷ್ಟಪಡಿಸಿಲ್ಲ. ಹೀಗಾಗಿ ಕಲಬುರಗಿ ಜಿಲ್ಲೆಯಿಂದ ಕೃಷಿ ಇಲಾಖೆಯವರು ಬೇಗ ಡಿ.ಪಿ.ಆರ್ ಮಾಡಿ ನೀಲಿ ನಕ್ಷೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಜಿಲ್ಲೆಗೆ ಮಂಜೂರು ಮಾಡಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ “ಜಿಲ್ಲಾ ಮಟ್ಟದ ಸಿರಿ ಧಾನ್ಯ ಮೇಳ-2026 ಹಾಗೂ ಜಿಲ್ಲೆಯ 2.90 ಲಕ್ಷ ರೈತರಿಗೆ ಬೆಳೆ ವಿಮೆ ಯೋಜನೆಯಡಿ ಮಧ್ಯಂತರ ಪರಿಹಾರ ಹಣ ಡಿ.ಬಿ.ಟಿ‌ ಮೂಲಕ ಬಿಡುಗಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿರಿಧಾನ್ಯ ಶಕ್ತಿ ಪರಿಚಯಿಸುವ ನಿಟ್ಟಿನಲ್ಲಿ ಇಲ್ಲಿನ ಕೃಷಿ ಉತ್ಪನ್ನಗಳ ಪ್ರಚಾರ, ಸಂಶೋಧನೆ, ಸಂಸ್ಕರಣೆ ಮತ್ತು ವಿತರಣೆಗೆ ಮೀಸಲಾಗಿ ಕೇಂದ್ರ ಸ್ಥಾಪಿಸುವುದು. ಕಲಬುರಗಿ ರೊಟ್ಟಿಗೆ ಬ್ರ್ಯಾಂಡ್ ನೀಡಿರುವಂತೆ ಮಾರುಕಟ್ಟೆಗೆ ಡಿಜಿಟಲ್ ವೇದಿಕೆ ಕಲ್ಪಿಸಿ ರೈತರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕಿಸಿ ಸುಸ್ಥಿರ ಸಿರಿಧಾನ್ಯಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದರು.

ರೈತರ ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 4.45 ಕೋಟಿ ರೂ. ವೆಚ್ಚದಲ್ಲಿ 9 ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಬಾಡಿಗೆ ಪಡೆಯಲು ಕಸ್ಟೋಮರ್‌ ಹೈರ್ ಸರ್ವಿಸ್ ಸೆಂಟರ್ ತೆರೆಯಲಾಗಿದೆ.197 ಲಕ್ಷ ರೂ. ದಲ್ಲಿ 4 ಡ್ರೋನ್ ಸಿಂಪಡನೆ‌ ಕೇಂದ್ರ ತೆರೆಯಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಪುರದಲ್ಲಿ ಶೀಥಲಿಕರಣ ಘಟಕ‌ ಅನುಷ್ಠಾನ ಮಾಡಲಾಗುತ್ತಿದೆ. ರೈತರ ಬೇಡಿಕೆ ಹೆಚ್ಚಿರುವ ಕಾರಣ ಇದೇ ವರ್ಷ ಕಲಬುರಗಿಯಲ್ಲಿಯೂ ಇದೆ ಮಾದರಿಯಲ್ಲಿ ತರಕಾರಿ, ಟೊಮಾಟೋಗಳ ಶೇಖರಣೆಗೆ ಕಲಬುರಗಿಯಲ್ಲಿ ಕೋಲ್ಡ್ ಸ್ಟೋರೇಜ್ ಯೂನಿಟ್ ಸ್ಥಾಪಿಸಲಾಗುವುದು. ಇದಲ್ಲದೆ 7.58 ಕೋಟಿ ರೂ. ವೆಚ್ಚದಲ್ಲಿ 7 ಜಲನಾಯನ ಸಂಸ್ಕರಣ ಘಟಕ‌ ಸ್ಥಾಪಿಸಲಾಗುತ್ತಿದೆ. ಒಟ್ಟಾರೆಯಾಗಿ ಜಿಲ್ಲೆಯನ್ನು ಕೃಷಿ ಹಬ್ ಅಗಿ ಪರಿವರ್ತಿಸಲು ಪೈಲೆಟ್ ರೂಪದಲ್ಲಿ ಇವೆಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಸಚಿವ‌ ಪ್ರಿಯಾಂಕ್ ಖರ್ಗೆ ತಿಳಿಸಿದರು.

