ಎಂ ಬಿ ಪಾಟೀಲ ಅವರು ಪರಿಶಿಷ್ಟ ಸಮುದಾಯದ ಕ್ಷಮೆ ಕೇಳಲು: ಡಾ ಅಂಬಾರಾಯ ಅಷ್ಠಗಿ ಆಗ್ರಹ
ಎಂ ಬಿ ಪಾಟೀಲ ಅವರು ಪರಿಶಿಷ್ಟ ಸಮುದಾಯದ ಕ್ಷಮೆ ಕೇಳಲು: ಡಾ ಅಂಬಾರಾಯ ಅಷ್ಠಗಿ ಆಗ್ರಹ
ಕಲಬುರಗಿ : ಛಲವಾದಿ ನಾರಾಯಣಸ್ವಾಮಿ ಯವರು ಪರಿಶಿಷ್ಟ ಸಮುದಾಯದವರಾಗಿದ್ದೂ, ಗೌರವಾನ್ವಿತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ,
ಅವರ ಸ್ಥಾನದ ಘನತೆಯನ್ನೂ ಲೆಕ್ಕಿಸದೇ, ಅವಹೇಳನಕಾರಿ ಪದ ಉಪಯೋಗಿಸುವ ಮೂಲಕ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಪದ ಸಂಸ್ಕೃತಿ ಇಲ್ಲದ
ತಮ್ಮ ವ್ಯಕ್ತಿತ್ವವನ್ನು ಅನಾವರಣ ಮಾಡಿದ್ದಾರೆ. ಎಂ ಬಿ ಪಾಟೀಲರು ಈ ಕೂಡಲೇ ಪರಿಶಿಷ್ಟ ಸಮುದಾಯದ ಹಾಗೂ ಛಲವಾದಿ ನಾರಾಯಣಸ್ವಾಮಿ ಯವರಲ್ಲಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಡಾ ಅಂಬಾರಾಯ ಅಷ್ಠಗಿ ಆಗ್ರಹಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಯವರ ಏಳ್ಗೆಯನ್ನು ಅರಗಿಸಿಕೊಳ್ಳದೆ, ಅವರ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡುವ ಮೂಲಕ ಪಾಟೀಲ್ ಅವರು ಪರಿಶಿಷ್ಟ ಸಮುದಾಯದ ವ್ಯಕ್ತಿ ಉನ್ನತ ಸ್ಥಾನ ಅಲಂಕರಿಸಿರುವುದನ್ನು ಸಹಿಸಲಾಗದೆ ಅಸೂಯೆ ಭಾವನೆ ಹೊರಹಾಕಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಯವರ ಬಡತನವನ್ನು ಕೇವಲವಾಗಿ ಮಾತನಾಡಿರುವ ಸಚಿವ ಎಂ ಬಿ ಪಾಟೀಲರ ವರ್ತನೆ, ಅವರು ಪರಿಶಿಷ್ಟ ಸಮುದಾಯದ ಬಗ್ಗೆ ಹೊಂದಿರುವ ಕೀಳು ಮಟ್ಟದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಡಾ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಪರಿಶಿಷ್ಟ ಸಮುದಾಯದ ಹೋರಾಟಗಾರನನ್ನು ಗುರುತಿಸಿ ಭಾರತೀಯ ಜನತಾ ಪಾರ್ಟಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನದ ಜವಾಬ್ದಾರಿ ನೀಡಿದೆ. ತಮ್ಮ ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಕೆಐಎಡಿಬಿಯಲ್ಲಿ ನಡೆದಿರುವ ಸಿಎ ನಿವೇಶನಗಳ ನಿಯಮಬಾಹಿರ ಹಾಗೂ ಅಕ್ರಮ ಮಂಜೂರಾತಿ ಕುರಿತು ಛಲವಾದಿ ನಾರಾಯಣಸ್ವಾಮಿಯವರು ಆರೋಪ ಮಾಡಿದ್ದಾರೆ,
ಇದನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಿ ಪ್ರತ್ಯುತ್ತರ ನೀಡಬೇಕಾದ ಸಚಿವ ಎಂ.ಬಿ ಪಾಟೀಲರು ಪ್ರತಿಕ್ರಿಯಿಸಿರುವ ಪರಿಯನ್ನು ನೋಡಿದರೆ ಅವರು ತಮ್ಮ ಪಕ್ಷದ ವರಿಷ್ಠರನ್ನು ಓಲೈಸುವ ಭರದಲ್ಲಿ ತಳಮಟ್ಟದಿಂದ ಮೇಲೆದ್ದು ಬಂದು ಗೌರವಾನ್ವಿತ ಸ್ಥಾನ ಅಲಂಕರಿಸಿರುವ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನು ಅಪಮಾನಿಸುವ ಮೂಲಕ ಪರಿಶಿಷ್ಟರ ಬಗ್ಗೆ ತಮಗಿರುವ ಗೌರವ ಯಾವ ಮಟ್ಟದ್ದು ಎನ್ನುವುದನ್ನು ಪ್ರದರ್ಶಿಸಿಕೊಂಡಿದ್ದಾರೆ.
ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳಿರಬೇಕು ಅದರಲ್ಲೂ ಆಡಳಿತ ಪಕ್ಷದಲ್ಲಿರುವವರು ವಿರೋಧ ಪಕ್ಷದ ಟೀಕೆಗಳನ್ನು ಸಕರಾತ್ಮಕ ಮನಸ್ಸಿನಿಂದ ಸ್ವೀಕರಿಸುವ ಔದಾರ್ಯತೆ ತೋರಬೇಕು.ಆದರೆ ಹತಾಶೆ ಗೊಳಗಾದವರಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದಂತೆಯೆ ಸರಿ.
ಈ ನಿಟ್ಟಿನಲ್ಲಿ ಎಂ ಬಿ ಪಾಟೀಲರು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ.ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ವ್ಯಕ್ತಿತ್ವಯನ್ನು ಅವಹೇಳನ ಮಾಡಿ ಮತ್ತು ಅವರ ಬಡತನವನ್ನು ಹೀಯಾಳಿಸಿರುವುದು ಇಡೀ ಪರಿಶಿಷ್ಟ ಜಾತಿಗಳ ಸಮುದಾಯವನ್ನು ಅಪಮಾನಿಸಿದಂತಾಗಿದೆ.
ಆದ್ದರಿಂದ ಸಚಿವ ಎಂ ಬಿ ಪಾಟೀಲರ ಈ ವರ್ತನೆಯನ್ನು ಖಂಡಿಸಿ ಈ ಕೂಡಲೇ ಅವರು ಛಲವಾದಿ ನಾರಾಯಣ ಸ್ವಾಮಿಯವರು ಹಾಗೂ ಪರಿಶಿಷ್ಟ ಸಮುದಾಯಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ.ಅಂಬಾರಾಯ ಅಷ್ಠಗಿ ಅವರು ಆಗ್ರಹಿಸಿದ್ದಾರೆ.