ಹಿಂದೂ ಸಮಾಜದ ಏಕತೆಗಾಗಿ ನಾರಾಯಣ ಗುರು ಸಂದೇಶ ಅನುಷ್ಠಾನವಾಗಲಿ : ಶ್ರೀಪಾದ ನಾಯಕ್
ಶ್ರೀ ಕ್ಷೇತ್ರ ಗೆಜ್ಜಗಿರಿ ಯಾತ್ರಿ ನಿವಾಸ ಶಿಲಾನ್ಯಾಸ ಕಾರ್ಯಕ್ರಮ:
ಹಿಂದೂ ಸಮಾಜದ ಏಕತೆಗಾಗಿ ನಾರಾಯಣ ಗುರು ಸಂದೇಶ ಅನುಷ್ಠಾನವಾಗಲಿ : ಶ್ರೀಪಾದ ನಾಯಕ್
ಪುತ್ತೂರು : ಹಿಂದೂ ಸಮಾಜದ ಏಕತೆಗಾಗಿ ನಾರಾಯಣ ಗುರುಗಳ ಸಂದೇಶ ಅನುಷ್ಠಾನಗೊಳ್ಳಬೇಕು ಎಂದು ಕೇಂದ್ರ ಸಚಿವರಾದ ಶ್ರೀಪಾದ ಯಾಸ್ಸೋ ನಾಯಕ್ ಅಭಿಪ್ರಾಯ ಪಟ್ಟರು.
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಆದಿ ಧೂಮಾವತಿ ಕ್ಷೇತ್ರ,
ದೇಯಿ ಬೈದ್ಯತಿ, ಕೋಟಿ ಚೆನ್ನಯ ಮೂಲ ಸ್ಥಾನದಲ್ಲಿ ನೂತನವಾಗಿ ನಿರ್ಮಿಸಲುದ್ದೇಶಿಸಿದ ಯಾತ್ರಿ ನಿವಾಸಕ್ಕೆ ನ 23ರಂದು ಶಿಲಾನ್ಯಾಸ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಮತ್ತು ನಾರಾಯಣ ಗುರುಗಳ ಶತಮಾನೋತ್ಸವದ ಲೋಗೋ ಅನಾವರಣ ಮಾಡಿ ಮಾತನಾಡಿ ಹಿಂದೂ ಧರ್ಮದ ವಿರುದ್ಧ ಅನೇಕ ರೀತಿಯ ಪ್ರಹಾರ ನಡೆಯುತ್ತಿದ್ದು ಹಿಂದೂ ಸಮಾಜದ ಒಗ್ಗಟ್ಟಿನೊಂದಿಗೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಂದೇಶ ಸಮಾಜದಲ್ಲಿ ಅನುಷ್ಠಾನಗೊಂಡರೆ ಧರ್ಮರಕ್ಷಣೆ ,ಶಾಂತಿ ಸದಾಚಾರದೊಂದಿಗೆ ಸೇವಾ ಕಾರ್ಯ ಮಾಡಲು ಪ್ರೇರಣೆ ಒದಗುತ್ತದೆ. ತುಳು ನಾಡಿನ ಚರಿತ್ರೆಯಲ್ಲಿ ವೀರಪುರುಷರಾದ ಕೋಟಿ ಚೆನ್ನಯರ ಜೀವನ ಸಂದೇಶ ಹಾಗೂ ನಾರಾಯಣ ಗುರುಗಳ ಸಮಾನತೆಯ ಸಂದೇಶ ಅತ್ಯಂತ ಶ್ರೇಷ್ಠವಾಗಿದೆ. ಇಂತಹ ಮಹಾನ್ ಸಂದೇಶ ಬಿತ್ತರಿಸಲು ಗೆಜ್ಜೆಗಿರಿ ಕ್ಷೇತ್ರದ ಮೂಲಕ ಸಾಧ್ಯವಾಗಲಿ. ಆ ಮೂಲಕ ಶಾಂತಿ ಸಮೃದ್ಧಿ ಬೆಳಗಲಿ. ಕ್ಷೇತ್ರಗಳು ಕೇವಲ ಪೂಜೆಗೆ ಸೀಮಿತಗೊಳ್ಳದೆ ಶಿಕ್ಷಣ ಮತ್ತು ಸೇವಾ ಕಾರ್ಯವನ್ನು ಮಾಡಿ ಸಮಾಜವನ್ನು ಒಗ್ಗಟ್ಟಿನಿಂದ ಕಟ್ಟುವಂತಾಗಲಿ ಎಂದು ಶ್ರೀಪಾದ ನಾಯಕ್ ಹೇಳಿದರು.
