ಭೂಸನೂರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಅಕ್ರಮ ಆರೋಪ: ಜಿಲ್ಲಾಧಿಕಾರಿಗಳಿಗೆ ರೈತರ ಮನವಿ
ಭೂಸನೂರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಅಕ್ರಮ ಆರೋಪ: ಜಿಲ್ಲಾಧಿಕಾರಿಗಳಿಗೆ ರೈತರ ಮನವಿ
ಕಲಬುರಗಿ, ಡಿಸೆಂಬರ್ 4:ಆಳಂದ ತಾಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂಬ ಆರೋಪಿಸುತ್ತಾ ರೈತರು ಹಾಗೂ ಮಾಜಿ ಶಾಸಕ ಸುಭಾಷ ಗುತ್ತೇದಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಬುಧವಾರ ನಡೆದ ನಿರ್ದೇಶಕರ ಚುನಾವಣೆಯ ವೇಳೆ ಬೂತ್ ಕ್ರ. 01 ರಲ್ಲಿ ನಕಲಿ ಬ್ಯಾಲೆಟ್ ಪೇಪರ್ ಹಂಚುವ ವೇಳೆ ಚುನಾವಣಾ ಅಧಿಕಾರಿ ಸಿಕ್ಕಿಬಿದ್ದ ಘಟನೆ ಉದ್ಭವಿಸಿದ್ದು, ಇದನ್ನು ಉದ್ದೇಶಪೂರ್ವಕವಾಗಿ ಒಂದು ಗುಂಪಿಗೆ ಸಹಾಯ ಮಾಡುವ ಪ್ರಯತ್ನ ಎಂದು ರೈತರು ಮಾಜಿ ಶಾಸಕರು ಆರೋಪಿಸಿದ್ದಾರೆ.
ಕಾರ್ಖಾನೆಯ 350 ಮತದಾರರ ಹೆಚ್ಚಿನವರು ಆಡಳಿತ ಪಕ್ಷದ ಶಾಸಕರ ಬೆಂಬಲಿತ ಪ್ಯಾನೆಲ್‌ಗೆ ವಿರೋಧವಾಗಿ ಮತಹಾಕುವ ಸಾಧ್ಯತೆ ಇರುವುದರಿಂದ, ಶಾಸಕರ ಒತ್ತಡಕ್ಕೆ ತುತ್ತಾಗಿ ಚುನಾವಣಾ ಅಧಿಕಾರಿಗಳು ಅಕ್ರಮಕ್ಕೆ ಕೈಜೋಡಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಂದರ್ಭದಲ್ಲಿ ಕಾರ್ಖಾನೆ M.D. ಸಂಕು ಕರ್ಪೂರ ಮತ್ತು ಮೇಲ್ವಿಚಾರಕ ಶಿವಾನಂದ ಅಷ್ಟಗಿ ಸಹ ಚುನಾವಣಾ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಮಾಡಿ, ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಲು ಮನವಿ ಸಲ್ಲಿಸಲಾಗಿದೆ.
ಮತದಾರರನ್ನು ದಿಕ್ಕುತಪ್ಪಿಸಲು ಜನತಾ ಬಜಾರ್ ಚುನಾವಣೆಯ ಬ್ಯಾಲೆಟ್ ಪೇಪರ್ ಬಳಸಿದ ವಿಚಾರಕ್ಕೂ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಕ್ರಮಕ್ಕೆ ಹೊಣೆಗಾರರಾದ ಅಧಿಕಾರಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ರೈತರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮುಖ್ಯ ಬೇಡಿಕೆಗಳು:
1. ಚುನಾವಣೆ, ಕಾರ್ಖಾನೆ ಆವರಣದಲ್ಲಿಯೇ ನಡೆಸಬೇಕು
2. ಕಲಬುರಗಿಯಲ್ಲಿ ನಿಲ್ಲಿಸಿರುವ ಸಕ್ಕರೆ ಕಾರ್ಖಾನೆ ತಕ್ಷಣ ಪುನರಾರಂಭ ಮಾಡಬೇಕು
3. ಮತದಾರರ ಪಟ್ಟಿಯನ್ನು ಮರು ಪರಿಶೀಲನೆ ಮಾಡಬೇಕು
4. ಹೊಸ ಹೆಸರು ಸೇರಿಸಲು ಕಾಲಾವಕಾಶ ನೀಡಬೇಕು
5. ಶೇರು ಮೌಲ್ಯದ ವ್ಯತ್ಯಾಸ ಹಣ ಪಾವತಿಸಿದ ರೈತರಿಗೆ ಮತದಾನ ಹಕ್ಕು ನೀಡಬೇಕು
6. ಚುನಾವಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು
ರೈತರ ಮನವಿಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಮಾಜಿ ಶಾಸಕ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ, ಹೋರಾಟಗಾರ ಹಿರೇಮಠ ಸೇರಿದಂತೆ ನೂರಾರು ಜನ ರೈತರು ಮುಖಂಡರು ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ಮಾಡಿದರು