3 ವರ್ಷದಲ್ಲಿ 2,590 ಕೋಟಿ ರೂ. ರೈತರಿಗೆ ಪರಿಹಾರ:

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 3.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಅಪಾರ ಮಖೆಯಿಂದ 3.24 ಲಕ್ಣ ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು ತಮಗೆ ತಿಳಿದ‌ ವಿಷಯ. ಬೆಳೆ ವಿಮೆ ಮಾಡಿಸಿಕೊಂಡವರ ಪೈಕಿ 2.90 ಲಕ್ಣ ರೈತರಿಗೆ ಇಂದಿಲ್ಲಿ 243.52 ಕೋಟಿ ರೂ. ಬೆಳೆ ವಿಮೆ‌ ಮಧ್ಯಂತರ ಪರಿಹಾರ ನೀಡಲು ಚಾಲನೆ ನೀಡಿದೆ. ಕಳೆದ ಮೂರು ವರ್ಷದಲ್ಲಿ ನಮ್ಮ ಸರ್ಕಾರ ಬಂದ ಮೇಲೆ ತೊಗರಿ ನೆಡೆ ರೋಗ ಪರಿಹಾರ, ಬೆಳೆ ಪರಿಹಾರ, ಕನ್ಪುಡ್ ಸಬ್ಸಿಡಿ, ಬರಗಾಲ ಪರಿಹಾರ, ಕಬ್ಬಿಗೆ ಪರಿಹಾರ ಧನ ಹೀಗೆ 15.47 ಲಕ್ಷ ರೈತರಿಗೆ 2,590 ಕೋಟಿ ರೂ. ಪರಿಹಾರ ನೀಡಿದ್ದು, ಹಿಂದೆ ಯಾವ ಸರ್ಕಾರವು ಇಷ್ಟೊಂದು ಪರಿಹಾರ ಅನ್ನದಾತರಿಗೆ ನೀಡಿಲ್ಲ. ರೈತರ ಏಳಿಗೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಅದಕ್ಕಾಗಿ ಇವೆಲ್ಲ ಜಾರಿಗೊಳಿಸಿದೆ. ಇದು ರೈತಪರ ಸರ್ಕಾರ. ನುಡಿದಂತೆ ನಡೆಯುವ ಸರ್ಕಾರ ಎಂದರು.

ವೈಜ್ಞಾನಿಕ‌ ಸಮೀಕ್ಷೆಯಿಂದ ಬೆಳೆ ಪರಿಹಾರ ಹೆಚ್ಚು:

ಆಳಂದ ಶಾಸಕ ಹಾಗೂ ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮಾತನಾಡಿ, ಕೃಷಿ ಮತ್ತು ಕಂದಾಯ ಅಧಿಕಾರಿಗಳು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ ಪರಿಣಾಮ ಜಿಲ್ಲೆಯ ರೈತರಿಗೆ ಪ್ರಸಕ್ತ ಸಾಲಿನ ಬೆಳೆ ವಿಮೆ ಯೋಜನೆಯಡಿ 243 ಕೋಟಿ ರೂ. ಬೆಳೆ ವಿಮೆ ಪರಿಹಾರ ಪಡೆಯಲು ಸಾಧ್ಯವಾಗಿದೆ. ಬೆಳೆ ಕಟಾವು ಆಧಾರದ ಮೇಲೆ ಇದಕ್ಕಿಂತ ಡಬಲ್‌ ಬರಬಹುದು. ಇಲ್ಲಿರುವುದು ಅದಾನಿ ಕಂಪನಿ ಅಲ್ಲ. ಇಫ್ಕೋ ಕಂಪನಿ, ಇದು ರೈತರ ಕೈ ಹಿಡಿಯುವ ಕಂಪನಿ. ಇದಕ್ಕಾಗಿ ಅಧಿಕಾರಿಗಳಿಗೆ ವೈಯಕ್ತಿಕ ಅಭಿನಂದನೆಗಳು ಸಲ್ಲಿಸುವೆ ಎಂದರು.