*ಗುರುಗಳ ಮತ್ತು ಕೋಟಿ ಚೆನ್ನಯರ ಆದರ್ಶದಲ್ಲಿ ಶಿಕ್ಷಣವಂತರಾಗಿ : ಬಿ.ಕೆ ಹರಿಪ್ರಸಾದ್*
ಬಿಲ್ಲವರ ಸಾಂಸ್ಕೃತಿಕ ನಾಯಕರಾದ ಕೋಟಿ ಚೆನ್ನಯರ ಜನ್ಮ ಭೂಮಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಶ್ಲಾಘನೀಯ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್ ಹೇಳಿದರು.
ಶಿಲಾನ್ಯಾಸದ ನಂತರ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ನಾರಾಯಣ ಗುರುಗಳ ಆದರ್ಶದಿಂದ ಪ್ರೇರಣೆ ಪಡೆದು ಶಿಕ್ಷಣವನ್ನು ಹೊಂದಿ ಅಭಿವೃದ್ಧಿಯನ್ನು ಸಾಧಿಸಲು ಮುಂದಾಗ ಬೇಕಾಗಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದ ಗುರುಗಳ ತತ್ವದಂತೆ ಕೇರಳದಲ್ಲಿ ಎಸ್ ಎನ್‌ಡಿಪಿ ಯು ಸಮಾರು 117 ಸಂಸ್ಥೆಗಳನ್ನು ಸ್ಥಾಪಿಸಿ ಕೇರಳವನ್ನು ಸಾಕ್ಷರತೆಯಲ್ಲಿ ಶೇಕಡ ನೂರರಷ್ಟು ಮಾಡಿದ ಹೆಗ್ಗಳಿಕೆ ಹೊಂದಿದೆ. ಗುರುಗಳ ತತ್ವ ಹಾಗೂ ಶಿಕ್ಷಣದ ಮಹತ್ವವನ್ನು ಸಾರಲು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಾರಾಯಣಗುರು ಅಧ್ಯಯನ ಪೀಠ ಪ್ರಾರಂಭಿಸಿ ಮುಖ್ಯಮಂತ್ರಿಗಳ ನಿಧಿಯಿಂದ ಈಗಾಗಲೇ ಮೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.ಮುಂದಿನ ಡಿಸೆಂಬರ್ ಮೂರಕ್ಕೆ ಇದರ ವಿಸ್ತೃತ ಕಟ್ಟಡದ ಉದ್ಘಾಟನೆಯಾಗಲಿದೆ. ನಾರಾಯಣ ಗುರುಗಳು ಹಾಗೂ ಗಾಂಧೀಜಿಯವರ ಭೇಟಿಯ ಮತ್ತು ಗುರುಗಳ ನೇತೃತ್ವದಲ್ಲಿ ನಡೆದ ಸರ್ವಧರ್ಮ ಸಮ್ಮೇಳನಕ್ಕೆ ನೂರು ವರ್ಷ ಪೂರ್ಣಗೊಂಡ ಅಂಗವಾಗಿ ಈ ಮಹಾಪ್ರಸ್ಥಾನ ಕಾರ್ಯಕ್ರಮ ನಡೆಯಲಿದೆ. ಗಾಂಧೀಜಿಯವರ ಅಸ್ಪೃಶ್ಯತಾ ಆಂದೋಲನಕ್ಕೆ ಕೂಡ ನಾರಾಯಣ ಗುರುಗಳು ಪ್ರೇರಣೆಯಾಗಿದ್ದು ಅವರು ಹರಿಜನ ಪತ್ರಿಕೆ ಪ್ರಾರಂಭಿಸಲು ಗುರುಗಳು ಕಾರಣಕರ್ತರಾಗಿದ್ದಾರೆ. ದೇವಸ್ಥಾನ ಪ್ರವೇಶಕ್ಕಾಗಿ ಕೇರಳದಲ್ಲಿ ಹಿಂದುಳಿದ ವರ್ಗದ ಸುಮಾರು 1800 ಜನರು ಪ್ರಾಣತ್ಯಾಗ ಮಾಡಿದ್ದರು.ಆದರೆ ಗುರುಗಳು ಯಾವುದೇ ಸಂಘರ್ಷವಿಲ್ಲದೆ ಈಳವರ ಶಿವ ದೇವಸ್ಥಾನವನ್ನು ಸ್ಥಾಪನೆ ಮಾಡಿ ಆರಾಧನಾ ಸ್ವಾತಂತ್ರ್ಯವನ್ನು ಕೊಟ್ಟರಲ್ಲದೆ "ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು" ಎಂಬ ವಿಶ್ವ ಸಂದೇಶವನ್ನು ಸಾರಿದರು. ಗುರುಗಳು ಮತ್ತು ಕೋಟಿ ಚೆನ್ನಯರ ಆದರ್ಶದಲ್ಲಿ ಸಮಾಜ ಮುಂದೆ ಸಾಗಬೇಕು. ಹಿಂದುಳಿದವರು ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹರಿಪ್ರಸಾದ್ ಹೇಳಿದರು.
