ಜನವರಿ 21ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ರವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧಾರ
ಜನವರಿ 21ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ರವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧಾರ
ಕಲಬುರಗಿ:ಜನೆವರಿ 09 (ಕ.ವಾ)-ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿಜಶರಣ ಅಂಬಿಗರ ಚೌಡಯ್ಯ ರವರ ಜಯಂತಿಯನ್ನು ಇದೇ ಜನೆವರಿ 21 ರಂದು ವಿಜೃಂಭಣೆಯಿಂದ ಆಚರಿಸಲು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಇದೇ ಜನೆವರಿ 21 ರಂದು ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು. ಸಭೆಯಲ್ಲಿ ನುರಿತ ಉಪನ್ಯಾಸಕರನ್ನು ಸಹ ಆಹ್ವಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರ ಜೊತೆಗೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ತಿಪ್ಪಣಪ್ಪ ಕಮಕನೂರ ಮಾತನಾಡಿ, ಎಲ್ಲ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ತಾಲೂಕಗಳಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ವಚನಗಳನ್ನು ಬೋಧನೆ ಮಾಡಿಸಬೇಕು ಎಂದರು.
ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸೂಕ್ತಕ್ರಮಕೈಗೊಳ್ಳಬೇಕು ಕಾರ್ಯಕ್ರಮದಲ್ಲಿ ಗಣ್ಯವ್ಯಕ್ತಿಗಳು ಅಧಿಕಾರಿಗಳು ಭಾಗವಹಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರು ಅಂಬಿಗರ ಚೌಡಯ್ಯ ಸಮಿತಿ ಅಧ್ಯಕ್ಷರನಾಗಿ ಜಯಪ್ರಕಾಶ ತಿಪ್ಪಣಪ್ಪ ಕಮನೂರ ಅವರಿಗೆ ಆಯ್ಕೆ ಮಾಡಿದರು.
ಸಭೆಯಲ್ಲಿ ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾತಿ ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ಪತ್ರಿಕಾ ಆಮಂತ್ರಣ ಮುದ್ರಿಸಲಾಗುವುದು. ನಾಡಗೀತೆ, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ಸಮಾಜದ ಮುಖಂಡರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆ ಮೇಲೆ ಜಿಲ್ಲಾಮಟ್ಟ ಅಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