ರೈತರಿಗೆ ಇರುವ ಸಂಕಷ್ಟ ಹೆಚ್ಚು. ಸಸಿಯಿಂದ ರಾಶಿ ಮಾಡುವವರೆಗೂ ನೂರಾರು ವಿಘ್ನ. ಎಲ್ಲವು ಸರಿಯಿದ್ದಾಗ ನೈಸರ್ಗಿಕ ವಿಕೋಪ ತಲೆ ಮೇಲು ಬರುತ್ತೆ ಇಂತು ಅನೇಕ ತೊಂದರೆ ರೈತಾಪಿ ವರ್ಗ ಎದುರಿಸುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ‌ ವಿಮೆ ನೊಂದಣಿ ಮಾಡಿಕೊಳ್ಲಬೇಕೆಂದು ಮನವಿ ಮಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಮನರೇಗಾ ಕಾಯ್ದೆ ತಿದ್ದುಪಡಿ ತಂದಿದ್ದಾರೆ. ನೂತನ ಕಾಯ್ದೆಯ ಪ್ರಕಾರ ದಿಲ್ಲಿ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಬೇಕಿದೆ. ನಮ್ಮ ಧ್ವನಿ ಕೇಳೋರಿಲ್ಲ. ಮುಂದೆ ಇದು ದೊಡ್ಡ ಗಂಡಾಂತರ ಕಾಡಲಿದೆ. ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ... ರೈತರನ್ನು ಮನರೇಗಾದಡಿ ಪಾಲುದಾರರಾಗಿ ಮಾಡಿದಲ್ಲಿ ಭ್ರಷ್ಟಾಚಾರದ ವಾಸನೆ ಸಹ ಬರಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಅಫಜಲಪೂರ ಶಾಸಕ ಎಂ.ವೈ. ಪಾಟೀಲ, ಮಾತನಾಡಿ ಬಹುಸಂಖ್ಯಾತ ಜನರಿಗೆ ಉದ್ಯೋಗ‌ ನೀಡುವುದು ಕೃಷಿ ಕ್ಷೇತ್ರ. ಕಾರ್ಖಾನೆ ಸ್ಥಾಪನೆಯಿಂದ 100-200 ಜನರಿಗೆ ಕೆಲಸ ಕೊಡಬಹುದು. ಎಲ್ಲರಿಗೂ ಉದ್ಯೋಗ ನೀಡುವುದು ಅಸಾಧ್ಯ. ಅನ್ನದಾತ ಬೆಳೆ‌ ಬೆಳೆದರೆ ಮಾತ್ರ ಎಲ್ಲರಿಗೂ ಉದ್ಯೋಗ ಸಿಗಲಿದೆ. ಇದು ದೇಶದ ಪ್ರಗತಿಗೆ ಕಾರಣವಾಗಲಿದೆ ಎಂದರು.

ಕೆರೆ ತುಂಬಿಸುವ ಕಾರ್ಯಕ್ರಮ ರೂಪಿಸಬೇಕಿದೆ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ, ಕಳೆದ‌ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಜಿಲ್ಲೆಯ ರೈತರಿಗೆ 2,509 ಕೋಟಿ ರೂ. ಬೆಳೆ ವಿಮೆ‌ ಪರಿಹಾರ ನೀಡಿದೆ. ಹಿಂದೆ ತಾವು ಜಿಲ್ಲಾ ಪಂಚಾಯತ್ ಅಧ್ಯಕ್ಷರಿದ್ದಾಗ ಜೇವರಗಿ ತಾಲೂಕಿಗೆ ಮಾತ್ರ ಬೆಳೆ ವಿಮೆ ಪರಿಹಾರ ಸಿಕ್ತಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಮುತುವರ್ಜಿಯಿಂದ ಇಷ್ಡೊಂದು ದೊಡ್ಡ ಮಟ್ಟದಲ್ಲಿ ಪರಿಹಾರ ರೈತರಿಗೆ ಸಿಕ್ಕಿದೆ. ರೈತಾಪಿ ಜನರ ಆರ್ಥಿಕ ಸುಧಾರಣೆ ಮಾಡಬೇಕಾದರೆ ನೀರಾವರಿ ಪ್ರದೇಶ ಹೆಚ್ಚಳವಾಗಬೇಕು. ಇದಕ್ಕಾಗಿ ಕೆರೆ ತುಂಬಿಸುವ ಯೋಜನೆ ಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಇದಕ್ಕೂ ಮುನ್ನ‌ ಸಚಿವ‌ ಪ್ರಿಯಾಂಕ್ ಖರ್ಗೆ ಅವರು, ಅರ್ಹ ಫಲಾನುಭವಿಗಳಿಗೆ ಕಬ್ಬು ಕಟಾವು ಯಂತ್ರಗಳು ಮತ್ತು ರಿವಾರ್ಡ್ ಯೋಜನೆಯ ಉತ್ಪಾದನಾ ಘಟಕದಡಿ ಕೃಷಿ ಪರಿಕರ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಬೂಬ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಉಪಾಧ್ಯಕ್ಷೆ ನಿರ್ಮಲಾ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ,‌ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡುರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಅಯುಕ್ತೆ ಸಾಹಿತ್ಯ ಅಲದಕಟ್ಟಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಉಪನಿರ್ದೇಶಕಿ ಅನುಸುಯಾ ಹೂಗಾರ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ರೈತಾಪಿ ಜನರು ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸ್ವಾಗತಿಸಿ ವಂದಿಸಿದರು.