ಲೀಲಾದೇವಿ ಪ್ರಸಾದ್ ಕರ್ನಾಟಕ ಕಂಡ ಅಪರೂಪದ ಮಹಿಳಾ ಸಾಧಕಿ -ಡಾ ರಾಜೇಂದ್ರ ಗಡಾದ

ಲೀಲಾದೇವಿ ಪ್ರಸಾದ್ ಕರ್ನಾಟಕ ಕಂಡ ಅಪರೂಪದ ಮಹಿಳಾ ಸಾಧಕಿ -ಡಾ ರಾಜೇಂದ್ರ ಗಡಾದ

ಕನ್ನಡ ಸಾಂಸ್ಕೃತಿಕ ಪರಿಚಾರಕಿ ಡಾ. ಲೀಲಾದೇವಿ ಪ್ರಸಾದ್ ಕರ್ನಾಟಕ ಕಂಡ ಅಪರೂಪದ ಮಹಿಳಾ ಸಾಧಕಿ -ಡಾ ರಾಜೇಂದ್ರ ಗಡಾದ

19 ಕನ್ನಡ ಸಾಂಸ್ಕೃತಿಕ ಪರಿಚಾರಕಿ, ಮಾಜಿ ಸಚಿವೆ ಡಾ. ಲೀಲಾದೇವಿ ಆರ್ ಪ್ರಸಾದ್ ಕರ್ನಾಟಕ ಕಂಡ ಅಪರೂಪದ ಮಹಿಳಾ ಸಾಧಕಿಯರಲ್ಲೊಬ್ಬರಾಗಿದ್ದು ರಾಜಕೀಯ ಹಾಗೂ ಸಾಂಸ್ಕೃತಿಕ ಸಾಹಿತ್ಯ ಗಳೆರಡರಲ್ಲೂ ವೈಶಿಷ್ಟ್ಯ ಮೆರೆದು ಯಶಸ್ಸು ಗಳಿಸಿದರಾಗಿದ್ದಾರೆಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕವಿ ವಿಮರ್ಶಕ ಡಾ ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಕದಳಿ ಮಹಿಳಾ ವೇದಿಕೆಗಳು ಬೆಂಗಳೂರಿನ ಬಸವಭವನದಲ್ಲಿ ಏರ್ಪಡಿಸಿದ್ದ ಶರಣೆ ಡಾ ಲೀಲಾದೇವಿ ಆರ್ ಪ್ರಸಾದ್- 92 ಸಾರ್ಥಕ ಬದುಕಿನ ಸುಂದರ ಪಯಣ ಅಭಿನಂದನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೇಲಿನಂತೆ ಅಭಿನಂದನಾ ನುಡಿಗಳನ್ನಾಡಿದ ಡಾ. ಗಡಾದವರು 1957 ರಲ್ಲಿಯೇ ಬೆಂಗಳೂರು ಮಹಾನಗರಪಾಲಿಕೆ ಸದಸ್ಯರಾಗಿ ಸಾಮಾಜಿಕ ರಾಜಕೀಯ ಜೀವನ ಪ್ರಾರಂಭಿಸಿ ಮುಂದೆ ಶಾಸಕಿಯಾಗಿ ಸಚಿವೆಯಾಗಿ ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಸೇವೆ ಸಲ್ಲಿಸಿದಂತೆ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಸಹಕಾರ ಕ್ಷೇತ್ರ, ಮಹಿಳಾ ಸಂಘಟನೆಯಲ್ಲಿ ಡಾ. ಲೀಲಾದೇವಿಯವರು ವಹಿಸಿರುವ ಪಾತ್ರ ತುಂಬಾ ಶ್ಲಾಘನೀಯವಾದದು ಎಂದರು. ಸಾಹಿತ್ಯ ಲೋಕದಲ್ಲೂ ಗಣನೀಯ ಕೊಡುಗೆ ನೀಡಿರುವ ಇವರು ಸಾಹಿತ್ಯದ ವಿವಿಧ ಪ್ರಕಾರದ 30ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದು ಇವರ ಕೃತಿಗಳು ವಿಶ್ವವಿದ್ಯಾಲಯದ ಪಠ್ಯಗಳಾಗಿ ಹಲವಾರು ಭಾಷೆಗಳಿಗೆ ಅನುವಾದವಾಗಿವೆ ಅಷ್ಟೇ ಅಲ್ಲದೆ ಅನೇಕ ಪ್ರಶಸ್ತಿಗಳಿಗೂ ಭಾಜನವಾಗಿವೆ ಎಂದರು. ಅವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದ ಅನುಪಮ ಸೇವೆಗೆ ವಿಜಯಪುರ ಮಹಿಳಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದರೆ, ಕರ್ನಾಟಕ ಸರ್ಕಾರವು

ರಾಜ್ಯೋತ್ಸವ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ, 'ಅಕ್ಕ" ರಾಜ್ಯ ಪ್ರಶಸ್ತಿಯನ್ನ ನೀಡಿ ಗೌರವಿಸಿವೆ ಎಂದರು.

