ಬೀಚಿಯವರ ಬರಹ ಬದುಕಿಗೆ ದಾರಿ - ಪ್ರಾಣೇಶ ಗಂಗಾವತಿ

ಬೀಚಿಯವರ ಬರಹ ಬದುಕಿಗೆ ದಾರಿ - ಪ್ರಾಣೇಶ ಗಂಗಾವತಿ 

ಅದ್ದೂರಿಯಾಗಿ ನಡೆಯಿತು ಬೀಚಿಯವರ 13ನೇ ವರ್ಷದ ಸ್ಮರಣೋತ್ಸವ

(ಕಲ್ಯಾಣ ಕಹಳೆ ವಾರ್ತೆ )ನರೇಗಲ್ಲ: ಬೀಚಿ ಅವರು ಹಾಸ್ಯ ಸಾಹಿತಿಯಾಗಿದ್ದರೂ ಅವರ ಸಾಹಿತ್ಯದಲ್ಲಿ ಜೀವನಕ್ಕೆ ದಾರಿ ತೋರಿಸುವ ಗಾಢ ಸಂದೇಶ ಅಡಗಿದೆ. ಬೀಚಿಯವರ ಬರಹಗಳನ್ನು ಓದುವುದರಿಂದ ಬದುಕಿನ ಮೌಲ್ಯಗಳು ತಿಳಿಯುತ್ತವೆ ಎಂದು ಹಾಸ್ಯದಿಗ್ಗಜ ಗಂಗಾವತಿ ಪ್ರಾಣೇಶ್ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಬೀಚಿಯವರ 13ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಇಂದು ಜಗದ್ವಿಖ್ಯಾತ ಕಲಾವಿದನಾಗಲು ನರೇಗಲ್ಲೇ ಮೂಲ. ಇಲ್ಲಿನ ಶ್ರೀ ದತ್ತಾತ್ರೇಯ ದೇವಸ್ಥಾನದ ಉತ್ಸವಗಳಿಗೆ ಅನೇಕ ವರ್ಷಗಳು ಬಂದಿದ್ದೇನೆ. ಇಲ್ಲಿನ ಭಕ್ತರು ನನಗೆ ನೀಡಿದ ಆತಿಥ್ಯ ಮತ್ತು ಪ್ರೀತಿ ನನ್ನ ಬೆಳವಣಿಗೆಗೆ ಕಾರಣವಾಗಿದೆ. ಅವರ ಋಣವನ್ನೂ, ಶ್ರೀ ಗುರು ದತ್ತಾತ್ರೇಯರ ಆಶೀರ್ವಾದವನ್ನೂ ಎಂದಿಗೂ ಮರೆಯಲಾರೆ” ಎಂದು ಭಾವನಾತ್ಮಕವಾಗಿ ಹೇಳಿದರು.

ನನ್ನ ಮಾತಿಗೆ ಗೌರವ ನೀಡಿ ಸಾಹಿತ್ಯಾಸಕ್ತರು ಹದಿಮೂರು ವರ್ಷಗಳ ಹಿಂದೆಯೇ ಇಡೀ ಕರ್ನಾಟಕದಲ್ಲೇ ಮೊದಲನೆಯದಾಗಿ ‘ಬೀಚಿ ಬಳಗ’ ಸ್ಥಾಪಿಸಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ. ನನ್ನ ಗುರುಗಳ ಹೆಸರಿನ ಬಳಗದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅಪಾರ ಆನಂದವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗೆಭಾಷಣಕಾರರಾದ ಅನಿಲ ವೈದ್ಯ, ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಷಿ ತಮ್ಮ ವಿಶಿಷ್ಟ ಶೈಲಿಯ ಮಾತುಗಳಿಂದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿ ರಸದೌತಣ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಿಥುನ್ ಪಾಟೀಲ ಮಾತನಾಡಿ, “ನರೇಗಲ್ಲಿನಲ್ಲಿ ಬೀಚಿ ಬಳಗ ಮಾಡುತ್ತಿರುವ ಸಾಹಿತ್ಯಿಕ ಸೇವೆಯನ್ನು ನಾನು ಬಹು ವರ್ಷಗಳಿಂದ ಗಮನಿಸುತ್ತಿದ್ದೇನೆ. ದಶಮಾನೋತ್ಸವಕ್ಕೆ ಕನ್ನಡದ ಪೂಜಾರಿ ಕಣ್ಣನ್ ಮಾಮಾ ಅವರನ್ನು ಆಹ್ವಾನಿಸಿದ ಕೀರ್ತಿ ಬಳಗಕ್ಕಿದೆ. ಬಳಗದ ಎಲ್ಲ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ” ಎಂದರು.

ಈ ಸಂದರ್ಭದಲ್ಲಿ ಧರ್ಮರತ್ನಾಕರ ಪ್ರಶಸ್ತಿ ಪುರಸ್ಕೃತ ಡಾ. ಜಿ.ಕೆ. ಕಾಳೆ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ, ಕಾರ್ಯಕಾರಿಣಿ ಸದಸ್ಯರಾದ ನಿಂಗರಾಜ ಬೇವಿನಕಟ್ಟಿ, ಆದರ್ಶ ಕುಲಕರ್ಣಿ ಹಾಗೂ ಕಾನೂನು ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್ ಗಳಿಸಿದ ವಿದ್ಯಾಶ್ರೀ ಬೇವಿನಕಟ್ಟಿಯವರನ್ನು ಸನ್ಮಾನಿಸಲಾಯಿತು. ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ಧರ್ಮಸ್ಥಳ ಗುಂಪಿನವರು ಗಣ್ಯರು, ಕಲಾವಿದರನ್ನು ಗೌರವಿಸಿದರು.

ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, “ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ನರೇಗಲ್ಲಿಗೆ ಆಗಮಿಸುವುದು ಬಳಗದ ಶ್ರಮದ ಫಲ. ನಿವೃತ್ತರೇ ಹೆಚ್ಚಿರುವ ಸಂಘದ ಕ್ರಿಯಾಶೀಲ ಸದಸ್ಯರನ್ನು ಅಭಿನಂದಿಸುತ್ತೇನೆ” ಎಂದರು. ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಬಿ.ಬಿ. ಕುರಿ ಮತ್ತು ಮಹಾದೇವಪ್ಪ ಬೇವಿನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಕಳಕಣ್ಣವರ ಸ್ವಾಗತಿಸಿದರು. ಎಂ.ಎಸ್. ಧಡೇಸೂರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ಮಲಾ ಹಿರೇಮಠ ವಂದಿಸಿದರು.

ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ, ಗದಗ