ಜಮಖಂಡಿ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಿಂದ ‘ಡಾ. ವೀಣಾ ಬನ್ನಂಜೆ ಸೇರಿದಂತೆ 4 ಜನ ಸಾಧಕರಿಗೆ ಅಲ್ಲಮ ಪುರಸ್ಕಾರ’
“ಜಮಖಂಡಿ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಿಂದ ‘ಡಾ. ವೀಣಾ ಬನ್ನಂಜೆ ಸೇರಿದಂತೆ 4 ಜನ ಸಾಧಕರಿಗೆ ಅಲ್ಲಮ ಪುರಸ್ಕಾರ’
ಡಾ. ನೀಲಗಿರಿ ತಳವಾರ: ಡಾ. ವೀಣಾ ಬನ್ನಂಜೆ: ಡಾ. ಟಿ.ಎನ್. ವಾಸುದೇವಮೂರ್ತಿ: ಶ್ರೀ ಪ್ರಕಾಶ ಗಿರಿಮಲ್ಲನವರ ರವರಿಗೆ ‘ಅಲ್ಲಮ ಪುರಸ್ಕಾರ’ ಪ್ರಶಸ್ತಿ
ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಇವರು ತಮ್ಮ ಶಿಕ್ಷಣ ಸಂಸ್ಥೆಯಾದ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ (ರಿ.), ಜಮಖಂಡಿಯ ಮೂಲಕ ೨೦೨೫ರ ಸಾಲಿನಿಂದ ನೂತನವಾಗಿ ಕೊಡಮಾಡುತ್ತಿರುವ ‘ಅಲ್ಲಮ ಪುರಸ್ಕಾರ’ ಪ್ರಶಸ್ತಿಯನ್ನು ನವೆಂಬರ್ ೩೦, ೨೦೨೫ ರಂದು ವಿತರಿಸಲಾಗುತ್ತಿದೆ. ಈ ಪ್ರಶಸ್ತಿಯು ೧೦,೦೦೦/- ರೂ.ಗಳ ನಗದು ಮತ್ತು ಸ್ಮರಣಿಕೆ ಹಾಗೂ ಪುರಸ್ಕಾರ ಪತ್ರವನ್ನು ಹೊಂದಿರುತ್ತದೆ. ಪ್ರಸ್ತುತ ಪ್ರಶಸ್ತಿಗೆ ಭಾಜನರಾದವರು: ಡಾ. ನೀಲಗಿರಿ ತಳವಾರ: ಡಾ. ವೀಣಾ ಬನ್ನಂಜೆ: ಡಾ. ಟಿ.ಎನ್. ವಾಸುದೇವಮೂರ್ತಿ: ಶ್ರೀ ಪ್ರಕಾಶ ಗಿರಿಮಲ್ಲನವರ :
೧. ಡಾ. ನೀಲಗಿರಿ ತಳವಾರ: ಇವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರೀಡರ್ (೧೯೯೪-೨೦೦೩) ಹಾಗೂ ಪ್ರೊಫೆಸರ್ (೨೦೦೩ ರಿಂದ ೨೦೨೧) ಆಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ (೧೯-೦೮-೨೦೧೭ ರಿಂದ ೨೯-೦೭-೨೦೧೯), ಕನ್ನಡ ಸಾಹಿತ್ಯ ಪರಿಷತ್ತು (ಮೇ ೨೦೧೮ ರಿಂದ ಮಾರ್ಚ್ ೨೦೨೧), ಸದ್ಯ ಭಾರತೀಯ ಭಾಷಾ ಸಂಸ್ಥಾನ ಶಾಸ್ತ್ರಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಪಿಎಂಇಬಿ ಬೊರ್ಡ್ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಚನ ಸಾಹಿತ್ಯದಲ್ಲಿ ವಿಶೇಷವಾದ ಪರಿಣತಿಯನ್ನು ಪಡೆದಿರುತ್ತಾರೆ.
೨. ಡಾ. ವೀಣಾ ಬನ್ನಂಜೆ: ಇವರು ಅಧ್ಯಾತ್ಮ ಸಾಧಕಿ, ಬಹುಮುಖಿ ಸುಜ್ಞಾನಿ, ಬರಹಗಾರ್ತಿ ಹಾಗೂ ಪ್ರಭಾವಿ ಉಪನ್ಯಾಸಕಿ. ಅಧ್ಯಾತ್ಮ ಕ್ಷೇತ್ರದ ಹಾದಿಯಲ್ಲಿ ನಡೆಯುತ್ತಾ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನ ಪೀಳಿಗೆಯ ಮಹಿಳಾ ಉಪನ್ಯಾಸಕಿಯರಲ್ಲಿ ಅಗ್ರ ಶ್ರೇಣಿಯಲ್ಲಿರುವ ವೀಣಾ ಬನ್ನಂಜೆಯವರು ಶ್ರೀಮದ್ಭಾಗವತ, ಭಗವದ್ಗೀತೆ, ರಾಮಾಯಣ, ಮಹಾಭಾರತ ಗ್ರಂಥಗಳ ಬಗ್ಗೆ ಮಾತ್ರವಲ್ಲದೆ ಅಷ್ಟೇ ನಿರರ್ಗಳವಾಗಿ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿಯವರಂಥಾ ಸಾಧಕರ ಸಂತರ ಬಗ್ಗೆಯೂ ನಿಖರವಾದ ಸಂಶೋಧನೆಯನ್ನು ನಡೆಸಿ ಅದ್ಭುತವಾದ ಉಪನ್ಯಾಸಗಳನ್ನು ನೀಡುವ ವಿರಳ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
೩. ಡಾ. ಟಿ.ಎನ್. ವಾಸುದೇವಮೂರ್ತಿ: ಇವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಸ್ವಭಾವ್ ಅವರಿಂದ ದೀಕ್ಷೆ ಪಡೆದಿರುವ ಇವರು ಓಶೋನ ಹಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಪ್ರಸ್ತುತ ಇವರು ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
೪. ಶ್ರೀ ಪ್ರಕಾಶ ಗಿರಿಮಲ್ಲನವರ : ಇವರು ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ 'ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ' (ವಚನ ಅಧ್ಯಯನ ಕೇಂದ್ರ)ದಲ್ಲಿ ೨೦ ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೂ ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಿಂದ ನಿಡುಮಾಮಿಡಿ ಮಠದಲ್ಲಿ ಪ್ರಾರಂಭವಾದ ಜ.ಚ.ನಿ.ಅಧ್ಯಯನ ಪೀಠ ಮತ್ತು ಸಂಶೋಧನ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದಿಂದ ಪ್ರಕಟವಾಗುವ ‘ಸತ್ಯಶುದ್ಧಕಾಯಕ’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜಮಖಂಡಿಯ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಸಲಹೆಗಾರ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ತಿಳಿಸಿದರು.