*ಗೆಜ್ಜೆಗಿರಿಯಲ್ಲಿ ಪಾರಂಪರಿಕ ವೈದ್ಯಕೀಯ ಕೇಂದ್ರ: ಕ್ಯಾ.ಬ್ರಿಜೇಶ್ ಚೌಟ*
ತುಳುನಾಡಿನ ಸತ್ಯ ಧರ್ಮದ ಚಾವಡಿಯಾಗಿ ಬೆಳಗುತ್ತಿರುವ ಗೆಜ್ಜೆಗಿರಿ ಕ್ಷೇತ್ರವು ದೇಯಿ ಬೈದ್ಯೆತಿ, ಕೋಟಿ ಚೆನ್ನಯ, ನಾರಾಯಣ ಗುರುಗಳ ಸಂದೇಶ ಸಾರುವ ಮಹತ್ವದ ಶ್ರದ್ಧಾ ಕೇಂದ್ರವಾಗಿದೆ. ಹಿಂದೂ ಸಮಾಜದಲ್ಲಿ ದೇಗುಲ ಪ್ರವೇಶ ನಿಷೇಧದ ಸಂದರ್ಭದಲ್ಲಿ ನಾರಾಯಣ ಗುರುಗಳ ಹೋರಾಟದಿಂದ ಕ್ಷೇತ್ರ ನಿರ್ಮಾಣ ಮಾಡಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಪ್ರಯತ್ನಿಸಿದ ಮಹಾನ್ ಸಂತರು. ದೇಯಿ ಬೈದ್ಯೆತಿ ಆಯುರ್ವೇದ ವೈದ್ಯರಾಗಿದ್ದು ಅವರ ಹೆಸರಿನಲ್ಲಿ ಗೆಜ್ಜೆ ಗಿರಿಯಲ್ಲಿ ಪಾರಂಪರಿಕ ವೈದ್ಯಕೀಯ ಕೇಂದ್ರ ಆರಂಭಿಸಲು ಪ್ರಯತ್ನಿಸುವುದಲ್ಲದೆ ತನುಮನ ಧನದಿಂದ ಸಹಕರಿಸುವುದಾಗಿ ಲೋಕಸಭಾ ಸದಸ್ಯರಾದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕಾರ್ಯಕ್ರಮದಲ್ಲಿ ಯಾತ್ರಿ ನಿವಾಸ್ ಗೆ ಗುಜರಾತಿನ ಬರೋಡಾದ ಉದ್ಯಮಿ ದಯಾನಂದ ಬೊಂಟ್ರಾ ಶಿಲಾನ್ಯಾಸ ನೆರವೇರಿಸಿದರು. ಸೋಲೂರು ಮಠದ ಪೂಜ್ಯರಾದ ವಿಖ್ಯಾತಾನಂದ ಸ್ವಾಮೀಜಿ, ಶಿವಗಿರಿಯ ಪೂಜ್ಯ ಜ್ಞಾನತೀರ್ಥ ಸ್ವಾಮೀಜಿ, ಎನ್ ಟಿ ಪೂಜಾರಿ,ನವೀನ್ ಚಂದ್ರ ಸುವರ್ಣ, ಪ್ರತಿಭಾ ಕ
ಕುಳಾಯಿ, ಸೂರ್ಯಕಾಂತ ಸುವರ್ಣ, ಮಂಜುನಾಥ ಪೂಜಾರಿ ,ಲಕ್ಷ್ಮಿ ನರಸಯ್ಯ, ಹೇಮನಾಥ ಶೆಟ್ಟಿ ಕಾವು, ಸತೀಶ್ ಕುಮಾರ್ ಕೆಡಂಜಿಗುತ್ತು, ಲೋಕೇಶ್ ಕೋಟ್ಯಾನ್ ಹರೀಶ್ ಪೂಜಾರಿ ಗುಜರಾತ್, ರಕ್ಷಿತ್ ಶಿವರಾಂ, ಡಾ. ಸದಾನಂದ ಪೆರ್ಲ ಕಲಬುರಗಿ, ರವಿ ಚಿಲಿಂಬಿ, ಸಂಜೀವ ಪೂಜಾರಿ ಪೀತಾಂಬರ ಹೇರಾಜೆ, ಜಯಂತ ನಡಿ ಬೈಲು ಉಲ್ಲಾಸ್ ಕೋಟ್ಯಾನ್, ಸುಜಿತಾ ಬಂಗೇರ, ಸಂಜೀವ ಮಠಂದೂರ್, ದೀಪಕ್ ಕೋಟ್ಯಾನ್ ಪಿ ಸಿ ಮೋಹನ್, ನಾರಾಯಣ ಪೂಜಾರಿ ರೆಂಜ, ಡಾ. ಕೆ ಬಿ.ರಾಜಾರಾಮ್, ಮೋಹನ್ ಬಂಗೇರ, ಡಾ. ಸಂತೋಷ್ ಪೂಜಾರಿ ಬೈರಂಪಳ್ಳಿ, ಹರೀಶ್ ಡಿ ಸಾಲ್ಯಾನ್ ,ಜಯ ವಿಕ್ರಮ್, ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಸರ್ವರನ್ನು ಸ್ವಾಗತಿಸಿದರು.
