ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಶಾಂತಕುಮಾರ ಯಳಸಂಗಿಗೆ ಗೌರವ ಸನ್ಮಾನ

ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಶಾಂತಕುಮಾರ ಯಳಸಂಗಿಗೆ ಗೌರವ ಸನ್ಮಾನ

ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಶಾಂತಕುಮಾರ ಯಳಸಂಗಿಗೆ ಗೌರವ ಸನ್ಮಾನ

ಕಲಬುರಗಿ: ದೇವರ ದಾಸಿಮಯ್ಯನವರ ವಚನಗಳನ್ನು ನಾಡಿನ ಉದ್ದಗಲಕ್ಕೂ ಜನಪ್ರಿಯಗೊಳಿಸುವ ಕಾರ್ಯ ಜಯಂತಿ ಉತ್ಸವಗಳ ಮೂಲಕ ನಿರಂತರವಾಗಿ ನಡೆಯಬೇಕು ಎಂದು ನ್ಯಾಯವಾದಿ ವಿನೋದ್ ಕುಮಾರ್ ಜನೇವರಿ ಹೇಳಿದರು.

ಬುಧವಾರ ದಿನಾಂಕ 04-02-2026 ರಂದು ಸಂಜೆ 7 ಗಂಟೆಗೆ ಪಟ್ಟಣದ ಸಪ್ತ ನೇಕಾರ ಸೇವಾ ಕೇಂದ್ರದ ಕಚೇರಿಯಲ್ಲಿ ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ವತಿಯಿಂದ ಕೆ.ಎಲ್.ಇ. ಸೊಸೈಟಿಯ ಸಂಸ್ಥಾಪಕ ಶ್ರೀ ಪಂಡಿತಪ್ಪ ರಾ. ಚಿಕ್ಕೋಡಿ ಅವರ 141ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ 2026ನೇ ಸಾಲಿನ ದೇವರ ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಂತಕುಮಾರ ಯಳಸಂಗಿ ಅವರನ್ನು ಅದ್ಧೂರಿಯಾಗಿ ಗೌರವಿಸಿ ಸನ್ಮಾನಿಸಲಾಯಿತು. ಹಾಲಿ ಜಿಲ್ಲಾ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾಗಿರುವ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಅನಾಧಿ ಚಂದ್ರಶೇಖರ ಅವರು ಶಾಲು ಹೊದಿಸಿ, ನೂಲಿನ ಹಾರ ಹಾಗೂ ಹೂಮಾಲೆ ಹಾಕಿ ಗೌರವಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಸಂಚಾಲಕರಾದ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, 2026ನೇ ಸಾಲಿನ ದೇವರ ದಾಸಿಮಯ್ಯ ಜಯಂತಿ ಉತ್ಸವ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಗೌರವ ಕಸಾಪ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಮಾತನಾಡಿ, ಆಳಂದ ಸಾಸಿರ ನಾಡಿನ ಇತಿಹಾಸ ಪ್ರಸಿದ್ಧ ನಿಂಬರ್ಗಾ ಗ್ರಾಮದ ಯಳಸಂಗಿ ಮನೆತನದ ಯುವ ಉದ್ಯಮಿ ಹಾಗೂ ಸಮಾಜಸೇವಕರು ಉತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. 2026ರ ದೇವರ ದಾಸಿಮಯ್ಯ ಜಯಂತಿ ಇವರ ನಾಯಕತ್ವದಲ್ಲಿ ಇತಿಹಾಸ ನಿರ್ಮಿಸಲಿ ಎಂದು ಶುಭ ಹಾರೈಸಿದರು.

ಕಸಾಪ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ಮಾತನಾಡಿ, ಶಾಂತಕುಮಾರ ಯಳಸಂಗಿ ಅವರ ಕ್ರಿಯಾಯೋಜನೆಯೊಂದಿಗೆ ದಾಸಿಮಯ್ಯ ವಚನ ಪರಂಪರೆಗೆ ತಕ್ಕಂತೆ ಕಾರ್ಯಕ್ರಮಗಳು ನಡೆಯಲಿ, ದಾಖಲೆ ಸೃಷ್ಟಿಯಾಗಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಪ್ರೊ. ಬಸವಂತರಾಯ ಪಾಟೀಲ್ ಜವಳಿ ಉಪಸ್ಥಿತರಿದ್ದರು.

ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದ ಶಾಂತಕುಮಾರ ಯಳಸಂಗಿ, ಎಲ್ಲರ ಸಹಕಾರದೊಂದಿಗೆ ವೈಚಾರಿಕ ನೆಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇವರ ದಾಸಿಮಯ್ಯ ಜಯಂತಿಯನ್ನು ಯಶಸ್ವಿಗೊಳಿಸುವೆನೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಬಸವರಾಜ್ ಚನ್ನಾ, ಛಾಯಾಗ್ರಾಹಕ ಶಿವವರ್ಮಾ, ಪತ್ರಿಕಾ ಛಾಯಾಗ್ರಾಹಕ ರಾಜು ಕೋಷ್ಠಿ ಸೇರಿದಂತೆ ಅನೇಕ ಸಕ್ರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.