ವಿಧಾನಸಭೆಯಲ್ಲಿ ಈಡಿಗರ ಧ್ವನಿಯಾಗುವೆ : ಶಾಸಕಿ ಕರೆಮ್ಮ ಭರವಸೆ ಪ್ರಣವಾನಂದಶ್ರೀ ಜೊತೆ ಪಾದಯಾತ್ರೆಯಲ್ಲಿ ಭಾಗಿ ಹೇಳಿಕೆ
ವಿಧಾನಸಭೆಯಲ್ಲಿ ಈಡಿಗರ ಧ್ವನಿಯಾಗುವೆ : ಶಾಸಕಿ ಕರೆಮ್ಮ ಭರವಸೆ
ಪ್ರಣವಾನಂದಶ್ರೀ ಜೊತೆ ಪಾದಯಾತ್ರೆಯಲ್ಲಿ ಭಾಗಿ ಹೇಳಿಕೆ
ದೇವದುರ್ಗ: ರಾಜ್ಯದ ಈಡಿಗ ಸಮುದಾಯದ ನ್ಯಾಯೋಚಿತ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆಸುವ ಹೋರಾಟಕ್ಕೆ ಸರಕಾರ ಕೂಡಲೆ ಸ್ಪಂದನೆ ಮಾಡಬೇಕು ಇಲ್ಲವಾದರೆ ವಿಧಾನಸಭೆಯಲ್ಲಿ ರಾಜ್ಯದ ಈಡಿಗರ ಪರವಾಗಿ ಧ್ವನಿ ಎತ್ತುವೆ ಎಂದು ದೇವದುರ್ಗದ ಶಾಸಕರಾದ ಶ್ರೀಮತಿ ಕರೆಮ್ಮ ಭರವಸೆ ನೀಡಿದರು.
ಡಾ ಪ್ರಣವಾನಂದ ಶ್ರೀಗಳು 18 ಬೇಡಿಕೆಗಳನ್ನು ಒತ್ತಾಯಿಸಿ ಚಿತ್ತಾಪುರದಿಂದ ಆರಂಭಿಸಿದ ಪಾದಯಾತ್ರೆ ಜ.12 ರಂದು ಏಳನೇ ದಿನ ರಾಯಚೂರು ಜಿಲ್ಲೆಯ ದೇವದುರ್ಗವನ್ನು ತಲುಪಿದ್ದು ತಮ್ಮ ಸ್ವ ಕ್ಷೇತ್ರದಲ್ಲಿ ಸ್ವಾಮೀಜಿಯವರೊಂದಿಗೆ ಸುಮಾರು 2 ಕೀ . ಮೀ. ಗಳಷ್ಟು ಪಾದಯಾತ್ರೆಯನ್ನು ನಡೆಸಿ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ ಸ್ವಾಮೀಜಿಗಳು ಎಲ್ಲರ ಕಲ್ಯಾಣಕ್ಕಾಗಿ ಆಶೀರ್ವಾದವನ್ನು ಮಾಡುತ್ತಿರುತ್ತಾರೆ. ಆದರೆ ಕೆಲವು ಬಾರಿ ತಮ್ಮ ಸ್ವಂತ ಸಮಾಜಕ್ಕೆ ಆದ ಅನ್ಯಾಯವನ್ನು ಸಹಿಸಲಾಗದೆ ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಎದುರಾಗುತ್ತದೆ. ರಾಜ್ಯದ ಅತಿ ಹಿಂದುಳಿದ ಸಮಾಜವಾದ ಈಡಿಗ ,ಬಿಲ್ಲವ ಸೇರಿದಂತೆ 26 ಪಂಗಡಗಳ ನ್ಯಾಯೋಚಿತವಾದ ಬೇಡಿಕೆಗಳ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಸರಕಾರವು ಮಾತುಕತೆಗೆ ಮುಂದಾಗದಿರುವುದು ವಿಷಾದಕರ. ಅದಕ್ಕಾಗಿ ಮುಂದಿನ ಅಧಿವೇಶನದಲ್ಲಿ ಸ್ವಾಮೀಜಿಗಳ ಹೋರಾಟದ ಬಗ್ಗೆ ಮತ್ತು ಈಡಿಗರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಬಲವಾಗಿ ಧ್ವನಿ ಎತ್ತಿ ನ್ಯಾಯಕ್ಕಾಗಿ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಈಡಿಗ ಸಮಾಜವು ದೇವದುರ್ಗದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಶಾಸಕಿಯಾಗುವವರೆಗೆ ಬೆಂಬಲಿಸಿದ ಸಮಾಜವಾಗಿದ್ದು ಅವರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಈಡಿಗ ಮುಖಂಡರು ಸದಾ ಜೊತೆಗಿದ್ದಾರೆ ಎಂದು ಶ್ಲಾಘಿಸಿದರು.
ದೇವದುರ್ಗ ತಾಲೂಕಿನ ಅತಿ ಹಿಂದುಳಿದ ವಿವಿಧ ಸಮಾಜದ ಜನರು ಹಾಗೂ ಈಡಿಗ ಸಮುದಾಯದವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಚಣ್ಣ, ಪ್ರಕಾಶಯ್ಯ, ಮಡಿವಾಳ ಸಮಾಜದ ಶರಣ್, ಇಸಾಕ್ ಮೇಸ್ತ್ರಿ, ರಂಗಯ್ಯ ಅಬಕಾರಿ ಶರಣಗೌಡ ಮುಂತಾದ ಅನೇಕರು ಪಾಲ್ಗೊಂಡಿದ್ದರು.