*ಶಿಲಾನ್ಯಾಸದಲ್ಲಿ ಗಣ್ಯರ ಉಪಸ್ಥಿತಿ*
ಸುಮಾರು 35 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಶಿಲಾನ್ಯಾಸ ಸಮಾರಂಭವು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಗುಜರಾತ್ ಬರೋಡದ ಉದ್ಯಮಿ ದಯಾನಂದ ಬೊಂಟ್ರಾ ಶಿಲಾನ್ಯಾಸ ನೆರವೇರಿಸಿದರು. ಪೂಜ್ಯ ವಿಖ್ಯಾತಾನಂದ ಶ್ರೀ, ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ಈಡಿಗ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಆರ್ ಪದ್ಮರಾಜ್, ಸುಜಿತಾ ಬಂಗೇರ, ವಾಸ್ತು ವಿನ್ಯಾಸಕಾರ ಪ್ರಮಲ್ ಕುಮಾರ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.ದಿನೇಶ್ ರಾಯಿ ನಿರೂಪಿಸಿದರು.
ಶ್ರೀಪಾದ ನಾಯಕ್ ಮುಖ್ಯಮಂತ್ರಿಯಾಗಲಿ
ಕೇಂದ್ರ ಸಚಿವ ಶ್ರೀಪಾದ ನಾಯಕ್ ಗೋವಾದ ಬಿಲ್ಲವರು. ಆರೇಳು ಸಲ ಎಂಪಿ ಯಾಗಿ ಜನಪ್ರಿಯರು. ನಮ್ಮ ಜನಾರ್ಧನ ಪೂಜಾರಿಯವರ ಹಾಗೆ ಪ್ರಾಮಾಣಿಕರು ಮತ್ತು ಶುದ್ಧ ವ್ಯಕ್ತಿತ್ವದವರು. ನಾನು ಗೋವಾ ಉಸ್ತುವಾರಿ ಇದ್ದಾಗಲೂ ಅವರನ್ನು ಬಲ್ಲೆ.ಆದರೆ ಅವರು ಬಿಜೆಪಿ ನಾನು ಕಾಂಗ್ರೆಸ್. ಪಕ್ಷ ಬೇರೆ ಬೇರೆಯಾದರೂ ಹಿಂದುಳಿದ ವರ್ಗದ ಸಮುದಾಯದಲ್ಲಿ ಹುಟ್ಟಿ ಇಷ್ಟು ಎತ್ತರದ ಸ್ಥಾನಕ್ಕೆ ಬೆಳೆದಿರುವುದು ಸಾಮಾನ್ಯದ ಮಾತಲ್ಲ. ಅತ್ಯಂತ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿತ್ವದ ಶ್ರೀಪಾದ ನಾಯಕ್ ಮುಖ್ಯಮಂತ್ರಿ ಆಗಲು ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿದವರು. ಆದರೆ ಇನ್ನೂ ಕೂಡ ಕೇಂದ್ರದಲ್ಲಿ ರಾಜ್ಯ ಸಚಿವರಾಗಿ ಮಾತ್ರ ಇದ್ದಾರೆ.ಇವರಿಗೆ ಗೆಜ್ಜೆಗಿರಿ ಶ್ರೀಕ್ಷೇತ್ರದ ದರ್ಶನದಿಂದ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸುವೆ.
ಬಿ ಕೆ ಹರಿಪ್ರಸಾದ್ ವಿಧಾನ ಪರಿಷತ್ ಸದಸ್ಯರು
