ಪ್ರಣವಾನಂದ ಶ್ರೀ ವೇಣುಗೋಪಾಲ್ ನಾಳೆ ಮಹತ್ವದ ಭೇಟಿ: 29ಕ್ಕೆ ಬೆಂಗಳೂರಿನಲ್ಲಿ ಸ್ವಾಮೀಜಿಗಳಿಂದ ಸಭೆ
ಡಿಕೆಶಿ ಮುಖ್ಯಮಂತ್ರಿಯಾಗಿ ಘೋಷಿಸಲು ಅತಿ ಹಿಂದುಳಿದ ಸ್ವಾಮೀಜಿಗಳಿಂದ ಮತ್ತೆ ಬ್ಯಾಟಿಂಗ್
ಪ್ರಣವಾನಂದ ಶ್ರೀ ವೇಣುಗೋಪಾಲ್ ನಾಳೆ ಮಹತ್ವದ ಭೇಟಿ: 29 ಕ್ಕೆ ಬೆಂಗಳೂರಿನಲ್ಲಿ ಸ್ವಾಮೀಜಿಗಳಿಂದ ಸಭೆ
ಕಲಬುರಗಿ: ರಾಜ್ಯದ ಪ್ರಸಕ್ತ ರಾಜಕೀಯ ವಾತಾವರಣದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಅತಿ ಹಿಂದುಳಿದ ಸ್ವಾಮೀಜಿಗಳ ಮಹಾಸಭಾದ ರಾಜ್ಯಾಧ್ಯಕ್ಷರೂ, ಈಡಿಗ ಸಮಾಜದ ಗುರುಗಳಾದ ಡಾ. ಪ್ರಣವಾನಂದ ಶ್ರೀ ಮತ್ತೆ ಧ್ವನಿಯೆತ್ತಿದ್ದಾರೆ.
ಕಲಬುರಗಿಯ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಸೋಮವಾರ (ಡಿ 22ರಂದು) ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಹೈಕಮಾಂಡ್ ಘೋಷಿಸುವುದು ಅತ್ಯಂತ ಸೂಕ್ತ ಮತ್ತು ರಾಜ್ಯದ ಅತಿ ಹಿಂದುಳಿದ ಸಮುದಾಯ ಸೇರಿದಂತೆ ಕರ್ನಾಟಕದ ದೃಷ್ಟಿಯಿಂದ ಅತ್ಯಂತ ಅಗತ್ಯ. ರಾಜ್ಯದಲ್ಲಿ ಅತಿ ಹಿಂದುಳಿದ ಸಮುದಾಯದವರ ಅಭಿವೃದ್ಧಿಯು ಇನ್ನೂ ಸಾಧ್ಯವಾಗದೆ ಕೇವಲ ಕೆಲವೊಂದು ಹಿಂದುಳಿದ ವರ್ಗಗಳನ್ನು ಮಾತ್ರ ಎತ್ತಿ ಹಿಡಿಯುವುದರಿಂದ ಅತಿ ಹಿಂದುಳಿದವರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಗಳಾದರೆ ಅತಿ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಗಲಿದೆ. ಹೈಕಮಾಂಡ್ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಂಡು ಮುಖ್ಯಮಂತ್ರಿಗಳಾಗಿ ಘೋಷಣೆ ಮಾಡಬೇಕು. ಅಕಸ್ಮಾತ್ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸಿ ಡಿಕೆ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶ ಖಚಿತ. 2013 ರಿಂದ 18ರವರೆಗೆ ಹಾಗೂ ಈಗಿನ ಎರಡುವರೆ ವರ್ಷಗಳಲ್ಲಿ ಹಿಂದುಳಿದ ಕಲ್ಯಾಣಕ್ಕಾಗಿ ಸರ್ಕಾರವು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಮತ್ತು ಅನುಭವ ಮಂಟಪದಲ್ಲಿದ್ದ ಅತಿ ಹಿಂದುಳಿದ ಸಮುದಾಯದ ಶರಣರ ವಚನಗಳನ್ನು ಸರಕಾರವು ಪ್ರಕಟ ಮಾಡುವುದಲ್ಲದೆ ಕುಲ ಕಸುಬುಗಳನ್ನು ರಕ್ಷಣೆ ಮಾಡಬೇಕು ಎಂದು ಪ್ರಣವಾನಂದ ಶ್ರೀಗಳು ಗುಡುಗಿದ್ದಾರೆ.
