ತೊಗರಿಗೆ ₹12,500 ಬೆಂಬಲ ಬೆಲೆ ನಿಗದಿಗಾಗಿ– ಎಪಿಎಂಸಿ ಕಚೇರಿ ಎದುರು ಜನವರಿ 20ರಂದು ರೈತರ ಪ್ರತಿಭಟನೆ

ತೊಗರಿಗೆ ₹12,500 ಬೆಂಬಲ ಬೆಲೆ ನಿಗದಿಗಾಗಿ– ಎಪಿಎಂಸಿ ಕಚೇರಿ ಎದುರು ಜನವರಿ 20ರಂದು ರೈತರ ಪ್ರತಿಭಟನೆ

 ತೊಗರಿಗೆ ₹12,500 ಬೆಂಬಲ ಬೆಲೆ ನಿಗದಿಗಾಗಿ– ಎಪಿಎಂಸಿ ಕಚೇರಿ ಎದುರು ಜನವರಿ 20ರಂದು ರೈತರ ಪ್ರತಿಭಟನೆ

ಕಲಬುರಗಿ:ತೊಗರಿ ಬೆಳೆಗಾರ ರೈತರಿಗೆ ಕ್ವಿಂಟಾಲ್‌ಗೆ ₹12,500 ಕನಿಷ್ಠ ಬೆಂಬಲ ಬೆಲೆ (MSP) ನಿಗದಿಪಡಿಸಿ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ದಿನಾಂಕ 20.01.2025 ರಂದು ಕಲಬುರಗಿ ಎಪಿಎಂಸಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಮಶೇಟ್ಟಿ ರೈತ ಮುಖಂಡರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆರ್ಥಿಕತೆ ತೊಗರಿ ಬೆಳೆ ಮೇಲೆ ಅವಲಂಬಿತವಾಗಿದ್ದು, ಬಂಪರ್ ಬೆಳೆ ಬಂದಾಗ ಮಾತ್ರ ಅನ್ನದಾತರ ಮುಖದಲ್ಲಿ ಮಂದಹಾಸ ಕಾಣಲು ಸಾಧ್ಯ. ಆದರೆ ಒಂದೆಡೆ ಬರ, ಮತ್ತೊಂದೆಡೆ ನೆರೆ ಸಂಕಷ್ಟ ಎದುರಿಸಿದರೂ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇಡೀ ದೇಶದಲ್ಲೇ ಅತಿ ಹೆಚ್ಚು ತೊಗರಿ ಬೆಳೆಯುವ ರಾಜ್ಯವಾಗಿರುವ ಕರ್ನಾಟಕದಲ್ಲಿ, ವಿಶೇಷವಾಗಿ ‘ತೊಗರಿ ನಾಡು’ ಎಂದು ಪ್ರಸಿದ್ಧಿಯಾದ ಕಲಬುರಗಿ ಜಿಲ್ಲೆ ಜಿಐ ಟ್ಯಾಗ್ ಪಡೆದಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಯುವ ತೊಗರಿಯಲ್ಲಿ 23 ಪ್ರತಿಶತ ಪ್ರೋಟೀನ್ ಅಂಶ ಇರುವುದರಿಂದ ದೇಶ-ವಿದೇಶಗಳಲ್ಲಿ ವಿಶಿಷ್ಟ ಗುರುತನ್ನು ಪಡೆದಿದೆ. ಈ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೊಗರಿ ಬೆಳೆಗಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಮ್ಯಾನ್ಮಾರ್, ಮೊಜಾಂಬಿಕ್, ತಾಂಜಾನಿಯಾ, ಸುಡಾನ್, ಮಾಲವಿ, ಬ್ರೆಜಿಲ್ ಸೇರಿದಂತೆ ಹೊರದೇಶಗಳಿಂದ 814068.65 ಮೆಟ್ರಿಕ್ ಟನ್ ತೊಗರಿ ಆಮದು ಮಾಡಿಕೊಳ್ಳಲಾಗಿದ್ದು, ಇದರಿಂದ ದೇಶೀಯ ಮಾರುಕಟ್ಟೆ ಸಂಪೂರ್ಣವಾಗಿ ಸರ್ವನಾಶವಾಗುತ್ತಿದೆ. ರೈತ ವಿರೋಧಿ ನೀತಿಯನ್ನು ತಕ್ಷಣ ನಿಲ್ಲಿಸಿ, ಹೊರದೇಶಗಳಿಂದ ಆಮದು ಮಾಡುವ ತೊಗರಿಗೆ ಕನಿಷ್ಠ 50 ಶೇಕಡಾ ಆಮದು ಸುಂಕ (ಇಂಪೋರ್ಟ್ ಡ್ಯೂಟಿ) ವಿಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶರಣಬಸ್ಸಪ್ಪ ಮಮಶೆಟ್ಟಿ, ಭೀಮಾಶಂಕರ್ ಮಾಡ್ಯಾಳ್, ಉಮಾಪತಿ ಪಾಟೀಲ (ನಂದೂರು) ಸೇರಿದಂತೆ ಹಲವು ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.