ಮಾನವೀಯತೆ ಘೋಷಣೆಯು ವಿಷಯವಲ್ಲ ಅದು ಬದುಕಿನ ಶಿಸ್ತು
ಮಾನವೀಯತೆಯನ್ನು ಮರುಪರಿಶೀಲಿಸುವ ಹೊತ್ತುವಿಶ್ವಮಾನವ ದಿನಾಚರಣೆ, ರಾಜ್ಯಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮತ್ತು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಲೋಕಾರ್ಪಣೆ
ಮಾನವೀಯತೆ ಎಂಬ ಪದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಸುತ್ತಿದೆಯಾದರೂ, ಅದು ಬದುಕಿನ ಅಂತರಂಗದಲ್ಲಿ ಎಷ್ಟು ಉಳಿದಿದೆ ಎಂಬ ಪ್ರಶ್ನೆ ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಇಂತಹ ಸಂದರ್ಭದಲ್ಲಿ ವಿಶ್ವಮಾನವ ದಿನಾಚರಣೆ ಕೇವಲ ಆಚರಣೆಯಾಗದೆ, ಆತ್ಮಾವಲೋಕನದ ವೇದಿಕೆಯಾಗಬೇಕೆಂಬ ಸಂದೇಶವನ್ನು ಬೆಂಗಳೂರಿನಲ್ಲಿ ನಡೆದ ವಿಶಿಷ್ಟ ಸಮಾರಂಭವೊಂದು ಬಲವಾಗಿ ಸಾರಿತು.
ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನ ಆವರಣದ ನಯನ ಸಭಾಂಗಣದಲ್ಲಿ ವಿಶ್ವಮಾನವ ದಿನಾಚರಣೆ ವಿಚಾರ ಸಂಕಿರಣ, ಅನ್ನಪೂರ್ಣೇಶ್ವರಿ ಫೌಂಡೇಶನ್‌ನ ಮೂರನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ಭೂತರಾಮನಹಟ್ಟಿ ಶ್ರೀಕ್ಷೇತ್ರ ಮುಕ್ತಿ ಮಠದ ಪರಮಪೂಜ್ಯ ಮಹರ್ಷಿ ತಪೋ ರತ್ನ ಶಿವಾಚಾರ್ಯರು–ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಾತನಾಡಿದಾಗ ಸಭಾಂಗಣ ಮೌನವಾಗಿ ಆಲಿಸುತ್ತಿತ್ತು.
“ಮಾನವೀಯತೆ ಘೋಷಣೆಯ ವಿಷಯವಲ್ಲ; ಅದು ಬದುಕಿನ ಶಿಸ್ತು,” ಎಂದು ಅವರು ಹೇಳಿದರು. “ಹಸಿದವನಿಗೆ ಅನ್ನ ಕೊಡುವುದು, ಅಶಕ್ತನ ಕೈ ಹಿಡಿಯುವುದು, ದುಃಖಿತನ ನೋವಿಗೆ ಸ್ಪಂದಿಸುವುದೇ ನಿಜವಾದ ಮಾನವೀಯತೆ. ಆದರೆ ಇಂದು ಅದು ಆಚರಣೆಯಿಂದ ಭಾಷಣಕ್ಕೆ, ಕಾರ್ಯದಿಂದ ಘೋಷಣೆಗೆ, ಅನುಭವದಿಂದ ಪ್ರದರ್ಶನಕ್ಕೆ ಸರಿದಿದೆ,” ಎಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ‘ವಿಶ್ವಮಾನವ’ ಪರಿಕಲ್ಪನೆ ಇಂದಿನ ಸಮಾಜಕ್ಕೆ ಇನ್ನಷ್ಟು ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಅನಂತನಾಯಕ ಎನ್ ಅವರು ಭಾರತೀಯ ಚಿಂತನೆಯ ಮೂಲ ತತ್ವವಾದ “ವಸುಧೈವ ಕುಟುಂಭಕಂ” ಅನ್ನು ನೆನಪಿಸಿದರು. “ಇಡೀ ಜಗತ್ತನ್ನೇ ಒಂದು ಕುಟುಂಬವೆಂದು ನೋಡುವ ತತ್ವವನ್ನು ನಾವು ಎಷ್ಟು ಆಳವಾಗಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ? ನಮ್ಮ ಕುಟುಂಬ, ಜಾತಿ, ಧರ್ಮ ಮತ್ತು ಭಾಷೆಯ ಗಡಿಗಳನ್ನು ದಾಟಿ ನೋಡುವ ಧೈರ್ಯ ನಮಗಿದೆಯೇ?” ಎಂದು ಪ್ರಶ್ನಿಸಿದರು. ವಿಶ್ವಮಾನವ ದಿನಾಚರಣೆ ಇಂತಹ ಪ್ರಶ್ನೆಗಳನ್ನು ಸಮಾಜದ ಮುಂದೆ ಮತ್ತೆ ಮತ್ತೆ ಇಡುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಅವರು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್‌ನ ಲೋಗೋವನ್ನು ಲೋಕಾರ್ಪಣೆ ಮಾಡಿದರು. ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬರಮಣ್ಣ ಲಕ್ಷ್ಮಣ ಉಪ್ಪಾರ, ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ದೊರೆ ಅಲ್ದಾಳ, ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರಾಜು ಮಹಾದೇವ ನಾಶಿಪುಡಿ, ಬಾಗಲಕೋಟೆ ಜಿಲ್ಲೆಯ ಸಮಾಜಸೇವಕಿ ನವನೀತ ಗೋವಿಂದರಾಜ ಮುಳಗುಂದ, ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಮನಗರ ರಾಜ್ಯಾಧ್ಯಕ್ಷ ಎಂ.ಟಿ. ಮಹೇಶ್ ಕುಮಾರ್ ಹಾಗೂ ಪ್ರಣವ ಮೀಡಿಯಾ ಹೌಸ್‌ನ ಮಾಧ್ಯಮ ಸಮಾಲೋಚಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯದ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ, ಔದ್ಯಮಿಕ ಮತ್ತು ನ್ಯಾಯಾಂಗ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವಾರು ಗಣ್ಯರಿಗೆ ಈ ಸಂದರ್ಭದಲ್ಲಿ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮಾವತಿ ಕೆ.ವಿ. (ಜನನಿ ಪಬ್ಲಿಕ್ ಶಾಲೆಯ ಶೈಕ್ಷಣಿಕ ಆಡಳಿತಾಧಿಕಾರಿ), ಕಲಾ ವಿಮರ್ಶಕ ಡಾ. ವಿ.ಎಸ್. ನಾಯಕ್, ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಶೈಲಿಯ ಹಿರಿಯ ಚಿತ್ರಕಲಾವಿದೆ ಡಾ. ಮೀರಾಕುಮಾರ್, ಕರಕುಶಲ ಕಲಾವಿದ ಸೋಮಶೇಖರ ಹೊರಕೇರಿ, ಇತಿಹಾಸ ಸಂಶೋಧಕ ಕೆಂಗೇರಿ ಚಕ್ರಪಾಣಿ ಸೇರಿದಂತೆ ಅನೇಕರು ಗೌರವಕ್ಕೆ ಪಾತ್ರರಾದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ವಾನ್ ಡಾ. ರಾಜಗೋಪಾಲ ಭಾಗವತ್ ಅವರ ಗಾಯನ, ವಿದುಷಿ ಡಾ. ಪೂರ್ಣಿಮಾ ಭಾಗವತ್ ಅವರ ನಟವಾಂಗ ಹಾಗೂ ವಿದುಷಿ ನಂದನ ಎಂ.ಜಿ.–ನಯನ ಪ್ರಶಾಂತ್ ಅವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ವೈಭವವನ್ನು ನೀಡಿತು.
ಅಧ್ಯಯನ, ಸೇವೆ ಮತ್ತು ಸಂಸ್ಕಾರಗಳ ಸಮನ್ವಯದೊಂದಿಗೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಸಂಸ್ಥೆಗಳ ಕಾರ್ಯಚಟುವಟಿಕೆಗಳು ಸಮುದಾಯದ ಚಿಂತನೆಗೆ ದಿಕ್ಕು ನೀಡುತ್ತಿವೆ. ಶಿಕ್ಷಣ ವಿಸ್ತರಣೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಮಾನವೀಯ ಮೌಲ್ಯಗಳ ಬಲವರ್ಧನದಲ್ಲಿ ಇವರ ಪಾತ್ರ ಗಮನಾರ್ಹವಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್‌ನ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಎಸ್. ಕಡಲಗಿ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷ ನಿತ್ಯಾ ಎಂ. ಆಚಾರ್ ತಿಳಿಸಿದ್ದಾರೆ.
