ಮಾನ್ಯಳ ಮರ್ಯಾದೆಗೇಡು ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಧರಣಿ ಸತ್ಯಾಗ್ರಹ
ಮಾನ್ಯಳ ಮರ್ಯಾದೆಗೇಡು ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಧರಣಿ ಸತ್ಯಾಗ್ರಹ
ಆರೋಪಿಗಳಿಗೆ ಗಲ್ಲು ಶಿಕ್ಷೆ, ಕಠಿಣ ಕಾನೂನು ಜಾರಿಗೆ ಆಗ್ರಹ
ಕಲಬುರಗಿ:ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ದಿನಾಂಕ 21 ಡಿಸೆಂಬರ್ 2025ರಂದು ನಡೆದ ಮಾನ್ಯಳ ಮರ್ಯಾದೆಗೇಡು ಹತ್ಯೆ ಹಾಗೂ ದಲಿತ ಕುಟುಂಬದವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ಕಲಬುರಗಿ ನಗರದ ಡಾ. ಬಾಬು ಜಗಜೀವನ್ ರಾವ್ ವೃತ್ತದ ಎದುರು ಶೋಷಿತ ಜನಜಾಗೃತಿ ವೇದಿಕೆ ಹಾಗೂ ಕರ್ನಾಟಕ ಮಹಿಳಾಪರ ಜಾಗೃತಿ ಸಂಘಟನೆಗಳ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ, ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಳನ್ನು ಜನ್ಮಕೊಟ್ಟ ತಂದೆಯೇ ಹತ್ಯೆ ಮಾಡಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮಾನ್ಯಳ ದುರ್ಘಟನೆ ಮಾನವೀಯತೆಗೆ ಕಳಂಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯಳು ದಲಿತ ಯುವಕನನ್ನು ಮದುವೆಯಾಗಿರುವುದನ್ನು ಸಹಿಸಿಕೊಳ್ಳಲಾಗದೆ, ಆರೋಪಿಗಳು ದಲಿತ ಕುಟುಂಬದ ಮೇಲಿನ ಹಲ್ಲೆ ಅತ್ಯಂತ ಖಂಡನೀಯವಾಗಿದೆ. ರಾಜ್ಯದಲ್ಲಿ ಇಂತಹ ಮರ್ಯಾದೆಗೇಡು ಹತ್ಯೆಗಳು ಮರುಕಳಿಸದಂತೆ ಮಾನ್ಯ ಮುಖ್ಯಮಂತ್ರಿಗಳು ತಕ್ಷಣವೇ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೊಂದ ಕುಟುಂಬಕ್ಕೆ ತಕ್ಷಣ ರಕ್ಷಣೆ ಒದಗಿಸಬೇಕು, ಹತ್ಯೆ ಮತ್ತು ಹಲ್ಲೆ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ನೊಂದ ಕುಟುಂಬಕ್ಕೆ ರೂ.1 ಕೋಟಿ ಪರಿಹಾರ ನೀಡಬೇಕು, ಎರಡು ಎಕರೆ ಜಮೀನು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಧರಣಿ ಸತ್ಯಾಗ್ರಹದಲ್ಲಿ ಬಸವರಾಜ್ ಜವಳಿ, ಸುಂದರ್ ಸಾಗರ್, ಲಕ್ಕಪ್ಪ ಜವಳಿ, ರಾಮಚಂದ್ರ ಕಾಂಬಳೆ, ಭೀಮಶಾ ಧರಣಿ, ರಮೇಶ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
