" ಸಂತಕವಿ ಕನಕದಾಸರು ವಿಶ್ವ ಮಾನವ ಪ್ರಜ್ಞೆಯ ಋಷಿಕವಿಗಳು,ಸಾರ್ವಕಾಲಿಕ ಕವಿಗಳು" - ಮಲ್ಲೇಪುರಂ ಜಿ ವೆಂಕಟೇಶ
" ಸಂತಕವಿ ಕನಕದಾಸರು ವಿಶ್ವ ಮಾನವ ಪ್ರಜ್ಞೆಯ ಋಷಿಕವಿಗಳು,ಸಾರ್ವಕಾಲಿಕ ಕವಿಗಳು" - ಮಲ್ಲೇಪುರಂ ಜಿ ವೆಂಕಟೇಶ
ಹಾವೇರಿ :ಸಂತ ಕನಕದಾಸರು ವಿಶ್ವಮಾನವ ಪ್ರಜ್ಞೆಯನ್ನು ಉಸಿರಾಗಿ ಬಾಳಿ,ಬದುಕಿದ ಕವಿಗಳು,ಋಷಿಗಳು.ಕನಕದಾಸರ ಬದುಕು ವ್ಯಷ್ಟಿಯಿತ್ತ ಸಮಷ್ಟಿಯತ್ತ ಸಾಗಿದ ಬದುಕು.ಹಂತಹಂತವಾಗಿ ಬೆಳೆದು ಮಹಾಂತರಾದವರು.ಅವರ ಕಾವ್ಯ,ಕೀರ್ತನೆಗಳಲ್ಲಿ ಅವರ ವ್ಯಕ್ತಿತ್ವವು ವಿಕಾಸವಾಗುತ್ತ ಹೋದ ಬಗೆಯನ್ನು ಗುರುತಿಸಬಹುದು.ಕನಕದಾಸರ ಕವಿಹೃದಯ ಕನ್ನಡಕ್ಕೆ ಹಲವು ಅದ್ಭುತಕಾವ್ಯಗಳನ್ನು ಕೊಟ್ಟರೆ ಅವರ ಋಷಿಹೃದಯ ಕನ್ನಡಕ್ಕೆ ವಿಶ್ವಮಾನವ ಪ್ರಜ್ಞೆಯನ್ನು ನೀಡಿದೆ' ಎಂದು ಸಂತಕನಕದಾಸರ ವ್ಯಕ್ತಿತ್ವದ ಹಿರಿಮೆಯನ್ನು ಬಣ್ಣಿಸಿದರು ಕನ್ನಡದ ಖ್ಯಾತಸಾಹಿತಿ,ಹಿರಿಯ ವಿದ್ವಾಂಸ,ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು.ಅವರಿಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಏರ್ಪಡಿಸಿದ್ದ "ವಿಶ್ವಮಾನವ ಪ್ರಜ್ಞೆಯ ಸಂತಕವಿ ಕನಕದಾಸರು' ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ತಮ್ಮ ಮಾತುಗಳನ್ನು ಮುಂದುವರೆಸಿದ ಮಲ್ಲೇಪುರಂ ಜಿ ವೆಂಕಟೇಶ ಅವರು ' ಕುವೆಂಪು ಅವರ ಅನಿಕೇತನ ಕವನದ ವಿಶ್ವಮಾನವ ಸಂದೇಶವನ್ನು ಕನಕದಾಸರ ವಿಶ್ವಮಾನವಪ್ರಜ್ಞೆಯೊಂದಿಗೆ ಸಮೀಕರಿಸಿ,'ಕನಕದಾಸರ ಕಾವ್ಯ,ಕೀರ್ತನೆಗಳಲ್ಲಿ ವಿಶ್ವಮಾನವ ಪ್ರಜ್ಞೆಯ ದರ್ಶನ ಇದೆ.ಅವರ ರಾಮಧಾನ್ಯ ಚರಿತೆಯು ಕನ್ನಡದ ವಿಶಿಷ್ಟ ಕಾವ್ಯ ಮಾತ್ರವಲ್ಲ,ಕನ್ನಡದ ಪ್ರಸಿದ್ಧ ಅಣಕು ಕಾವ್ಯವೂ ಹೌದು.ಕನಕದಾಸರು ಭೋಗಜೀವನದಿಂದ ಯೋಗಜೀವನದತ್ತ ತುಡಿದ ಅವರ ಬದುಕಿನ ವಿಕಾಸಕ್ರಮವು ಅವರ ಕಾವ್ಯ,ಕೀರ್ತನೆಗಳಲ್ಲಿ ಕಾಣಬಹುದು ಎಂದರು.
ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಯ್ಯ ಬಿ ಹಿರೇಮಠ ಅವರು ಮಾತನಾಡುತ್ತ,ಇತ್ತೀಚಿನ ದಿನಗಳಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಸಾಗಬೇಕಿದ್ದ ಸಾಹಿತ್ಯಕ ಸಾಂಸ್ಕೃತಿಕ ಕ್ಷೇತ್ರದತ್ತ ಸಾಗುತ್ತಿರುವುದು ಉತ್ತಮಬೆಳವಣಿಗೆ.ನೂತನ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು ಅಧಿಕಾರ ವಹಿಸಿಕೊಂಡ ಒಂದುವರೆ ತಿಂಗಳ ಅಲ್ಪಕಾಲದಲ್ಲಿಯೇ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಸಾಹಿತ್ಯಕ- ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುತ್ತಿರುವುದು ಸಂತೋಷದ ಸಂಗತಿಯಾಗಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲೆಯ ಎಲ್ಲಾ ಕವಿ- ಸಾಹಿತಿಗಳು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಜೊತೆ ಇರುತ್ತೇವೆ' ಎಂದರು.ಕಲ್ಯಾಣ ಕರ್ನಾಟಕದ ಶಹಾಪುರದ ಕವಿ ಬಸವರಾಜ ಸಿನ್ನೂರ ಅವರು ಮಾತನಾಡಿ ಕನಕದಾಸರ ವ್ಯಕ್ತಿತ್ವ,ಸಾಧನೆಗಳನ್ನು ನಾಡಿನಾದ್ಯಂತ ಪಸರಿಸುವ ಪ್ರಯತ್ನ ಮಾಡುತ್ತಿರುವ ಕಾಗಿನೆಲೆ ಪ್ರಾಧಿಕಾರದ ಆಯುಕ್ತರ ಜೊತೆ ನಾವು ಹೆಗಲಿಗೆ ಹೆಗಲುಕೊಟ್ಟು ದುಡಿಯಲು ಸಿದ್ಧರಿದ್ದೇವೆ ' ಎಂದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತ ' ಲೋಕಗುರು ಕನಕದಾಸರ ಬದುಕು- ಬರಹ,ಸಾಧನೆ- ಸಿದ್ಧಿಗಳನ್ನು ಸಾಂಪ್ರದಾಯಿಕ ದೃಷ್ಟಿಕೋನದಿಂದ ನೋಡದೆ ಹೊಸದೃಷ್ಟಿಯಿಂದ ಅವರನ್ನು ಕಂಡು,ಅರ್ಥೈಸಬೇಕಿದೆ.ದಾಸಸಾಹಿತ್ಯ,ಹರಿದಾಸಸಾಹಿತ್ಯ ಪರಂಪರೆಯ ಭಕ್ತರನ್ನಾಗಿ ಮಾತ್ರ ಅವರನ್ನು ಕಾಣದೆ ಅವರನ್ನು ಸಂತರು,ದಾರ್ಶನಿಕರು ಎಂದು ಕಾಣಬೇಕಿದೆ.ಕನಕದಾಸರ ಬದುಕು ಬರಹಗಳಿಗೆ ಹೊಸ ವ್ಯಾಖ್ಯಾನ ಅಗತ್ಯವಿದೆ.ಆ ನಿಟ್ಟಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಕನಕದಾಸರ ಬಹುಮುಖ ಪ್ರತಿಭೆ,ಬಹುಮುಖಿ ಸಿದ್ಧಿಯನ್ನು ಪರಿಚಯಿಸುವ ಕಾರ್ಯಕೈಗೊಂಡಿದೆ.ಅನ್ನಮಯ ಕೋಶದಿಂದ ಆನಂದಮಯ ಕೋಶದವರೆಗೆ ಆತ್ಮಪಯಣಕೈಗೊಂಡು ವಿಶ್ವಮಾನವ ಪ್ರಜ್ಞೆಯ ಮುನ್ನೋಟ ನೀಡಿದ ಸಂತಕವಿಯಾಗಿ ಕನಕದಾಸರನ್ನು ಅರ್ಥೈಸುವ ಅಗತ್ಯವಿದೆ' ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಧಿಕಾರದ ಸಂಶೋಧಕರಾದ ಡಾ:ಜಗನ್ನಾಥ ಗೇನಣ್ಣನವರ್ ಕನಕದಾಸರ ಬದುಕು ಬರಹಗಳನ್ನು ಪರಿಚಯಿಸಿದರು.ಜಗನ್ನಾಥ ಗೇನಣ್ಣನವರ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರೆ ಶಿವಕುಮಾರ್ ಹಡಗಲಿ ಪ್ರಾರ್ಥನೆ ಸಲ್ಲಿಸಿದರು.ಪ್ರಾಧಿಕಾರದ ಲೆಕ್ಕಾಧೀಕ್ಷಕರಾದ ಸಿ.ಬಿ.ಸಪ್ಪಿನ್ ವಂದಿಸಿದರು.