ಇನ್ನೋರ್ವ ಅತಿಥಿಗಳಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಖ್ಯಾತ ಸಾಹಿತಿಗಳಾದ ಡಾ. ಧರಣಿದೇವಿ ಮಾಲಗತ್ತಿ ಅವರು. ನಾಡಿನ ಮಹಿಳೆಯರಿಗೆಲ್ಲ ಬಹುಮುಖ ಪ್ರತಿಭೆಯ ಡಾ. ಲೀಲಾ ದೇವಿ ಅವರು ಆದರ್ಶನೀಯವಾಗಿದ್ದಾರೆ ಎಂದರು. ಖ್ಯಾತ ಸಾಹಿತಿ ಸುಪ್ರಸಿದ್ಧ ಕವಿಗಳಾದ ಡಾ. ಎಚ್.ಎಸ್ ಶಿವಪ್ರಕಾಶ್ ಅವರು ಸಮಾರೋಪ ಭಾಷಣ ಮಾಡುತ್ತಾ ಡಾ ಲೀಲಾದೇವಿ ಆರ್ ಪ್ರಸಾದ್ ಅವರು 93ರ ಇಳಿವಯದಲ್ಲೂ ಕ್ರಿಯಾಶೀಲರಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಸೋಜಿಗವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪ್ರಭುದೇವ್ ಚಿಗಟೇರಿಯವರು ಡಾ. ಲೀಲಾದೇವಿಪ್ರಸಾದ್ ಅವರ ಸಾಮಾಜಿಕ ಕಳಕಳಿ ಸಾಮಾಜಿಕ ಸೇವೆ ಸಾಹಿತ್ಯ ಸಾಧನೆ ಅನುಪಮವಾದುದು ಎಂದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಬೇಲಿಮಠ ಸಂಸ್ಥಾನದ ಶ್ರೀ ಮ.ನಿ.ಪ್ರ ಶಿವರುದ್ಧ ಮಹಾಸ್ವಾಮಿಗಳು ಮಾತನಾಡಿ ಹಾಳು ಕೊಂಪಿಯಾಗಿದ್ದ ಉಡುತಡಿಯನ್ನು ರಾಷ್ಟ್ರೀಯ ಮಟ್ಟದ ಪುಣ್ಯಕ್ಷೇತ್ರವನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು. ವೇದಿಕೆಯ ಮೇಲೆ ಡಾ. ಲೀಲಾದೇವಿ ಆರ್ ಪ್ರಸಾದ್, ಶ್ರೀಮತಿ ಉಮಾದೇವಿ ಚಂದ್ರಶೇಖರ್, ಪ್ರಮಿಳಾ ಗರಡಿ ಶ್ರೀಮತಿ ಮಹಾಲಕ್ಷ್ಮಿ ಉಪಸ್ಥಿತರಿದ್ದರು.

ಆರಂಭದಲ್ಲಿ ಕರ್ನಾಟಕ  ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿಯವರು ಪ್ರಸ್ತಾವಿಕ ನುಡಿಗಳನ್ನಾಡಿ ಕನ್ನಡ ನಾಡಿಗೆ ಡಾ ಲೀಲಾದೇವಿ ಆರ್ ಪ್ರಸಾದ್ ಅವರ ಬಹುಮುಖ ಸೇವೆಯನ್ನು ಕೊಂಡಾಡಿದರು. ಶ್ರೀಮತಿ ಗೀತಾ ಜಯಂತ್ ಸರ್ವರನ್ನು ಸ್ವಾಗತಿಸಿದರು ಇದೇ ಸಂದರ್ಭದಲ್ಲಿ ಸಾಹಿತಿ ಡಾ. ರಾಜೇಂದ್ರ ಎಸ್ ಗಡಾದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿಯರಾದ ಡಾ. ಸರಸ್ವತಿ ಚಿಮ್ಮಲಗಿ, ಡಾ ಹನುಮಾಕ್ಷಿ ಗೋಗಿ, ಡಾ ನಿರ್ಮಲಾ ಎಲಿಗಾರ, ಮಂಜುಳಾ ಶಿವಾನಂದ. ಹಿರಿಯ ಸಮಾಜ ಸೇವಕಿ ಶ್ರೀಮತಿ ಸುಶೀಲಮ್ಮ, ಕಮಲಾ ಸುದರ್ಶನ್, ದಿಟ್ಟೂರು ಗಿರೀಶ್ ಸೇರಿದಂತೆ ನಾಡಿನಾದ್ಯಂತ ಆಗಮಿಸಿದ್ದ ಅನೇಕ ಅಭಿಮಾನಿಗಳು ಹಿತೈಷಿಗಳು ಭಾಗವಹಿಸಿದ್ದರು..

 19/10/2024 ಡಾ. ರಾಜೇಂದ್ರ ಎಸ್. ಗಡಾದ ಗದಗ