ಇದಕ್ಕಾಗಿ ಅತಿ ಹಿಂದುಳಿದವರ ಸುಮಾರು 32 ಸ್ವಾಮೀಜಿಗಳು ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಹಾಗೂ ಡಿ.ಕೆ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಒತ್ತಾಯಿಸಿ ಪತ್ರಗಳನ್ನು ರವಾನಿಸಲಾಗುತ್ತಿದೆ. ಈ ಮಧ್ಯೆ ಮಂಗಳವಾರ ಎಐಸಿಸಿ ಯ ಪ್ರಧಾನ ಕಾರ್ಯದರ್ಶಿಗಳಾದ ಕೆ. ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ತನಗೆ ಸಮಯ ನಿಗದಿಯಾಗಿದೆ. ಅದಕ್ಕಾಗಿ ನವದೆಹಲಿಗೆ ತೆರಳುತ್ತಿದ್ದೇನೆ ಎಂದು ಡಾ. ಪ್ರಣವಾನಂದ ಶ್ರೀಗಳು ತಿಳಿಸಿದ್ದಾರೆ.
29ಕ್ಕೆ ಬೆಂಗಳೂರಿನಲ್ಲಿ ಮಹತ್ವದ ಸಭೆ
ಈ ತಿಂಗಳ 29ನೇ ತಾರೀಕಿಗೆ ಬೆಂಗಳೂರಿನ ಕನಿಷ್ಕ ಹೋಟೆಲ್ ಸಭಾಂಗಣದಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ಮಹಾಸಭಾದ 32 ಸ್ವಾಮೀಜಿಗಳು ಮಹತ್ವದ ಸಭೆ ನಡೆಸಲಿದ್ದಾರೆ. ಇದರಲ್ಲಿ ಎರಡು ವಾರಗಳ ಹಿಂದೆ ಮಹಾಸಭಾದ ವತಿಯಿಂದ ನಡೆದ ಸಭಾ ನಿರ್ಣಯಗಳ ಬಗ್ಗೆ ಚರ್ಚಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿದ ಆಶ್ವಾಸನೆ ಹಾಗೂ ಸಂಘಟನಾತ್ಮಕವಾದ ವಿಚಾರಗಳು ಚರ್ಚೆಗೆ ಬರಲಿವೆ. ಶೀಘ್ರದಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತಿ ಹಿಂದುಳಿದವರ ಬೃಹತ್ ಸಮಾವೇಶವನ್ನು ನಡೆಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಲೇಪೇಟ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ದೊಡ್ಡೆಂದ್ರ ಸ್ವಾಮೀಜಿ, ಕಲಬುರಗಿ ನದಿಸಿನ್ನೂರ ಶರಣ ಹೂಗಾರ ಮಾದಯ್ಯನವರ ಮಹಾಶಕ್ತಿ ಪೀಠದ ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ಚಿತ್ತಾಪುರ ರಾಂಪುರ ಹಳ್ಳಿ ಅಖಿಲ ಭಾರತ ಉಪ್ಪಾರ ಗುರುಪೀಠದ ಶ್ರೀ ಜಗದ್ಗುರು ಭಗೀರಥಾನಂದ ಪುರಿ ಸ್ವಾಮೀಜಿ, ಶಿವಸಿಂಪಿ ಸಮಾಜದ ಬಾಗಲಕೋಟೆ ಬನಹಟ್ಟಿ ಮಹಾಂತ ಮಂದಾರ ಮಠದ ಶ್ರೀ ಮಹಾಂತ ದೇವರು, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಉಪಾಧ್ಯಕ್ಷರಾದ ಕುಪೇಂದ್ರ ಗುತ್ತೇದಾರ್ ನಾಗೂರ್, ಈಡಿಗ ಮುಖಂಡರಾದ ಬಸವರಾಜ್ ರಾವೂರ್, ಮಲ್ಲಿಕಾರ್ಜುನ ಕುಕ್ಕುಂದ, ಮಹೇಶ್ ಗುತ್ತೇದಾರ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
