ಭಾವಿ ಪರ್ಯಾಯಪೀಠವೇರುವ ಶ್ರೀಶೀರೂರು ಮಠದ ಶ್ರೀಗಳ ಬೆಂಗಳೂರು ಪ್ರವಾಸ
ಭಾವಿ ಪರ್ಯಾಯಪೀಠವೇರುವ ಶ್ರೀಶೀರೂರು ಮಠದ ಶ್ರೀಗಳ ಬೆಂಗಳೂರು ಪ್ರವಾಸ
2026ರ ಜನವರಿಯಲ್ಲಿ ಉಡುಪಿಯ ಪುತ್ತಿಗೆ ಮಠದ ಪರ್ಯಾಯ ಮುಗಿದು ಶೀರೂರು ಮಠದ ಪರ್ಯಾಯ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥರು ದೇಶದಲ್ಲೆಲ್ಲಾ ಪ್ರವಾಸ ಕೈಗೊಂಡು ಪರ್ಯಾಯಕ್ಕೆ ಶ್ರೀಕೃಷ್ಣನ ದರ್ಶನಕ್ಕೆ ಭಕ್ತಾದಿಗಳಿಗೆ ಆಹ್ವಾನ ನೀಡುತ್ತಲಿದ್ದಾರೆ.
ಈ ಬಾರಿಯ ಪರ್ಯಾಯ ಶ್ರೀವೇದವರ್ಧನ ತೀರ್ಥರಿಗೆ ಮೊದಲ ಪರ್ಯಾಯವಾಗಿದೆ. ಇತ್ತೀಚಿಗೆ ಬೆಂಗಳೂರಿನ ವಿದ್ಯಾಮಾನ್ಯನಗರದ ಫಲಿಮಾರು ಮಠದ ಶ್ರೀಪ್ರಸನ್ನವೆಂಕೇಶ್ವರ ದೇವಾಲಯಕ್ಕೆ ಭೇಟಿ ನೀಡಿ ತೊಟ್ಟಿಲ ಪೂಜೆ, ಭೂತರಾಜರ ಪೂಜೆಯನ್ನು ನೆರವೇರಿಸಿ ಅಲ್ಲಿ ನೆರದಿದ್ದ ಭಕ್ತಾದಿಗಳಿಗೆ ಅನುಗ್ರಹ ಸಂದೇಶವನ್ನು ನೀಡಿದರು.
ರಾಮದೇವರ, ಕೃಷ್ಣನ ಹನುಮಂತನ, ಮಧ್ವಾಚಾರ್ಯರ ಮಹಿಮೆಯನ್ನು ಅವರ ಅನುಗ್ರಹವನ್ನು ಪಡೆಯುವ ಕುರಿತು ಪ್ರವಚನವನ್ನು ಮಾಡಿದರು. ದೇವರ ಅನುಗ್ರಹ ಪಡೆಯಲು ಪರಮಾತ್ಮನ ಕುರಿತು ಮಧ್ವಾಚಾರ್ಯರು ಹೇಳಿದ ಗ್ರಂಥಗಳನ್ನು ಓದಬೇಕು ತಿಳಿಯಬೇಕು ಪಾರಾಯಣವನ್ನು ಮಾಡಬೇಕು, ಕಲಿಯುಗದಲ್ಲಿ ನಾಮ ಸ್ಮರಣೆಯ ಮಹತ್ವವನ್ನು ಹೇಳಿ ನಾಮ ಸ್ಮರಣೆಯನ್ನು ಮಾಡುವುದು ಹೇಗೆ ಪ್ರಮುಖವೋ ಅದರಂತೆ ನಿತ್ಯಕರ್ಮವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ಹೇಳಿದರು.
ವಿದ್ಯಾಮಾನ್ಯನಗರ ಫಲಿಮಾರು ಮಠದ ಮ್ಯಾನೇಜರ್ ಶ್ರೀ ಸೇತುಮಾಧವ ಅವರು ಎಲ್ಲ ಕಾರ್ಯಕ್ರಮವನ್ನು ಆಯೋಜನೆ ಯನ್ನು ಮಾಡಿದ್ದರು. ವಿದ್ಯಾಮಾನ್ಯನಗರದ ನೆಮ್ಮದಿಧಾಮ ವೃದ್ಧಾಶ್ರಮ ಮತ್ತು ಹಲವು ಭಕ್ತರ ಮನೆಗೆ ಭೇಟಿ ನೀಡಿ ಶ್ರೀವೇದವರ್ಧನ ತೀರ್ಥರು ಆಶೀರ್ವದಿಸಿದರು.
